More

    ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ಸಿಗಲಿ

    ವೀರೇಂದ್ರ ನಾಗಲದಿನ್ನಿ
    (ಶ್ರೀಕೃಷ್ಣ ದೇವರಾಯ ವೇದಿಕೆ)

    ಹೊಸಪೇಟೆ : ಕನ್ನಡಿಗರ ಅಸ್ಮಿತೆಯಾಗಿರುವ ಕನ್ನಡ ಸಾಹಿತ್ಯದ ಕಾರ್ಯಚಟುವಟಿಕೆ ಗಳು ನಗರ ಕೇಂದ್ರಿತವಾಗಿದ್ದು, ಅವು ಗ್ರಾಮೀಣ ಪ್ರದೇಶಕ್ಕೂ ವಿಸ್ತರಣೆಯಾಗಬೇಕು. ಉದ್ಯೋಗಾವಕಾಶಗಳಲ್ಲಿ ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ಹೆಚ್ಚಿನ ಮೀಸಲಾತಿ ದೊರೆಯಬೇಕು. ನಾಡು- ನುಡಿ ಪರಂಪರೆ ಕುರಿತು ಪ್ರತಿಯೊಬ್ಬರಲ್ಲೂ ಅಭಿಮಾನ ಮೇಲ್ಪಂಕ್ತಿ ಹಾಕಬೇಕೆಂದು ಸಮ್ಮೇಳನದ ಸರ್ವಾಧ್ಯಕ್ಷ ಡಾ.ಎಚ್. ಬಾಲರಾಜು ಅಭಿಪ್ರಾಯಪಟ್ಟರು.

    ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನಿಂದ ನಗರದ ಪುನೀತ್ ರಾಜ್‌ಕುಮಾರ್ ಜಿಲ್ಲಾ ಕ್ರೀಡಾಂಗಣದಲ್ಲಿ ಶನಿವಾರ ಏರ್ಪಡಿಸಿದ್ದ ನಾಲ್ಕನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿ ಅವರು ಮಾತನಾಡಿ, ಕಸಾಪ ಸಾಹಿತ್ಯಿಕವಾಗಿ ಹೆಚ್ಚೆಚ್ಚು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಈ ಭಾಗದ ಜನರ ಬದುಕು, ಬವಣೆಗಳಿಗೆ ದಾರಿ ದೀಪವಾಗಬೇಕು. ಕವಿಗಳು, ಬರಹಗಾರರು ಈ ದೆಸೆಯಲ್ಲಿ ಕ್ರಿಯಾಶೀಲರಾಗಬೇಕು ಎಂದರು.

    ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ಸಿಗಲಿತಾಲೂಕಿನಲ್ಲಿ ಸರ್ಕಾರಿ 332 ಕನ್ನಡ ಶಾಲೆಗಳಿಗಿದ್ದು, ಅನುದಾನಿತ 31 ಹಾಗೂ 251 ಖಾಸಗಿ ಶಾಲೆಗಳಿವೆ. ಸರ್ಕಾರಿ ಶಾಲೆಯಲ್ಲಿ 42,955, ಅನುದಾನಿತ 7,898 ಹಾಗೂ 35,282 ಮಕ್ಕಳು ಖಾಸಗಿ ಶಾಲೆಯಲ್ಲಿ ಕಲಿಯುತ್ತಿದ್ದಾರೆ. ಪೋಷಕರ ಆಂಗ್ಲ ಭಾಷೆ ವ್ಯಾಮೋಹ ಇದಕ್ಕೆ ಕಾರಣವಾಗಿರಬಹುದು. ಈ ಹಿನ್ನೆಲೆಯಲ್ಲಿ ಖಾಸಗಿ ಶಾಲಾ ಮಕ್ಕಳಿಗೆ ದೊರೆಯುವ ಕಲಿಕೆ ಸರ್ಕಾರಿ ಶಾಲೆಯಲ್ಲೂ ದೊರೆಯುವಂತಾಗಬೇಕು. ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಹಳೇ ವಿದ್ಯಾರ್ಥಿಗಳು ಕೈಜೋಡಿಸಬೇಕು ಎಂದು ಕರೆೆ ನೀಡಿದರು. ತಾಲೂಕಿನ ಪ್ರಮುಖ ಹೋಬಳಿಗಳಲ್ಲಿ ಸರ್ಕಾರಿ ಪಪೂ ಕಾಲೇಜುಗಳ ಸ್ಥಾಪನೆಯಿಂದ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಅನುಕೂಲ. ಈ ಭಾಗದ ವಿದ್ಯಾರ್ಥಿಗಳ ವೈದ್ಯಕೀಯ ಮತ್ತು ತಾಂತ್ರಿಕ ಶಿಕ್ಷಣದ ಕನಸು ಈಡೇರಿಸಲು ಸರ್ಕಾರಿ ತಾಂತ್ರಿಕ ಮಹಾವಿದ್ಯಾಲಯ ಮತ್ತು ವೈದ್ಯಕೀಯ ಮಹಾವಿದ್ಯಾಲಯಗಳನ್ನು ಸ್ಥಾಪಿಸಬೇಕೆಂದು ಒತ್ತಾಯಿಸಿದರು.

    ತುಂಗಭದ್ರಾ ಜಲಾಶಯದ ಮೂಲಕ ಈ ಭಾಗದ ಬಯಲು ಸೀಮೆಗೆ ನೀರುಣಿಸಲು, ಕೆರೆಗಳಿಗೆ ನೀರು ತುಂಬಿಸಲು ಮುಂದಾಗಬೇಕು. ಇದರಿಂದ ಕೃಷಿ ಉತ್ತೇಜನಗೊಳ್ಳುತ್ತದೆ. ವಿಶ್ವವಿಖ್ಯಾತ ಹಂಪಿಗೆ ದೇಶ-ವಿದೇಶಗಳಿಂದ ಪ್ರವಾಸಿಗರು ಆಗಮಿಸುವ ಹಿನ್ನೆಲೆಯಲ್ಲಿ ಹೊಸಪೇಟೆಯಲ್ಲಿ ವಿಶ್ವದರ್ಜೆಯ ಮೂಲ ಸೌಕರ್ಯಗಳನ್ನು ಒದಗಿಸುವುದು ಸ್ತುತ್ಯಾರ್ಹ ಎಂದರು.

    ಕಸಾಪ ಜಿಲ್ಲಾಧ್ಯಕ್ಷ ನಿಷ್ಠಿ ರುದ್ರಪ್ಪ, ತಾಲೂಕು ಅಧ್ಯಕ್ಷ ನಾಯಕರ ಹುಲುಗಪ್ಪ, ಡಾ.ಗಾದೆಪ್ಪ, ಡಾ.ಗುಂಡಿ ಮಾರುತಿ, ನಗರಸಭೆ ಅಧ್ಯಕ್ಷೆ ಸುಂಕಮ್ಮ, ಹುಡಾ ಅಧ್ಯಕ್ಷ ಅಶೋಕ್ ಜೀರೆ, ಮುಖಂಡರಾದ ರಾಜಶೇಖರ ಹಿಟ್ನಾಳ, ಅಸುಂಡಿ ನಾಗರಾಜಗೌಡ, ಜಿ. ಮಲ್ಲಿಕಾರ್ಜುನಗೌಡ, ಪಿ.ವೆಂಕಟೇಶ, ಗುಜ್ಜಲ ಗಣೇಶ, ತಾರಿಹಳ್ಳಿ ಜಂಬುನಾಥ, ಬಿ.ಟಿ.ಮಂಜುನಾಥ, ಪಿ.ಸತ್ಯನಾರಾಯಣ, ಡಾ.ದಯಾನಂದ ಕಿನ್ನಾಳ, ಮಧುರಚನ್ನಶಾಸ್ತ್ರಿ ಇತರರಿದ್ದರು.

    ಕನ್ನಡದ ಉಗಮ ತಾಣ ವಿಜಯನಗರ ಸಾಮಾಜ್ಯ
    ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಪ್ರವಾಸೋದ್ಯಮ ಸಚಿವ ಆನಂದ ಸಿಂಗ್, ಕನ್ನಡ ಭಾಷೆ, ನೆಲ, ಜಲ ವಿಷಯಗಳು ಬಂದಾಗ ಕಸಾಪ ಮತ್ತು ಕನ್ನಡಪರ ಸಂಘಟನೆಗಳು ಒಕ್ಕೊರಲಿನಿಂದ ಧ್ವನಿ ಎತ್ತಿ ಹೋರಾಡಿ, ನಾಡಿಗೆ ನ್ಯಾಯ ದೊರಕಿಸಿಕೊಡಬೇಕು. ವೈಯಕ್ತಿಕ ಪ್ರತಿಷ್ಠೆಗಳಿಗೆ ನಾಡಿನ ಹಿತಾಸಕ್ತಿ ಬಲಿಯಾಗುವುದಕ್ಕೆ ಅವಕಾಶ ನೀಡಬಾರದು ಎಂದು ಹೇಳಿದರು. ವಿಜಯನಗರ ಸಾಮ್ರಾಜ್ಯ ಕನ್ನಡದ ಉಗಮ ತಾಣ. ತಾಯಿ ಭುವನೇಶ್ವರಿ ಏಕೈಕ ಮೂರ್ತಿ ಇರುವುದು ಹಂಪಿಯಲ್ಲೇ. ಹರಿಹರ, ರಾಘವಂಕ, ವಿದ್ಯಾರಣ್ಯರು, ರಗಳೆ, ಕನಕದಾಸರು, ಪುರಂದರ ದಾಸರು ಹಾಗೂ ವ್ಯಾಸರಾಯರ ಕರ್ಮಭೂಮಿ ವಿಜಯನಗರ. ವಿಶ್ವದ ಅತೀ ಶ್ರೀಮಂತಿಕೆಯಲ್ಲಿ ಎರಡನೇ ಸ್ಥಾನ ಪಡೆದಿದ್ದ ವಿಜಯನಗರದ ಗತವೈಭವವನ್ನು ರಾಜ್ಯದ ಮೂಲೆ ಮೂಲೆಯಲ್ಲಿ ನಮ್ಮದೇ ಎಂದು ಬಳಸಿಕೊಂಡರೇ, ಹೊರತು ಅದಕ್ಕೊಂದು ಪ್ರತ್ಯೇಕ ಸ್ಥಾನಮಾನ ಕಲ್ಪಿಸುವ ಪ್ರಯತ್ನವನ್ನು ಯಾರೂ ಮಾಡಲಿಲ್ಲ ಎಂದರು ಬೇಸರಿಸಿದರು.

    ಜಾಗೃತ ಪ್ರಜ್ಞೆ ಬೆಳೆಸಿದ ಜಾನಪದ ಗೀತೆ
    ಕಸಾಪ ಎಂಬುದು ಲಾಭದಾಯಕ ಸಂಸ್ಥೆಯಲ್ಲ. ಕನ್ನಡಿಗರ ಮನಸ್ಸುಗಳನ್ನು ಬೆಸೆಯುವ ವ್ಯವಸ್ಥೆ. ವಸುದೈವ ಕುಟುಂಬಕಂ ಎಂಬಂತೆ ಎಲ್ಲ ಧರ್ಮ, ಜಾತಿ, ಪಂಥಗಳನ್ನು ಮೀರಿದ್ದು ಕನ್ನಡ ಧರ್ಮ. ಕನ್ನಡ ಸಾಹಿತ್ಯ ವಿಶ್ವದ ಎಲ್ಲ ಸಾಹಿತ್ಯಗಳಿಗೆ ತಾಯಿ ಬೇರು. ವಿಜಯನಗರ ಸಾಮ್ರಾಜ್ಯದ ಹಂಪಿ ವಿದ್ಯಾರಣ್ಯರು, ವ್ಯಾಸರಾಯರಲ್ಲದೇ 101 ವಿರಕ್ತ ಸಾಧಕರು ನೆಲೆಸಿದ್ದ ಪುಣ್ಯಭೂಮಿ ಎಂದು ಹಂಪಿ ಹೇಮಕೂಟ ಶೂನ್ಯ ಸಿಂಹಾಸನಾಧೀಶ್ವರ ಜ.ಕೊಟ್ಟೂರು ಬಸವಲಿಂಗ ಸ್ವಾಮೀಜಿ ಬಣ್ಣಿಸಿದರು. ಈ ಭಾಗದ ಜನರು ಅನಕ್ಷರಸ್ಥರಾಗಿದ್ದರೂ, ನಾನಾ ಸಂದರ್ಭದಲ್ಲಿ ಬಾಯಿಂದ ಬಾಯಿಗೆ ಹರಡಿದ ಜಾನಪದ ಗೀತೆ, ನುಡಿಗಳು ಈ ಭಾಗದ ಜನರಲ್ಲಿ ಜಾಗೃತ ಪ್ರಜ್ಞೆ ಬೆಳೆಸಿದೆ. ಸಾಮಾಜಿಕ ಸಮಸ್ಯೆಗಳಿಗೆ ಶರಣರ ವಚನಗಳು ಪರಿಹಾರೋಪಾಯಗಳನ್ನು ಸೂಚಿಸಿವೆ ಎಂದು ಹೇಳಿದರು.

    ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ಸಿಗಲಿ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ಸಿಗಲಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts