More

    ಸರ್ಕಾರದಿಂದ ಭಾವನಾತ್ಮಕ ವಿಚಾರ ಮುನ್ನೆಲೆಗೆ

    ಹೊಸಪೇಟೆ: ಬಂಡವಾಳ ಶಾಹಿ ನೀತಿ ಮತ್ತು ಖಾಸಗೀಕರಣ ಉದ್ದೇಶ ಮರೆ ಮಾಚಲು ಸರ್ಕಾರ ಧಾರ್ಮಿಕ, ಭಾವನಾತ್ಮಕ ವಿಚಾರಗಳನ್ನು ಮುನ್ನೆಲೆಗೆ ತರುತ್ತಿದೆ ಎಂದು ಸಿಐಟಿಯು ಪ್ರಧಾನ ಕಾರ್ಯದರ್ಶಿ ಎಂ.ಎಸ್.ಮೀನಾಕ್ಷಿ ಸುಂದರಂ ಆರೋಸಿದರು.

    ರಾಜ್ಯ ಅಂಗನವಾಡಿ ನೌಕರರ ಸಂಘ(ಸಿಐಟಿಯು)ದಿಂದ ನಗರದ ಸಹಕಾರ ಕಲ್ಯಾಣ ಮಂಟಪದಲ್ಲಿ ಭಾನುವಾರ ಆಯೋಜಿಸಿದ್ದ 8ನೇ ರಾಜ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿ, ದುಡಿಯುವ ಜನರಿಗೆ ಭಜನೆ ಬೇಡ-ಬದಲಿ ಬೋಜನ ಕೊಡಿ. ಕಾರ್ಮಿಕ ವರ್ಗಕ್ಕೆ ಕನಿಷ್ಠ ವೇತನ, ಉದ್ಯೋಗ ಸೃಷ್ಟಿಗಾಗಿ ಬಂಡವಾಳ ಹೂಡಿಕೆ ಮಾಡಿ ಎಂದು ಒತ್ತಾಯಿಸಿದರು.

    ಸುಪ್ರೀಂ ಕೋರ್ಟ್ ತೀರ್ಪಿನಂತೆ ಅಂಗನವಾಡಿ ಕಾರ್ಯಕರ್ತರನ್ನು ನೌಕರರೆಂದು ಪರಿಗಣಿಸಿ, ಗ್ರಾಚುಟಿ ನೀಡಬೇಕು. ಅಲ್ಲಿಯವರೆಗೆ ಅವರಿಗೆ ಕನಿಷ್ಠ ವೇತನ ಜಾರಿಗೊಳಿಸಬೇಕು. ಈಗಿರುವ ಗೌರವ ಧನದಲ್ಲಿ ಮನೆ ಬಾಡಿಗೆ, ಶಿಕ್ಷಣ ಹಾಗೂ ಆರೋಗ್ಯದ ಖರ್ಚುಗಳಿಗೆ ಸಾಕಾಗುವುದಿಲ್ಲ ಎಂದು ಆಗ್ರಹಿಸಿದರು.

    ಬದಲಾಗಿ ಅಂಗನವಾಡಿ ಪೌಷ್ಠಿಕ ಆಹಾರ ನೀಡುವ ಬದಲಿಗೆ ಬ್ಯಾಂಕ್ ಖಾತೆಗೆ ಹಣ ಜಮಾ ಮಾಡಲು ಚಿಂತನೆ ನಡೆಸಿದೆ. ಈ ಯೋಜನೆಯಡಿ ಮಕ್ಕಳಿಗೆ ದಿನಕ್ಕೆ ದೊರೆಯುವ 8 ರೂ. ಗಳಲ್ಲಿ ಪೋಷಕರು ಪೌಷ್ಟಿಕ ಆಹಾರ ಒದಗಿಸಲು ಸಾಧ್ಯವೇ ಎಂದರು.

    ಐಸಿಡಿಎಸ್ ಕಾರ್ಯಕ್ರಮ ಸರ್ಕಾರಕ್ಕೆ ಹೊರೆ ಎಂದು ಭಾವಿಸಬಾರದು. ದೇಶದ ಭಾವಿ ಪ್ರಜೆಗಳನ್ನು ಆರೋಗ್ಯವಂತರನ್ನಾಗಿ ಬೆಳೆಸುವುದಕ್ಕಾಗಿ ಮಾಡುತ್ತಿರುವ ಹೂಡಿಕೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಅಭಿವೃದ್ಧಿ ವಿಚಾರದಲ್ಲಿ ಜಪಾನ್ ಮಾದರಿ ಎನ್ನಲಾಗುತ್ತದೆ. ಜಪಾನ್‌ನಲ್ಲಿ ಮಕ್ಕಳು, ಯುವಕರ ಸಂಖ್ಯೆ ಕಡಿಮೆಯಾಗಿದ್ದರಿಂದ ಜನರು ಮದುವೆ, ಸಂತಾನ ಮಾಡಿಕೊಳ್ಳಲು ಪ್ರೋತ್ಸಾಹ ಧನ ನೀಡುತ್ತಿದೆ. ಆದರೆ, ಭಾರತದಲ್ಲಿ ಹುಟ್ಟಿರುವ ಮಕ್ಕಳಿಗೆ ಆಹಾರ ಕೊಡಿ ಎಂದು ಕೇಳುವ ಪರಿಸ್ಥಿತಿ ಎದುರಾಗಿದೆ ಎಂದರು.

    ಉಚಿತ ಕೊಡುಗೆಗಳಿಂದ ಜನರು ಸೋಮಾರಿಗಳಾಗುತ್ತಿದ್ದಾರೆ. ಉಚಿತ ಯೋಜನೆಗಳಿಗೆ ಬ್ರೇಕ್ ಹಾಕಲು ಸಮಿತಿ ರಚಿಸಬೇಕು ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯ ನೀಡಿದ್ದು ಸರಿಯಲ್ಲ. ದೇಶದ ಜನರು ಕಟ್ಟಿರುವ ತೆರಿಗೆಯಿಂದಲೇ ಉಚಿತ ಕೊಡುಗೆಗಳು ಜಾರಿಗೆ ಬರುತ್ತಿವೆ ಎಂಬುದನ್ನು ಸ್ಮರಿಸಿಕೊಳ್ಳಬೇಕು. ಮೊಟ್ಟೆ ಮುಟ್ಟುವುದಿಲ್ಲ ಎನ್ನುವ ಸಚಿವರು, ಮೊಟ್ಟೆ ಯೋಜನೆಯಲ್ಲಿ ಕಿಕ್‌ಬ್ಯಾಕ್ ಪಡೆಯುತ್ತಾರೆ. ಅಂತವರ ವಿರುದ್ಧ ಕ್ರಮ ಜರುಗಿಸುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

    ಇದಕ್ಕೂ ಮುನ್ನ ‘ಅಂಗನವಾಡಿ ಅಮ್ಮಂದಿರು ಗ್ರಾಚುಟಿಗೆ ಅರ್ಹರು’ ಎಂಬ ಪುಸ್ತಕವನ್ನು ಬಿಡುಗಡೆಗೊಳಿಸಿದರು. ಅಖಿಲ ಭಾರತ ಅಂಗನವಾಡಿ ನೌಕರರ ಸಂಘದ ಎ.ಆರ್.ಸಿಂಧು, ಸಂಘದ ರಾಜಾಧ್ಯಕ್ಷೆ ಎಸ್.ವರಲಕ್ಷ್ಮೀ, ಆರ್.ಎಸ್.ಬಸವರಾಜ ಮತ್ತಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts