More

    ವಿಜಯನಗರ ಕಬಡ್ಡಿ ಲೀಗ್‌ಗೆ ಅದ್ದೂರಿ ಚಾಲನೆ

    ಹೊಸಪೇಟೆ: ದಾನಿಗಳು ಮುಂದೆ ಬಂದರೆ, ವಿಜಯನಗರ ಜಿಲ್ಲೆಗೆ ಮುಂದೆ ರಾಷ್ಟ್ರ ಮಟ್ಟದ ಕಬಡ್ಡಿ ಪಂದ್ಯಾವಳಿ ಒದಗಿಸಲು ಪ್ರಯತ್ನಿಸುವುದಾಗಿ ರಾಜ್ಯ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಸಂಘಟನಾ ಕಾರ್ಯದರ್ಶಿ ಬಿ.ಸಿ. ಸುರೇಶ್ ಹೇಳಿದರು.

    ಸಮಾಜ ಸೇವಕ ಸಿದ್ಧಾರ್ಥ ಸಿಂಗ್ ನೇತೃತ್ವದಲ್ಲಿ ನಗರದ ಡಾ.ಪುನೀತ್ ರಾಜಕುಮಾರ್ ಜಿಲ್ಲಾ ಕ್ರೀಡಾಂಗಣದಲ್ಲಿ ಶುಕ್ರವಾರ ಸಂಜೆ ಆರಂಭಗೊಂಡ ಕಲ್ಯಾಣ ಕರ್ನಾಟಕ ಕಬಡ್ಡಿ ವೈಭವ ವಿಕೆಎಲ್-1 ಉದ್ಘಾಟಿಸಿ ಮಾತನಾಡಿದರು. ಕಬಡ್ಡಿ ಪ್ರೋತ್ಸಾಹಿಸುವ ಉದ್ದೇಶದಿಂದ ವಿಜಯನಗರ ಪಾತ್ರವಲ್ಲದೇ, ಕಲ್ಯಾಣ ಕರ್ನಾಟಕದ ಎಲ್ಲ ಜಿಲ್ಲೆಗಳ ಕ್ರೀಡಾಪಟುಗಳನ್ನು ಆಹ್ವಾನಿಸಲಾಗಿದೆ. ಅವರಿಗೆ ಸಾರಿಗೆ, ಸುಸಜ್ಜಿತ ಹೋಟೆಲ್‌ಗಳಲ್ಲಿ ವಸತಿ ಮತ್ತು ಊಟದ ವ್ಯವಸ್ಥೆ ಕಲ್ಪಿಸಿರುವ ಸಾಮಾಜ ಸೇವಕ ಸಿದ್ಧಾರ್ಥ ಸಿಂಗ್ ಕಾರ್ಯ ಶ್ಲಾಘನಾರ್ಹ ಎಂದರು.

    ನೂತನ ಜಿಲ್ಲೆಯಲ್ಲಿ ಕ್ರೀಡಾ ಕ್ಷೇತ್ರದ ಬೆಳವಣಿಗೆಗೆ ಸಾಕಷ್ಟು ಅವಕಾಶವಿದೆ. ಮುಂದಿನ ದಿನಗಳಲ್ಲಿ ಒಳಂಗಣ ಮತ್ತು ಹೊರಂಗಣದಲ್ಲೂ ಕಬಡ್ಡಿ ಅಂಕಣಗಳನ್ನು ಒದಗಿಸುವ ಭರವಸೆಯಿದ್ದು, ಈ ಭಾಗದ ಕ್ರೀಡಾಪಟುಗಳಗೆ ಉಜ್ವಲ ಭವಿಷ್ಯವಿದೆ. ಇಲ್ಲಿನ ಅವಕಾಶಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

    ವೇದಿಕೆ ಮೇಲೆ ನಗರಸಭೆ ಅಧ್ಯಕ್ಷೆ ಸುಂಕಮ್ಮ, ಉಪಾಧ್ಯಕ್ಷ ಎಲ್.ಎಸ್. ಆನಂದ್, ಸದಸ್ಯರಾದ ಪಿ. ವೆಂಕಟೇಶ್, ಕೆ. ಮಂಜುನಾಥ್, ಜಿಲ್ಲಾ ವಕ್ಫ್ ಬೋರ್ಡ್ ಅಧ್ಯಕ್ಷ ಟಿಂಕರ್ ರಫೀಕ್, ಹುಡಾ ಅಧ್ಯಕ್ಷ ಅಶೋಕ್ ಜೀರೆ, ಹಿರಿಯ ಕಬಡ್ಡಿ ಆಟಗಾರ ದುರುಗೋಜಿ ರಾವ್, ಸಿದ್ದಾರ್ಥ ಸಿಂಗ್ ಉಪಸ್ಥಿತರಿದ್ದರು.

    ಜೆಎನ್‌ಬಿ ವಾರಿಯರ್ಸ್‌ಗೆ ಗೆಲುವು: ಪುರುಷರ ವಿಭಾಗದಲ್ಲಿ ಹೊಸಪೇಟೆಯ ಜೆಎನ್‌ಬಿ ವಾರಿಯರ್ಸ್ ಹಾಗೂ ಯುತ್ ಐಕಾನ್ಸ್ ತಂಡಗಳ ನಡುವೆ ಮೊದಲ ಹೊನಲು ಬೆಳಕಿನ ಪಂದ್ಯ ನಡೆಯಿತು. ಕ್ರೀಡಾಭಿಮಾನಿಗಳು ಕಿಕ್ಕಿರಿದು ಸೇರಿದ್ದರು. ಜೆಎನ್‌ಬಿ ವಾರಿಯರ್ಸ್ ತಂಡ ಉತ್ತಮ ಪ್ರದರ್ಶನ ತೋರಿ ಯುತ್ ಐಕಾನ್ಸ್ ತಂಡವನ್ನು ಮಣಿಸಿ ಗೆಲುವಿನ ಶುಭಾರಂಭ ಮಾಡಿತು. ಯುತ್ ಐಕಾನ್ಸ್ ತಂಡ 5 ಅಂಕಗಳಿಂದ ಪರಾಭಾವಗೊಂಡರೆ, ವಾರಿಯರ್ಸ್ ತಂಡ 18 ಅಂಕದೊಂದಿಗೆ ಗೆಲುವುಕಂಡಿತು. ಕಲ್ಯಾಣ ಕರ್ನಾಟಕದ ವಿವಿಧ ಜಿಲ್ಲೆಗಳಿಂದ 78 ತಂಡಗಳು ಪಾಲ್ಗೊಂಡಿದ್ದು, ಭಾನುವಾರ ಅಂತಿಮ ಹಣಾಹಣಿ ನಡೆಯಲಿದೆ. ಕಬಡ್ಡಿ ಪಂದ್ಯಾವಳಿ ಆರಂಭಕ್ಕೂ ಮುನ್ನ ನಗರದ ವಡಕರಾಯ ದೇವಸ್ಥಾನದಿಂದ ಕ್ರೀಡಾಂಗಣ ವರೆಗೆ ಮೆರವಣಿಗೆ ನಡೆಯಿತು. ಎಲ್ಲ ತಂಡಗಳ ಆಟಗಾರರು ಪಾಲ್ಗೊಂಡಿದ್ದರು.

    ಕಿಕ್ಕಿರಿದು ತುಂಬಿದ್ದ ಜನ: ಕಲ್ಯಾಣ ಕರ್ನಾಟಕ ಕಬಡ್ಡಿ ವೈಭವದ ವಿಜಯನಗರ ಕಬಡ್ಡಿ ಲೀಗ್ ವೀಕ್ಷಣೆಗಾಗಿ ನಾನಾ ಕಡೆಯಿಂದ ಸಾವಿರಾರು ಸಂಖ್ಯೆಯಲ್ಲಿ ಜನರು ಆಗಮಿಸಿದ್ದರು. ಮೈದಾನದ ನಾಲ್ಕು ಅಂಕಣದಲ್ಲಿ ನಡೆದ ಪಂದ್ಯಗಳನ್ನು ರಾತ್ರಿ 11ರ ವರೆಗೂ ವೀಕ್ಷಿಸಿದರು. ಅದರಂತೆ ಶನಿವಾರ ಬೆಳಗ್ಗೆ 8 ರಿಂದ 11 ಗಂಟೆ ಮತ್ತು ಸಂಜೆ 5 ರಿಂದ 10ಗಂಟೆ ವರೆಗಿನ ಪಂದ್ಯಗಳನ್ನೂ ಕುತೂಹಲದಿಂದ ವೀಕ್ಷಿಸಿದರು. ಪ್ರತಿ ಪಂದ್ಯದಲ್ಲಿ ಆಟಗಾರರು ರಣೋತ್ಸಾಹ ಪ್ರದರ್ಶಿಸಿದರು. ನೆಚ್ಚಿನ ಆಟಗಾರನ ಉತ್ತಮ ಪ್ರದರ್ಶನಕ್ಕೆ ಕೇಕೆ, ಚಪ್ಪಾಳೆ ತಟ್ಟಿ ಬೆಂಬಲ ಸೂಚಿಸಿದ ಅಭಿಮಾನಿಗಳು, ತಮ್ಮ ಆಟಗಾರರಿಗೆ ಸೋಲಾದಾಗ ನಿರಾಶರಾದರು.

    ಈ ಭಾಗದ ಕ್ರೀಡಾಪಟುಗಳು ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಡಬೇಕೆಂಬ ಮಹತ್ವಾಕಾಂಕ್ಷೆಯಿಂದ ಕಬಡ್ಡಿ ಪಂದ್ಯಾವಳಿ ಆಯೋಜಿಸಲಾಗಿದೆ. ಈ ಹಿಂದೆಯೂ ಕ್ರಿಕೆಟ್ ಇತರ ಕ್ರೀಡೆಗಳನ್ನು ಆಯೋಜಿಸಲಾಗಿದೆ. ಈ ಭಾಗದ ಕ್ರೀಡಾ ಚಟುವಟಿಕೆಗಳ ಉತ್ತೇಜನಕ್ಕೆ ಅಗತ್ಯ ನೆರವು ನೀಡಲಾಗುವುದು.

    > ಸಿದ್ಧಾರ್ಥ ಸಿಂಗ್, ಸಮಾಜ ಸೇವಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts