More

    ಹಕ್ಕುಗಳಿಗಾಗಿ ಒಗ್ಗಟ್ಟು ಪ್ರದರ್ಶಿಸಿ- ಎಐಯುಟಿಯುಸಿ ರಾಜ್ಯ ಉಪಾಧ್ಯಕ್ಷ ದೇವದಾಸ್ ಕರೆ

    ಹೊಸಪೇಟೆ: ಕೇಂದ್ರ-ರಾಜ್ಯ ಸರ್ಕಾರ ಕಾರ್ಮಿಕ ವಿರೋಧಿ ನೀತಿಗಳನ್ನು ಅನುಸರಿಸುತ್ತಿವೆ. ದುಡಿಯುವ ಜನತೆ ಮತ್ತಷ್ಟು ಸಂಘಟಿತರಾಗಿ ಪ್ರಬಲ ಹೋರಾಟಕ್ಕಿಳಿದಾಗ ಬೇಡಿಕೆಗಳನ್ನು ಈಡೇರಿಸಿಕೊಳ್ಳುವ ಜತೆಗೆ ಕೊಳೆತು ನಾರುತ್ತಿರುವ ಈ ವ್ಯವಸ್ಥೆಯನ್ನು ಬದಲಾಯಿಸಲು ಸಾಧ್ಯ ಎಂದು ಎಐಯುಟಿಯುಸಿ ರಾಜ್ಯ ಉಪಾಧ್ಯಕ್ಷ ದೇವದಾಸ್ ಅಭಿಪ್ರಾಯಪಟ್ಟರು.

    ಎಐಯುಟಿಯುಸಿ ಸಂಯೋಜಿತ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದಿಂದ ನಗರದ ಒಳಕ್ರೀಡಾಂಗಣದಲ್ಲಿ ಏರ್ಪಡಿಸಿದ್ದ ಆಶಾ ಕಾರ್ಯಕರ್ತೆಯರ ಜಿಲ್ಲಾ ಸಮಾವೇಶ ಉದ್ಘಾಟಿಸಿ ಮಾತನಾಡಿದರು. ಜನರ ಆರೋಗ್ಯ ಸುಧಾರಣೆಗಾಗಿ ಆಶಾ ಕಾರ್ಯಕರ್ತರು ಹಗಲಿರುಳು ಶ್ರಮಿಸುತ್ತಿದ್ದಾರೆ. ಕೋವಿಡ್ ಸಂದರ್ಭ ಪ್ರಾಣ ಪಣಕ್ಕಿಟ್ಟು, ದುಡಿದಿದ್ದಾರೆ. ಆದರೆ, ಸರ್ಕಾರ ನಿರ್ಲಕ್ಷ್ಯದಿಂದ ಕಾಣುತ್ತಿವೆ. ಅವರನ್ನು ಕಾರ್ಮಿಕರೆಂದು ಪರಿಗಣಿಸದೆ, ಬಿಡಿಗಾಸು ನೀಡಿ ಕೈತೊಳೆದುಕೊಳ್ಳುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಒಂದೆಡೆ ಸರ್ಕಾರದಲ್ಲಿ ಭ್ರಷ್ಟಾಚಾರ ತುಂಬಿ ತುಳುಕುತ್ತಿದೆ. ಮತ್ತೊಂದೆಡೆ ಕಾರ್ಪೋರೇಟ್ ಉದ್ಯಮಿಗಳಿಗೆ ತೆರಿಗೆ ರಿಯಾಯಿತಿ, ಸಾಲ ಮನ್ನಾ ಭಾಗ್ಯಗಳನ್ನು ಘೋಷಿಸುವ ಮೂಲಕ ಲಕ್ಷಾಂತರ ಕೋಟಿ ರೂ. ಕೊಳ್ಳೆ ಹೊಡೆಯುತ್ತಿದೆ. ಆದರೆ, ಆಶಾ ಕಾರ್ಯಕರ್ತೆಯರಿಗೆ ಜೀವನ ಯೋಗ್ಯ ವೇತನ ನೀಡಲು ಸರ್ಕಾರದ ಬಳಿ ಹಣವಿಲ್ಲವಂತೆ. ಇದೆಕ್ಕಿಂತ ಹಸಿ ಸುಳ್ಳು ಬೇರೆಯಿದೆಯೇ ಎಂದು ತರಾಟೆಗೆ ತೆಗೆದುಕೊಂಡರು.

    ಆಶಾ ಕಾರ್ಯಕರ್ತೆಯರ ಸಂಘದ ರಾಜ್ಯ ಕಾರ್ಯದರ್ಶಿ ಡಿ.ನಾಗಲಕ್ಷ್ಮಿ ಮಾತನಾಡಿ, ಆಶಾ ಕಾರ್ಯಕರ್ತೆಯರ ಸೇವೆಯನ್ನ ಶ್ಲಾಘಿಸಿ, ಸನ್ಮಾನಗಳನ್ನು ಮಾಡಲಾಗುತ್ತಿದೆ. ಆದರೆ, ಅವರ ಗಂಭೀರ ಸಮಸ್ಯೆಗಳನ್ನು ಬಗೆಹರಿಸಲು ಸರ್ಕಾರ ಮನಸ್ಸು ಮಾಡುತ್ತಿಲ್ಲ. ಆಶಾ ಸಾಫ್ಟ್‌ನ (ಆರ್‌ಸಿಹೆಚ್ ಪೋರ್ಟಲ್) ದೋಷದಿಂದ ಪ್ರತಿ ತಿಂಗಳು ಸಾವಿರಾರು ರೂಪಾಯಿ ಆಶಾಗಳ ಕೈತಪ್ಪುತ್ತಿದೆ. ಪೋರ್ಟಲ್ ಸರಿಪಡಿಸುವಂತೆ ಕಳೆದ 8 ವರ್ಷಗಳಿಂದ ಇಲಾಖೆ ಗಮನ ಸೆಳೆಯುತ್ತಿದ್ದರೂ ಸ್ಪಂದಿಸುತ್ತಿಲ್ಲ. ಆರ್‌ಸಿಎಚ್ ಪೋರ್ಲ್ ರದ್ದುಗೊಳಿಸಿ, ಆಶಾಗಳಿಗೆ ಆಗುತ್ತಿರುವ ಆರ್ಥಿಕ ನಷ್ಟವನ್ನು ತುಂಬಿಕೊಡಬೇಕು. ಕನಿಷ್ಠ ವೇತನ 12000 ರೂ. ನಿಗದಿಗೊಳಿಸುವುದು, ಹೆಚ್ಚುವರಿ ಕೆಲಸಗಳಿಂದ ಬಿಡುಗಡೆಗೊಳಿಸಲು ಒತ್ತಾಯಿಸಿ ಇದೇ ಡಿ.21 ರಿಂದ 28ರ ವರೆಗೆ ಬೆಳಗಾವಿ ಅಧಿವೇಶನದ ವೇಳೆ ರಾಜ್ಯವ್ಯಾಪಿ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು.

    ಸಂಘದ ಜಿಲ್ಲಾ ಗೌರವ ಅಧ್ಯಕ್ಷೆ ಎ.ಶಾಂತಾ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕಾರ್ಯದರ್ಶಿ ಡಾ.ಪ್ರಮೋದ್, ವಿವಿಧ ತಾಲೂಕು ಪ್ರಮುಖರಾದ ಗೀತಾ, ಗೌರಮ್ಮ, ವೀರಮ್ಮ, ನೇತ್ರಾ, ಮಾರೆಕ್ಕ, ನಾಗಮ್ಮ, ಶಾಂತಮ್ಮ ಉಪಸ್ಥಿತರಿದ್ದರು. ಸಮಾವೇಶದ ಅಂಗವಾಗಿ ನಗರದ ಬಸ್ ನಿಲ್ದಾಣದಿಂದ ಜಿಲ್ಲಾ ಒಳ ಕ್ರೀಡಾಂಗಣದವರೆಗೆ ನೂರಾರು ಆಶಾ ಕಾರ್ಯಕರ್ತೆಯರಿಂದ ಬೃಹತ್ ಮೆರವಣಿಗೆ ನಡೆಯಿತು. ಸರ್ಕಾರದ ಕಾರ್ಮಿಕ ವಿರೋಧಿ ನೀತಿಗಳ ವಿರುದ್ಧ ಧಿಕ್ಕಾರ ಕೂಗಿದರು. ಇದೇ ವೇಳೆ ಎಐಯುಟಿಯುಸಿ ಸಂಯೋಜಿತ ಆಶಾ ಕಾರ್ಯಕರ್ತೆಯರ ಸಂಘದ ಜಿಲ್ಲಾ ಸಮಿತಿಗೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಡಾ.ಪ್ರಮೋದ್. ಕಾರ್ಯದರ್ಶಿಯಾಗಿ ಗೌರಮ್ಮ, 7 ಉಪಾಧ್ಯಕ್ಷರು, 5 ಜಂಟಿ ಕಾರ್ಯದರ್ಶಿಯುಳ್ಳ 173 ಮುಖಂಡರ ಕಾರ್ಯಕಾರಿ ಸಮಿತಿಗೆ ಆಯ್ಕೆ ಮಾಡಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts