More

    ಹೊಸಪೇಟೆ ಪಡಸಾಲೆ ಕೇಂದ್ರದಲ್ಲಿ ವಿದ್ಯುತ್ ಅವಘಡ, ಪಿಂಚಣಿ ಸೇರಿ ವಿವಿಧ ದಾಖಲೆಗಳು ಭಸ್ಮ

    ಹೊಸಪೇಟೆ: ಒಂದೇ ಸೂರಿನಡಿ ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ತಾಲೂಕು ಕಚೇರಿಯಲ್ಲಿ ತೆರೆದಿದ್ದ ಪಡಸಾಲೆ ಕೇಂದ್ರದಲ್ಲಿ ಶನಿವಾರ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಆಗಿ ಕಂಪ್ಯೂಟರ್, ದಾಖಲೆಗಳ ಜತೆಗೆ ಕೊಠಡಿ ಬೆಂಕಿಗಾಹುತಿಯಾಗಿದೆ.

    ಶನಿವಾರ ಬೆಳಗ್ಗೆ 9ಗಂಟೆಗೆ ಪಡಸಾಲೆ ಕೇಂದ್ರದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಕಂಪ್ಯೂಟರ್ ಸೇರಿ ಲಿಖಿತ ದಾಖಲೆಗಳು ನಾಶವಾಗಿವೆ. ತಕ್ಷಣವೇ ಅಗ್ನಿಶಾಮಕ ದಳದ ಸಿಬ್ಬಂದಿ ಧಾವಿಸಿ ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ. ಸ್ಥಳಕ್ಕೆ ಸಹಾಯಕ ಆಯುಕ್ತ ಶೇಕ್ ತನ್ವೀರ್ ಆಸಿಫ್, ತಹಸೀಲ್ದಾರ್ ಎಚ್.ವಿಶ್ವನಾಥ, ಡಿವೈಎಸ್ಪಿ ವಿ.ರಘುಕುಮಾರ, ನಗರಸಭೆ ಪೌರಾಯುಕ್ತೆ ಜಯಲಕ್ಷ್ಮೀ ಸೇರಿ ಆರೋಗ್ಯ ಇಲಾಖೆ ವೈದ್ಯಾಧಿಕಾರಿಗಳು ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.

    ಪಿಂಚಣಿದಾರರ ದಾಖಲೆಗಳು ಭಸ್ಮ
    ಪಡಸಾಲೆ ಕೇಂದ್ರ ಹಳೆಯ ಕಟ್ಟಡವಾಗಿದ್ದು ಶಿಥಿಲಾವಸ್ಥೆಗೆ ತಲುಪಿತ್ತು. ಕಟ್ಟಡದ ಛಾವಣಿ ಹಂಚಿನದಾಗಿದ್ದು ಮರದ ದಿನ್ನೆಯ ಸಹಾಯದಿಂದ ನಿರ್ಮಿಸಲಾಗಿದೆ. ಇದರಿಂದ ಕೊಠಡಿ ತುಂಬಾ ಬೆಂಕಿ ಆವರಿಸಿಕೊಳ್ಳಲು ಕಾರಣ ಎನ್ನಲಾಗುತ್ತಿದೆ. ಪಿಂಚಣಿ ಯೋಜನೆ, ಪಹಣಿ, ಜಾತಿ, ಆದಾಯ, ಆಧಾರ್ ನೋಂದಣಿ, 371 ಜೆ, ಸಿಂಧುತ್ವ ಪ್ರಮಾಣಪತ್ರ ಸೇರಿ ವಿವಿಧ ದಾಖಲೆಗಳನ್ನು ಪಡಸಾಲೆ ಆವರಣದಲ್ಲಿ ಕಾರ್ಯನಿರ್ವಹಿಸಿ ನೀಡಲಾಗುತ್ತಿತ್ತು. ವಿದ್ಯುತ್ ಅವಘಡದಿಂದ ಕಂಪ್ಯೂಟರ್ ಮತ್ತು ಲಿಖಿತ ದಾಖಲೆಗಳು ನಾಶವಾಗಿವೆ. ಇನ್ನು ಹಲವು ದಿನ ಯಾವುದೇ ಸೇವೆಗಳು ನಡೆಯುವುದು ಅನುಮಾನವಾಗಿದ್ದು, ಪಿಂಚಣಿ ಮತ್ತು ಸಿಂಧುತ್ವ ಪಡೆಯಲು ಅರ್ಜಿ ಸಲ್ಲಿಸಿದವರಿಗೆ ಏನಾಗುವುದೋ ಎಂಬ ಆತಂಕ ಎದುರಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts