ಸಿನಿಮಾ

ವಿಶ್ವ ವಿಖ್ಯಾತ ಹಂಪಿಯಲ್ಲಿ ಜಿ-20 ಸಭೆಗೆ ಸಿದ್ಧತೆ

ಹೊಸಪೇಟೆ: ವಿಶ್ವ ವಿಖ್ಯಾತ ಹಂಪಿಯಲ್ಲಿ ಜಿ-20 ಶೃಂಗಸಭೆ ಜುಲೈನಲ್ಲಿ ನಡೆಯಲಿದ್ದು, ಕೇಂದ್ರ ಸರ್ಕಾರ ಮತ್ತು ಜಿಲ್ಲಾಡಳಿತದ ಸಹಯೋಗದಲ್ಲಿ ಸಕಲ ಸಿದ್ಧತೆ ಆರಂಭವಾಗಿದೆ. ಆದರೆ, ಶೃಂಗದ ನೆಪದಲ್ಲಿ ಪುರಾತನ ಸ್ಮಾರಕಗಳ ಬಳಿ ಕೈಗೊಂಡಿರುವ ಕಾಮಗಾರಿಗಳಿಂದ ಅವುಗಳ ಮೂಲ ಸ್ವರೂಪಕ್ಕೆ ಧಕ್ಕೆಯಾಗಲಿದೆ ಎಂಬ ಆಕ್ಷೇಪದ ಮಾತುಗಳು ಕೇಳಿ ಬಂದಿವೆ.

ಜಿ-20 ದೇಶಗಳ ಅಧ್ಯಕ್ಷ ಸ್ಥಾನ ಈ ಬಾರಿ ಭಾರತಕ್ಕೆ ಒಲಿದಿದೆ. ಅದರ ಭಾಗವಾಗಿ ಹಂಪಿಯಲ್ಲೂ ಒಂದು ಸಭೆ ಆಯೋಜಿಸಲಾಗಿದೆ. ಭಾರತೀಯ ವಾಸ್ತುಶಿಲ್ಪ ಪ್ರಪಂಚಕ್ಕೆ ತನ್ನದೇ ಆದ ಕೊಡುಗೆ ನೀಡಿರುವ ವಿಜಯನಗರದ ಆಳರಸರ ರಾಜಧಾನಿಯಲ್ಲಿ ಜಿ-20 ಸಭೆ ನಡೆಸಿ ಸ್ಮರಣೀಯವಾಗಿಸುವ ಉದ್ದೇಶ ಹೊಂದಲಾಗಿದೆ.

ಎರಡು ತಿಂಗಳ ಹಿಂದೆ ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಉನ್ನತಾಧಿಕಾರಿಗಳು ಹಂಪಿಗೆ ಭೇಟಿ ನೀಡಿದ್ದರು. ಅವರ ಮಾರ್ಗದರ್ಶನ, ಸೂಚನೆಯಂತೆ ಅಗತ್ಯ ಸೌಲಭ್ಯ ಸೃಜಿಸುವುದು, ಸ್ಮಾರಕಗಳ ರಕ್ಷಣೆಗೆ ಆದ್ಯತೆಯಾಗಿ ವಿವಿಧ ಕಾಮಗಾರಿ ಕೈಗೊಳ್ಳಲಾಗಿದೆ.

ಭರದ ಸಿದ್ಧತೆ

ಜಿ-20 ಶೃಂಗಸಭೆಗೆ ಆಗಮಿಸುವ ವಿದೇಶಿ ಪ್ರತಿನಿಧಿಗಳ ಸ್ವಾಗತಕ್ಕೆ ವಿವಿಧ ಸಿದ್ಧತೆ ಕೈಗೊಳ್ಳಲಾಗುತ್ತಿದೆ. ಅದರ ಭಾಗವಾಗಿ ಬಡವಿಲಿಂಗ ಸುತ್ತಲಿನ ಪ್ರದೇಶದಲ್ಲಿ ಎರಡು ಅಡಿ ಎತ್ತರದ ಗೋಡೆ ಸೇರಿದಂತೆ 6 ಅಡಿ ಎತ್ತರದ ಗ್ರಿಲ್ ಅಳವಡಿಸಿ ಕಾಂಪೌಂಡ್, ಪ್ರವೇಶದ್ವಾರ ನಿರ್ಮಿಸಲಾಗುತ್ತಿದೆ. ಬಡವಿಲಿಂಗ, ವಿಠ್ಠಲ ಮಂದಿರ, ಗ್ರಾಪಂ ಮುಂಭಾಗದಲ್ಲಿ ವಾಹನಗಳ ಪಾರ್ಕಿಂಗ್‌ಗೆ ವ್ಯವಸ್ಥೆ ಮಾಡಲಾಗುತ್ತಿದೆ.

ವಿಠ್ಠಲ ದೇವಸ್ಥಾನ ಸೇರಿದಂತೆ ಆಯಕಟ್ಟಿನ ಸ್ಥಳಗಳಲ್ಲಿ ಫುಟ್ಪಾತ್, ವಾಹನಗಳ ಸುಗಮ ಸಂಚಾರಕ್ಕೆ ವಿವಿಧ ರಸ್ತೆಗಳ ಸುಧಾರಣೆಗೆ ಕ್ರಮ ಕೈಗೊಳ್ಳಲಾಗುತ್ತಿದೆ. ಪ್ರವಾಸಿಗರ ಅನುಕೂಲಕ್ಕಾಗಿ ಶುದ್ಧ ಕುಡಿವ ನೀರಿನ ಸೌಕರ್ಯ, ಅಂಗವಿಕಲರ ಅನುಕೂಲಕ್ಕಾಗಿ ಆಯ್ದ ಪ್ರದೇಶದಲ್ಲಿ ಬ್ಯಾಟರಿ ಚಾಲಿತ ಸ್ವಯಂ ಚಾಲಿತ ವಾಹನಗಳನ್ನು ಒದಗಿಸಲು ಭಾರತೀಯ ಪುರತತ್ವ ಇಲಾಖೆ ಯೋಜನೆ ಹಾಕಿಕೊಂಡಿದೆ ಎನ್ನಲಾಗಿದೆ.

ಅನಗತ್ಯವಾಗಿ ಕಾಂಪೌಂಡ್ ನಿರ್ಮಾಣ ?

ಜಿ-20 ಹೆಸರಲ್ಲಿ ಹಂಪಿಯ ವಿವಿಧ ಸ್ಮಾರಕಗಳ ಸುತ್ತ ಕಾಂಪೌಂಡ್ ನಿರ್ಮಿಸಲಾಗುತ್ತಿದೆ. ಇದರಿಂದ ಪುರಾತನ ಸ್ಮಾರಕಗಳ ಮೂಲ ಸ್ವರೂಪಕ್ಕೆ ಧಕ್ಕೆಯಾಗುತ್ತದೆ ಎಂದು ಸ್ಥಳೀಯರ ಆಕ್ಷೇಪಿಸುತ್ತಿದ್ದಾರೆ. ಹಂಪಿಯ ಸ್ಮಾರಕಗಳ ಸಂರಕ್ಷಣೆ ಮತ್ತು ಮುಂದಿನ ಪೀಳಿಗೆಗೆ ಕಾಯ್ದಿಡುವ ವೈಜ್ಞಾನಿಕ ವಿಧಾನಗಳ ಕುರಿತು ಪ್ರಪಂಚದ ಪ್ರಖ್ಯಾತ ಪುರಾತತ್ವ ಶಾಸ್ತ್ರಜ್ಞರು, ಪಾರಂಪರಿಕ ಆರ್ಕಿಟೆಕ್ಟರ್ಸ್‌ ಅಧ್ಯಯನ ನಡೆಸಿ, ಯುನೆಸ್ಕೋ ನೇತೃತ್ವದಲ್ಲಿ 1999, 2000 ರಿಂದ 2004ರವರೆಗೆ ಪ್ರತಿ ವರ್ಷ ಮತ್ತು 2007ರಲ್ಲಿ ಯುನೆಸ್ಕೋ ಅಧೀನದಲ್ಲಿರುವ ವರ್ಲ್ಡ್ ಹೆರಿಟೇಜ್ ಸೆಂಟರ್‌ಗೆ ವರದಿ ಸಲ್ಲಿಸಿದ್ದಾರೆ.

ಇದನ್ನೂ ಓದಿ: ಭಾವಸದೃಶ ವಾತಾವರಣ, ನೀತಿ-ನಿರ್ಧಾರಗಳ ಮೆಲುಕು: ಅಧಿಕಾರಿಗಳ ಜತೆ ಹಂಗಾಮಿ ಸಿಎಂ ಬೊಮ್ಮಾಯಿ‌ ಧನ್ಯವಾದ ಸಲ್ಲಿಸುವ ಸಭೆ

ಹಂಪಿಯ ಸ್ಮಾರಕಗಳ ಸಂರಕ್ಷಣೆ ಮತ್ತು ವಿವಿಧ ಇಲಾಖೆಗಳು ಸಂಯೋಜಿತ ನಿರ್ವಹಣೆ ಕುರಿತು ಪ್ರಸ್ತಾಪಿಸಿದೆ. ಈ ಮಾರ್ಗಸೂಚಿಗಳ ಅನ್ವಯ ಕಾಮಗಾರಿ ಕೈಗೊಳ್ಳಬೇಕಿದೆ. ಆದರೆ, ಬಡವಿ ಲಿಂಗದ ಬಳಿ ಅನಗತ್ಯವಾಗಿ ಕಾಂಪೌಂಡ್ ನಿರ್ಮಿಸಲಾಗುತ್ತಿದೆ. ಇದರಿಂದ ಐತಿಹಾಸಿಕ ಸ್ಮಾರಕಗಳು ವಿರೂಪಗೊಳ್ಳುತ್ತವೆ. ಜೆಸಿಬಿ ಬಳಸಿ ಅಡಿಪಾಯ ತೆಗೆಯಲಾಗಿದೆ. ಸ್ಥಳೀಯ ನಿವಾಸಿಗಳು ಮನೆಯ ದುರಸ್ತಿ, ಮರು ನಿರ್ಮಾಣದ ವೇಳೆ ಯಂತ್ರೋಪಕರಣ ಬಳಸದಂತೆ ಎಚ್ಚರಿಸುವ ಅಧಿಕಾರಿಗಳು, ಇಲಾಖೆಯ ನಿಯಮ ಮೀರಿ ಕಾಮಗಾರಿ ಕೈಗೊಳ್ಳುತ್ತಿದ್ದಾರೆ ಎಂಬುದು ಸ್ಥಳೀಯರ ಆರೋಪ.

ಯುನೆಸ್ಕೋ ನಿಯಮಗಳ ಆಧಾರದಲ್ಲಿ ಹಂಪಿ ಪರಿಸರದ ಸಂರಕ್ಷಣೆ, ಅಭಿವೃದ್ಧಿ ಮತ್ತು ಉತ್ಖನನ ಕಾರ್ಯ ಕೈಗೊಳ್ಳಬೇಕಿದೆ. ಇದನ್ನು ಮೀರಿದರೆ ಹಂಪಿಯನ್ನು ಅಪಾಯದಂಚಿನಲ್ಲಿರುವ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಸೇರಿಸುವ ಆತಂಕವಿದೆ. ಹಿಂದೆ ತಳವಾರಘಟ್ಟದ ಬಳಿ ಸೇತುವೆ ನಿರ್ಮಿಸಿದಾಗ ಅಪಾಯದ ಅಂಚಿನ ಪಟ್ಟಿಗೆ ಸೇರಿಸಿತ್ತು. ಹಂಪಿಯ ಕೋರ್ ಜೋನ್‌ನಲ್ಲಿಯೇ ಹೊಸ ಕಾಮಗಾರಿಗಳು ನಡೆಯುತ್ತಿದ್ದು, ಅದಕ್ಕಾಗಿ ಯಂತ್ರೋಪಕರಣಗಳನ್ನು ಬಳಸುತ್ತಿರುವುದು ಖಂಡನಾರ್ಹ.
ಶಿವಕುಮಾರ ಮಾಳಗಿ, ಸ್ಥಳೀಯ ನಿವಾಸಿ

ಜಿ-20 ಶೃಂಗದ ನಿಮಿತ್ತ ಮೂಲಸೌಕರ್ಯ ಮತ್ತು ಸ್ಮಾರಕಗಳ ಸಂರಕ್ಷಣೆಗೆ ಅಗತ್ಯ ಕಾಮಗಾರಿ ಕೈಗೊಳ್ಳಲಾಗುತ್ತಿದೆ. ಅಂಗವಿಕಲರು, ಹಿರಿಯರ ಅನುಕೂಲಕ್ಕಾಗಿ ಈಗಾಗಲೇ ವಿರೂಪಾಕ್ಷ ದೇವಸ್ಥಾನದಲ್ಲಿ 1 ಗಾಲಿ ಕುರ್ಚಿ ಒದಗಿಸಲಾಗಿದೆ. ಅದಕ್ಕೆ ಹೆಚ್ಚುವರಿ ಮತ್ತೊಂದು ಹಾಗೂ ವಿಜಯ ವಿಠ್ಠಲ ದೇವಸ್ಥಾನಕ್ಕೆ 2 ಬ್ಯಾಟರಿ ಚಾಲಿತ ಗಾಲಿ ಕುರ್ಚಿಗಳನ್ನು ಒದಗಿಸಲು ಪ್ರಸ್ತಾವನೆ ರೂಪಿಸಲಾಗಿದೆ. ಯಾವುದೇ ಕಾಮಗಾರಿಯಲ್ಲಿ ಯುನೆಸ್ಕೋ ನಿಯಮ ಮೀರಿಲ್ಲ.
ನಿಹಿಲ್‌ದಾಸ್, ಎಎಸ್‌ಐ ಅಧೀಕ್ಷಕ

Latest Posts

ಲೈಫ್‌ಸ್ಟೈಲ್