More

    ಮಹರ್ಷಿ ವಾಲ್ಮೀಕಿ ಜಯಂತಿ ಪೂರ್ವಭಾವಿ ಸಭೆ ಬಹಿಷ್ಕಾರ

    ಹೊಸಪೇಟೆ: ಎಸ್ಟಿ ಮೀಸಲು ಹೆಚ್ಚಿಸಬೇಕು ಎಂದು ಆಗ್ರಹಿಸಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಬುಧವಾರ ಕರೆದಿದ್ದ ಮಹರ್ಷಿ
    ವಾಲ್ಮೀಕಿ ಜಯಂತಿ ಪೂರ್ವಭಾವಿ ಸಭೆ ಬಹಿಷ್ಕರಿಸಿ, ವಾಲ್ಮೀಕಿ ಸಮಾಜದ ನಾಯಕರು ಪ್ರತಿಭಟನೆ ನಡೆಸಿದರು.

    ಜಿಲ್ಲಾಧಿಕಾರಿ ಅನಿರುದ್ಧ ಶ್ರವಣ್ ಅಧ್ಯಕ್ಷತೆಯಲ್ಲಿ ಸಭೆ ಆರಂಭವಾಗುತ್ತಿದ್ದಂತೆ ವಾಲ್ಮೀಕಿ ಸಮಾಜದ ಮುಖಂಡರಾದ ನಾಣಿಕೆರೆ ತಿಮ್ಮಯ್ಯ, ಮರಡಿ ಜಂಬಯ್ಯ ನಾಯಕ ಮಾತನಾಡಿ, ನಿವೃತ್ತ ನ್ಯಾಯಮೂರ್ತಿ ನಾಗಮೋಹನದಾಸ್ ವರದಿಯನ್ನು ಯಥಾವತ್ತಾಗಿ ಅನುಷ್ಠಾನಕ್ಕೆ ತರಬೇಕು. ಪರಿಶಿಷ್ಟ ಜಾತಿ ಮತ್ತು ಪಂಗಡದ ಮೀಸಲಾತಿಯನ್ನು ಹೆಚ್ಚಿಸಬೇಕು ಎಂಬ ಸಮುದಾಯದ ಬೇಡಿಕೆಗೆ ಸರ್ಕಾರ ಸ್ಪಂದಿಸುತ್ತಿಲ್ಲ. ಬೇಡಿಕೆ ಈಡೇರುವವರೆಗೆ ಸರ್ಕಾರದಿಂದ ಆಚರಿಸುವ ಜಯಂತಿಯಲ್ಲೂ ಪಾಲ್ಗೊಳ್ಳುವುದಿಲ್ಲ ಎಂದು ಹೊರ ನಡೆದರು. ಬಳಿಕ ಜಿಲ್ಲಾಧಿಕಾರಿಗಳ ಆವರಣದಲ್ಲಿ ಪ್ರತಿಭಟನೆ ನಡೆಸಿ, ಸರ್ಕಾರದ ವಿರುದ್ಧ ಘೋಷಣೆ ಕೂಗಿ, ಆಕ್ರೋಶ ವ್ಯಕ್ತಪಡಿಸಿದರು.

    ದಿಕ್ಕು ತಪ್ಪಿಸುತ್ತಿರುವ ಶ್ರೀರಾಮುಲು: ಪ್ರತಿಭಟನಾಕಾರರನ್ನು ಉದ್ದೇಶಿಸಿ ಸಮಾಜದ ಪ್ರಮುಖರಾದ ಮರಡಿ ಜಂಬಯ್ಯ ನಾಯಕ ಮಾತನಾಡಿ, ಸಮಾಜಕ್ಕೆ ಮೀಸಲಾತಿ ವಿಚಾರದಲ್ಲಿ ಶ್ರೀರಾಮುಲು ನಿರಂತರವಾಗಿ ಸುಳ್ಳು ಹೇಳಿಕೊಂಡು ಬರುತ್ತಿದ್ದಾರೆ. ಪರಿಶಿಷ್ಟ ವರ್ಗಗಳ ಇಲಾಖೆ ಸಚಿವರೂ ಆಗಿರುವ ಶ್ರೀರಾಮುಲು ನೇರವಾಗಿ ಕ್ಯಾಬಿನೆಟ್‌ನಲ್ಲಿ ಮಂಡಿಸಿ, ಒಪ್ಪಿಗೆ ಪಡೆಯಬಹುದು. ಅದನ್ನು ಬಿಟ್ಟು ಅ.8 ರಂದು ಸರ್ವ ಪಕ್ಷದ ಸಭೆ ಕರೆಯುವ ಔಚಿತ್ಯವೇನು. ಸಮಾಜದ ದಾರಿ ತಪ್ಪಿಸುವ ಪ್ರಯತ್ನವಲ್ಲದೇ ಬೇರೇನೂ ಅಲ್ಲ ಎಂದರು.

    ಮುಖಂಡ ಧರ್ಮದರ್ಶಿ ಬಿ.ಎಸ್.ಜಂಬಯ್ಯ ನಾಯಕ ಮಾತನಾಡಿ, ವಾಲ್ಮೀಕಿ ಗುರುಪೀಠದ ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ ನಿರಂತರ 131 ದಿನಗಳಿಂದ ಬೆಂಗಳೂರಿನ ಸ್ವಾತಂತ್ರ ಉದ್ಯಾನದಲ್ಲಿ ಧರಣಿ ನಡೆಸುತ್ತಿದ್ದಾರೆ. ಆದರೂ, ಸರ್ಕಾರ ಸ್ಪಂದಿಸುತ್ತಿಲ್ಲ. ಹೀಗಾಗಿ ಸರ್ಕಾರದಿಂದ ಆಚರಿಸುವ ಜಯಂತಿಯನ್ನು ಬಹಿಷ್ಕರಿಸಿ, ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತ್ಯೇಕವಾಗಿ ಆಚರಿಸುತ್ತೇವೆ. ಈವರೆಗೆ ಜನಪ್ರತಿನಿಧಿಗಳು ನೀಡಿದ ಭರವಸೆಗಳು ಹುಸಿಯಾಗಿದ್ದು, ಆಯಾ ಜಿಲ್ಲೆಗಳಲ್ಲಿ ಸ್ಥಳೀಯರು ಜನಪ್ರತಿನಿಧಿಗಳಿಗೆ ಘೇರಾವ್ ಹಾಕುತ್ತೇವೆ ಎಂದು ಎಚ್ಚರಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts