More

    ವ್ಯವಹಾರಕ್ಕಾಗಿ ಅನ್ಯಭಾಷೆ ಕಲಿಕೆ ತಪ್ಪಲ್ಲ, ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ಅಭಿಮತ

    ಹೊಸಪೇಟೆ: ಜಾಗತಿಕ ಮಟ್ಟದಲ್ಲಿ ವ್ಯವಹರಿಸಲು ಅನ್ಯ ಭಾಷೆಗಳನ್ನು ಕಲಿಯುವುದು ತಪ್ಪಲ್ಲ. ಆದರೆ, ಅವುಗಳ ವ್ಯಾಮೋಹದಲ್ಲಿ ಕನ್ನಡವನ್ನು ಮರೆಯಬಾರದು ಎಂದು ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು.

    ಪುನೀತ್ ರಾಜ್‌ಕುಮಾರ್ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ ಮಂಗಳವಾರ ಆಯೋಜಿಸಿದ್ದ 67ನೇ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ರಾಷ್ಟ್ರಧ್ವಜಾರೋಹಣ ನೆರವೇರಿಸಿ, ಪಥಸಂಚಲನ ವೀಕ್ಷಿಸಿ, ಗೌರವ ವಂದನೆ ಸ್ವೀಕರಿಸಿ, ನಂತರ ಮಾತನಾಡಿದರು. ಭಾರತದ ಇತಿಹಾಸದಲ್ಲೇ ಸುವರ್ಣಯುಗ ಸೃಷ್ಟಿ ಮಾಡಿ, ಈ ನಾಡಿನ ಕಲೆ, ಭಾಷೆ ಹಾಗೂ ಸಂಸ್ಕೃತಿಂಯನ್ನು ಶ್ರೀಮಂತಗೊಳಿಸಿದ ವಿಜಯನಗರ ಸಾಮ್ಯಾಜ್ಯ ಇಂದು ವಿಜಯನಗರ ಜಿಲ್ಲೆಯಾಗಿ ಅಸ್ತಿತ್ವಕ್ಕೆ ಬಂದಿರುವುದು ಹೆಮ್ಮೆಯ ಸಂಗತಿ. ಕನ್ನಡನಾಡು ವಿವಿಧ ಮತ, ಪಂಥ, ಧರ್ಮಗಳ ಸಂಗಮವಾಗಿದೆ. ಭವ್ಯ, ಸಾಂಸ್ಕೃತಿಕ ಪರಂಪರೆ ಹೊಂದಿದೆ. ಕನ್ನಡ ಸಾಹಿತ್ಯಕ್ಕೆ 8 ಜ್ಞಾನಪೀಠ ಪ್ರಶಸ್ತಿಗಳು ಸಂದಿರುವುದು ತಾಯಿ ಭುವನೇಶ್ವರಿಗೆ ಕಿರೀಟ ಪ್ರಾಯವಾಗಿದೆ ಎಂದರು.

    ನಗರಸಭೆ ಅಧ್ಯಕ್ಷೆ ಸುಂಕಮ್ಮ, ನಗರಸಭೆ ಉಪಾಧ್ಯಕ್ಷ ಕೆ.ಆನಂದ್, ಸ್ಥಾಯಿ ಸಮಿತಿ ಅಧ್ಯಕ್ಷ ತಾರಿಹಳ್ಳಿ ಜಂಭುನಾಥ, ಜಿಲ್ಲಾಧಿಕಾರಿ ಅನಿರುದ್ಧ್ ಶ್ರವಣ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಆರುಣ್ ಕೆ, ಸಹಾಯಕ ಆಯುಕ್ತ ಸಿದ್ಧರಾಮೇಶ್ವರ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಶೋಕ ಜೀರೆ, ತಹಸೀಲ್ದಾರ್ ವಿಶ್ವಜಿತ್ ಮೆಹತಾ ಇತರರು ಇದ್ದರು.

    ಆಕರ್ಷಕ ಪಥ ಸಂಚಲನ
    ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಪರೇಡ್ ಕಮಾಂಡರ್ ಶಿವಕುಮಾರ್ ನೇತೃತ್ವದಲ್ಲಿ ಜಿಲ್ಲಾ ಪೊಲೀಸ್ ಇಲಾಖೆ, ಗೃಹ ರಕ್ಷಕ ದಳ, ಭಾರತ ಸೇವಾ ದಳ, ಅಂಗನವಾಡಿ, ಆಶಾ ಕಾರ್ಯಕರ್ತೆಯರು ಹಾಗೂ ನರೇಗಾ ಪ್ರೇಕರು ಆಕರ್ಷಕವಾಗಿ ಪಥ ಸಂಚಲನ ನಡೆಸಿದರು. ಬಳಿಕ ಸಾಂಸ್ಕೃತಿ ಕಾರ್ಯಕ್ರಮದಲ್ಲಿ ಆನಂತಶಾಯನಗುಡಿ ಸರ್ಕಾರಿ ಪ್ರೌಢ ಶಾಲೆ, ಕಾಳಘಟ್ಟ ಹಾಗೂ ತಿಮ್ಮಲಾಪುರ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿಗಳಿಂದ ನೃತ್ಯ ಪ್ರದರ್ಶಿಸಲಾಯಿತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಲಾ ತಂಡಗಳಿಂದ ನಾಡ ಭಕ್ತಿ ಗೀತೆಗಳಿಗೆ ಆಕರ್ಷಕವಾಗಿ ಹೆಜ್ಜೆ ಹಾಕಿ ಮನ ಸೆಳದರು.

    ಹಾಡಿನ ಮೂಲಕ ಗಮನ ಸೆಳೆದ ಜೊಲ್ಲೆ
    ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ಮಾತಿನ ಮಧ್ಯೆ ಹಾಡುವ ಮೂಲಕ ಗಮನ ಸೆಳೆದರು. ‘ಹಚ್ಚೇವು ಕನ್ನಡದ ದೀಪ’ ಗೀತೆಯೊಂದಿಗೆ ಭಾಷಣದ ಆರಂಭಿಸಿ, ನಡುವೆ ‘ಬಾಟಲಿ ಹಾಲು, ಚಾಕೊಲೇಟ್ ತಿನ್ನಿಸಿ, ಮಮ್ಮಿ ಡ್ಯಾಡಿ ಎಂದು ಬೆಳೆದು, ಪಾಪ್ ಸಾಂಗ್ ಹಾಡುವ ಹುಡುಗಿಯನ್ನು ಕನ್ನಡಿ ಹೇಗೆನ್ನಲಯ್ಯ’ ಎಂಬ ಹಾಡಿನ ಮೂಲಕ ಕನ್ನಡ ಭಾಷೆ, ಸಂಸ್ಕೃತಯ ಮಹತ್ವ ಸಾರಿದರು.

    ಸಾಧಕರಿಗೆ ಸನ್ಮಾನ
    ರಂಗಭೂಮಿ ಕಲಾವಿದ ಕಟಗಿ ಪ್ರಕಾಶಬಾಬು, ಉಮಾಮಹೇಶ್ವರ, ಸಾಹಿತಿಗಳಾದ ನಾಗರಾಜ ಬಡಿಗೇರ, ಶೋಭಾ ಶಂಕರಾನಂದ, ಡಾ.ನಂದೀಶ್ವರ ದಂಡೆ, ಸೋದಾ ವಿರೂಪಾಕ್ಷಗೌಡ, ಚಿತ್ರ ಕಲಾವಿದರಾದ ಉದಯಕುಮಾರ, ಈಡಿಗರ ವೆಂಕಟೇಶ, ಕೋಲಾಟದ ಹುಲುಗಪ್ಪ, ಜನಪದ ಹಾಡುಗಾರ ಶ್ರೀವಾಲ್ಯ ನಾಯ್ಕ, ಜಾನಪದ ಕಲಾವಿದ ಎಂ.ಜೆ.ಶಿವನಾಗಪ್ಪ, ಶಿಕ್ಷಣ ರಂಗದ ಡಾ.ಸಂಗಮೇಶ ಗಣಿ, ನ್ಯಾಯಾಂಗ ಕ್ಷೇತ್ರದ ಕೆ.ಪ್ರಭಾಕರರಾವ್, ನಾಟಿ ವೈದ್ಯ ಟಿಪ್ಪುಸಾಬ್, ಕನ್ನಡ ಸಂಘಟಕ ತಿರುಮಲ, ಸಮಾಜಸೇವಕ ಎಂ.ವಿರೂಪಾಕ್ಷಯ್ಯ ಸ್ವಾಮಿ, ಪತ್ರಕರ್ತ ರಾಂಪ್ರಸಾದ್ ಗಾಂಧಿ, ಹೋಟೆಲ್ ಶುಚಿತ್ವದಲ್ಲಿ ಸುನಿತಾ ವಿಜಯಕುಮಾರ್, ಆರ್.ಎಲ್.ಶರ್ಮ, ಪುಷ್ಪಾರೆಡ್ಡಿ ಇತರರನ್ನು ಸನ್ಮಾನಿಸಲಾಯಿತು. ಪ್ರಬಂಧ ಸ್ಪರ್ಧೆ ವಿಜೇತರಾದ ಹೊಸಪೇಟೆ ಸರ್ಕಾರಿ ಆದರ್ಶ ವಿದ್ಯಾಲಯದ ರಚನಾ ಎಚ್.ಟಿ.(ಪ್ರಥಮ), ಹೊಸಪೇಟೆಯ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯ ವಿಶಲಾಕ್ಷಿ(ದ್ವಿತೀಯ)ಗೆ ಬಹುಮಾರನ ನೀಡಲಾಯಿತು.

    ವ್ಯವಹಾರಕ್ಕಾಗಿ ಅನ್ಯಭಾಷೆ ಕಲಿಕೆ ತಪ್ಪಲ್ಲ, ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ಅಭಿಮತ
    ಹೊಸಪೇಟೆಯಲ್ಲಿ ಆಯೋಜಿಸಿದ್ದ ಕರ್ನಾಟಕ ರಾಜ್ಯೋತ್ಸವದಲ್ಲಿ ವಿವಿಧ ಶಾಲಾ ವಿದ್ಯಾರ್ಥಿಗಳು ಆಕರ್ಷಕವಾಗಿ ಸಾಂಸ್ಕೃತಿಕ ನೃತ್ಯ ಪ್ರದರ್ಶಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts