More

    ಪ್ರಗತಿಪರ ಸಂಘಟನೆಗಳಿಂದ ಬೃಹತ್ ಪ್ರತಿಭಟನೆ

    ಹೊಸಪೇಟೆ: ನಗರಸಭೆ ವ್ಯಾಪ್ತಿಯಲ್ಲಿ ಮನೆ, ನಿವೇಶನ ಇಲ್ಲದವರಿಗೆ ನಿವೇಶನ ಮಂಜೂರು ಮಾಡಬೇಕು. ಈ ಕುರಿತು ಇದೇ ತಿಂಗಳ 20ರ ಒಳಗಾಗಿ ಫಲಾನುಭವಿಗಳ ಪಟ್ಟಿ ಪ್ರಕಟಿಸಬೇಕು ಎಂದು ಒತ್ತಾಯಿಸಿ ವಿವಿಧ ಪ್ರಗತಿಪರ ಸಂಘಟನೆಗಳ ನೇತೃತ್ವದಲ್ಲಿ ನೂರಾರು ಜನ ಬುಧವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು. ನಗರದ ಶ್ರಮಿಕ ಭವನದಿಂದ ನಗರಸಭೆವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿ, ಪೌರಾಯುಕ್ತರಿಗೆ ಮನವಿ ಸಲ್ಲಿಸಿದರು.

    ನೂತನ ವಿಜಯನಗರ ಜಿಲ್ಲೆಯ ಜಿಲ್ಲಾ ಕೇಂದ್ರವಾಗಿರುವ ಹೊಸಪೇಟೆ ನಗರದ ಆರ್ಥಿಕ, ಸಾಮಾಜಿಕ ವ್ಯವಸ್ಥೆಯಲ್ಲಿ ಏಳು ಬೀಳುಗಳು ಉಂಟಾಗಿವೆ. ಜಿಲ್ಲಾ ಕೇಂದ್ರವಾಗುವುದನ್ನು ಮೊದಲೇ ಗಮನಿಸಿದ್ದ ಸ್ಥಿತಿವಂತರು ಕಡಿಮೆ ಬೆಲೆಗೆ ಹೊಸಪೇಟೆ ಸುತ್ತಲಿನ ಕೃಷಿ ಭೂಮಿ ಖರೀದಿಸಿದ್ದು, ಇದೀಗ ಹತ್ತು ಪಟ್ಟು ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ಈ ಅಕ್ರಮದಲ್ಲಿ ಸ್ಥಳೀಯ ರಾಜಕಾರಣಿಗಳೂ ಶಾಮೀಲಾಗಿದ್ದಾರೆ. ಪರಿಣಾಮ ಬಡವರಿಗೆ ಸೂರಿನ ಕನಸು ಮತ್ತಷ್ಟು ದೂರವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

    ನಗರದಲ್ಲಿ 3.40 ಲಕ್ಷ ಜನ ಸಂಖ್ಯೆಯಿದ್ದು, ದಲಿತ, ಹಿಂದುಳಿದ ಹಾಗೂ ಅಲ್ಪಸಂಖ್ಯಾತರು ಸೇರಿ ಸುಮಾರು 30 ಸಾವಿರಕ್ಕಿಂತ ಅಧಿಕ ಕುಟುಂಬಗಳಿಗೆ ಸ್ವಂತ ಮನೆ, ಜಾಗ ಇಲ್ಲ. ಹೊಸಪೇಟೆ ನಗರ ಮತ್ತು ಸುತ್ತಲಿನ ನಿವೇಶನದ ಬೆಲೆಗಳು ಗಗನಕ್ಕೇರಿದ್ದರಿಂದ ಸಾಮಾನ್ಯ ನಾಗರಿಕರು ಒಂದು ಸೈಟ್ ಕೊಳ್ಳಲು ತಮ್ಮ ಜೀವನವನ್ನೇ ಮುಡಿಪಾಗಿಡುವ ಪರಿಸ್ಥಿತಿ ಎದುರಾಗಿದೆ ಎಂದು ದೂರಿದರು.

    ಈಗಾಗಲೇ ವಿಜಯನಗರ ಜಿಲ್ಲಾಡಳಿತ ನಿರ್ಧರಿಸಿರುವ 210 ಎಕರೆ ಸರ್ಕಾರಿ ಭೂಮಿಯಲ್ಲಿ ನಿವೇಶನ ನೀಡಬೇಕು. ನಗರ ಹೊರವಲಯದ 5 ಕಿ.ಮೀ. ವ್ಯಾಪ್ತಿಯಲ್ಲಿರುವ ಸರ್ಕಾರಿ ಭೂಮಿಗಳನ್ನು ಖಾಸಗೀ ವ್ಯಕ್ತಿಗಳು, ಕಂಪನಿ, ಟ್ರಸ್ಟ್‌ಗಳಿಗೆ ಮಾರಾಟ ಮಾಡಬಾರದು. ಗುತ್ತಿಗೆ(ಲೀಸ್) ನೀಡದೇ, ಬಡವರಿಗಾಗಿ ವಸತಿ ಬಡಾವಣೆಗಳನ್ನು ನಿರ್ಮಿಸಬೇಕು. ಜತೆಗೆ ಸರ್ಕಾರಿ ಆಸ್ಪತ್ರೆ, ಶಾಲಾ, ಕಾಲೇಜು, ಸರ್ಕಾರಿ ಇಲಾಖೆಗಳ ಸ್ಥಾಪನೆಗೆ ಮೀಸಲಿಡಬೇಕು. 2015ರಲ್ಲಿ ಆನಂದ ಸಿಂಗ್‌ಗೆ ಸಲ್ಲಿಸಿರುವಂತೆ 8,315 ಅರ್ಜಿದಾರರಿಗೆ ನಿವೇಶನ ಮೊದಲ ಆದ್ಯತೆ ನೀಡಬೇಕು. ಇದೇ ಜ.20ರ ಒಳಗಾಗಿ ಫಲಾನುಭವಿಗಳನ್ನು ಗುರುತಿಸಿ, ಅರ್ಹರ ಪಟ್ಟಿ ಪ್ರಕಟಿಸಬೇಕು ಎಂದು ಆಗ್ರಹಿಸಿದರು.

    ಪ್ರತಿಭಟನೆಯಲ್ಲಿ ಸಿಪಿಐ, ಸಿಐಟಿಯು, ಡಿಎಚ್‌ಎಸ್, ಡಿವೈಎಫ್‌ಐ ಪ್ರಮುಖರಾದ ಎಂ.ಗೋಪಾಲ, ಸ್ವಪ್ನಾ ಕೆ.ಎಂ., ಶಕುಂತಲಾ, ಇ. ಮಂಜನಾಥ, ಯಲ್ಲಮ್ಮ, ವಿಜಯಕುಮಾರ್, ತಾಯಪ್ಪ ನಾಯಕ, ಹಂಪಮ್ಮ, ರಾಮಾಂಜಿನಿ, ಕಲ್ಯಾಣಯ್ಯ ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts