More

    ವಿಘ್ನನಿವಾರಕನಿಗೆ ಸಂಭ್ರಮದ ವಿದಾಯ, ಡಿಜೆ ಸದ್ದಿಗೆ ಕುಣಿದು ಕುಪ್ಪಳಿಸಿದ ಯುವಕರು

    ಹೊಸಪೇಟೆ: ಗಣೇಶ ಚತುರ್ಥಿಯಂದು ಪ್ರತಿಷ್ಠಾಪನೆಗೊಂಡು, ಐದು ದಿನ ಆರಾಧಿಸಲ್ಪಟ್ಟ ವಿನಾಯಕನನ್ನು ಸಂಭ್ರಮ, ಸಡಗರದೊಂದಿಗೆ ಭಾನುವಾರ ವಿಸರ್ಜಿಸಲಾಯಿತು.

    ನಗರ ಸೇರಿದಂತೆ ಜಿಲ್ಲಾದ್ಯಂತ ಗಣೇಶ ವಿಸರ್ಜನೆ ಮೆರವಣಿಗೆಯಲ್ಲಿ ವಿವಿಧ ವಾದ್ಯಮೇಳ, ಡಿಜೆ ಹಾಗೂ ಧ್ವನಿವರ್ಧಕಗಳ ಅಬ್ಬರದೊಂದಿಗೆ ಸಾಗಿದ ಮೆರವಣಿಗೆಯುದ್ದಕ್ಕೂ ಕುಣಿದು ಕುಪ್ಪಳಿಸಿದರು. ಮೇನ್ ಬಜಾರ್, ದೊಡ್ಡ ಮಸೀದಿ, ಮೂರಂಗಡಿ ವೃತ್ತ, ಪುಣ್ಯಮೂರ್ತಿ ವೃತ್ತ ಸೇರಿದಂತೆ ಪ್ರಮುಖ ವೃತ್ತಗಳಲ್ಲಿ ವಿನಾಯಕ ಮಂಡಳಿಗಳು ಬಾಣ ಬಿರುಸುಗಳನ್ನು ಬಿಟ್ಟು ಸಂಭ್ರಮಿಸಿದರು.

    ಅದರಲ್ಲೂ ದೊಡ್ಡ ಮಸೀದಿ ಸಮೀಪಕ್ಕೆ ಬರುತ್ತಿದ್ದಂತೆ ಮೆರವಣಿಗೆಗಳು ಇನ್ನಷ್ಟು ರಂಗು ಪಡೆಯುತ್ತಿದ್ದವು. ಡಬಲ್ ಸೌಂಡ್, ಹತ್ತಾರು ಅಡಿ ಉದ್ದದ ಪಟಾಕಿ ಸರಗಳನ್ನು ಸುಟ್ಟು, 15- 20 ನಿಮಿಷಗಳ ಕಾಲ ಸಿಳ್ಳೆ, ಕೇಕೆ ಹಾಕಿ ಕುಣಿದು ಕುಪ್ಪಳಿಸಿದರು.

    12 ಗಂಟೆ ನಂತರ ಡಿಜೆ ಬಂದ್: ಸುಪ್ರೀಂ ಕೋರ್ಟ್ ಆದೇಶದನ್ವಯ ಜಿಲ್ಲಾ ಪೊಲೀಸ್ ಇಲಾಖೆ ಸೀಮಿತ ಅವಧಿವರೆಗೆ ಡಿಜೆ ಬಳಕೆಗೆ ಅವಕಾಶ ನೀಡಿದ್ದರಿಂದ ಬಹುತೇಕ ಎಲ್ಲ ಗಣೇಶ ಮೂರ್ತಿಗಳ ಮೆರವಣಿಗೆಗಳು ಕಳೆಗಟ್ಟಿದ್ದವು. ಆದರೆ, ರಾತ್ರಿ 12 ಗಂಟೆ ಸಮಯದ ನಂತರ ಪೊಲೀಸರ ಸೂಚನೆ ಮೇರೆಗೆ ಬಹುತೇಕ ಡಿಜೆಗಳ ಸದ್ದುಗದ್ದಲ ಸ್ಥಗಿತಗೊಂಡವು. ಇನ್ನೂ ಗಂಟೆಗಳ ಕಾಲ ಕುಣಿದು ಕುಪ್ಪಳಿಸುವ ಹುಮ್ಮಸ್ಸಿನಲ್ಲಿದ್ದ ಯುವಕರಿಗೆ ನಿರಾಶೆಯಾದರೂ, ಕಾನೂನು ಕ್ರಮದ ಹೆದರಿಕೆಯಿಂದ ಗಜಾನನ ಮಂಡಳಿಗಳು ಶಾಂತಿಯುತವಾಗಿ ಕಾಲವೆಯತ್ತ ಸಾಗಿದವು.

    ರಾರಾಜಿಸಿದ ರಾಷ್ಟ್ರ ನಾಯಕರ ಭಾವಚಿತ್ರ

    ಗಣೇಶ ಮೆರವಣಿಗೆಯಲ್ಲಿ ಅನೇಕ ಕಡೆ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್, ವೀರಸಾರ್ವಕರ್ ಹಾಗೂ ಪುನೀತ್ ರಾಜಕುಮಾರ್ ಭಾವಚಿತ್ರಗಳನ್ನು ಹಿಡಿದು ಕುಣಿದು ಸಂಭ್ರಮಿಸಿದರು. ಇಲ್ಲಿನ ಸಾರಿಗೆ ಘಟಕದಲ್ಲಿ ಪ್ರತಿಷ್ಠಾಪಿಸಿದ್ದ ಗಣೇಶ ಮೂರ್ತಿಯನ್ನು ಇರಿಸಲು ವಿಶೇಷವಾಗಿ ವಿನ್ಯಾಸಗೊಳಿಸಿದ್ದ ಬಸ್ ಮೆರವಣಿಗೆಯಲ್ಲಿ ಗಮನ ಸೆಳೆಯಿತು.

    ಪೊಲೀಸರ ವಿರುದ್ಧ ಸಮಿತಿ ಸದಸ್ಯರ ಆಕ್ರೋಶ
    ರಾತ್ರಿ 12 ಗಂಟೆಯಾಗಿದ್ದರಿಂದ ಶಾಂತಿಯುತವಾಗಿ ಮೆರವಣಿಗೆ ನಡೆಸಬೇಕು ಎಂಬ ನಿಯಮ ಮೀರಿದ ಚಿತ್ರಕೇರಿ ಗಣೇಶ ಮೂರ್ತಿಯ ಡಿಜೆಯನ್ನು ಮೂರಂಗಡಿ ವೃತ್ತದಲ್ಲಿ ಪೊಲೀಸರು ವಶಕ್ಕೆ ಪಡೆದುಕೊಂಡರು. ಇದರಿಂದ ಆಕ್ರೋಶಗೊಂಡ ಸಮಿತಿ ಸದಸ್ಯರು, ಗಣೇಶ ಮೆರವಣಿಗೆಯನ್ನು ಟೌನ್‌ಪೊಲೀಸ್ ಠಾಣೆಗೆ ಸಾಗಿಸಲು ಮುಂದಾದರು. ಈ ವೇಳೆ ಪೊಲೀಸರು ಮತ್ತು ಸಮಿತಿ ಸದಸ್ಯರ ಮಧ್ಯೆ ಮಾತಿಗೆ ಮಾತು ಬೆಳೆಯಿತು. ಈ ವೇಳೆ ಮಧ್ಯೆ ಪ್ರವೇಶಿಸಿದ ಸಿಪಿಐ ಜಯಪ್ರಕಾಶ, ಶ್ರೀನಿವಾಸ ಮೇಟಿ ಸಮಿತಿಯವರ ಮನವೊಲಿಸಿ ವಿಸರ್ಜನೆಗೆ ಒಪ್ಪಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts