More

    ದಾರಿದೀಪವಾಗಿವೆ ದಾಸರ ಕೀರ್ತನೆಗಳು

    ಹೊಸಪೇಟೆ: ಜೀವನದಲ್ಲಿ ಎದುರಾಗುವ ಎಲ್ಲ ಸಮಸ್ಯೆ, ಕಾಯಿಲೆಗಳನ್ನು ನಿವಾರಿಸುವ ಶಕ್ತಿ ಪುರಂದರ ದಾಸರ ಕೀರ್ತನೆಗಳಲ್ಲಿ ಅಡಗಿದೆ ಎಂದು ಸಹಾಯಕ ಆಯುಕ್ತ ಹಾಗೂ ಹಂಪಿ ವಿಶ್ವಪಾರಂಪರಿಕ ಪ್ರದೇಶ ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷ ಸಿದ್ಧರಾಮೇಶ್ವರ ಹೇಳಿದರು.

    ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ವಿಶ್ವವಿಖ್ಯಾತ ಹಂಪಿಯ ವಿಜಯವಿಠ್ಠಲ ದೇವಸ್ಥಾನದ ಸಮೀಪದ ಬ್ರಹ್ಮವಿಠ್ಠಲ ಮಂಟಪದಲ್ಲಿ ಶನಿವಾರ ಆಯೋಜಿಸಿದ್ದ ಶ್ರೀ ಪುರಂದರದಾಸರ ಆರಾಧನೋತ್ಸವ ಉದ್ಘಾಟಿಸಿ ಮಾತನಾಡಿದರು.

    ಮನುಕುಲಕ್ಕೆ ಒಳಿತಾಗುವ ಅಂಶಗಳೇ ತುಂಬಿಕೊಂಡಿರುವ ದಾಸರ ಕೀರ್ತನೆಗಳ ಸಂದೇಶವನ್ನು ಎಲ್ಲರೂ ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ದಾಸರು ರಚಿಸಿದ ಕೀರ್ತನೆಗಳು ಅರ್ಥಗರ್ಭಿತವಾಗಿವೆ ಎಂದರು.
    ಪುರಂದರದಾಸರು ಹಂಪಿಯ ಸ್ಮಾರಕಗಳ ಪರಿಸರದಲ್ಲಿ ಜೀವಿಸಿದ್ದರು. ಈ ಹಿನ್ನೆಲೆಯಲ್ಲಿ ಹಂಪಿ ಪರಿಸರದಲ್ಲಿ ಎರಡು ದಿನ ವಿಶೇಷ ಪೂಜೆ, ಸಂಗೀತ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಪ್ರತಿ ವರ್ಷ ಹಂಪಿಯ ಶ್ರೀ ವಿರೂಪಾಕ್ಷೇಶ್ವರ ದೇವಸ್ಥಾನದ ಆವರಣದಲ್ಲಿ ಆಯೋಜಿಸಲಾಗುತ್ತಿತ್ತು. ಈ ಬಾರಿ ರಾಜ ವಂಶಸ್ಥ ಶ್ರೀಕೃಷ್ಣ ದೇವರಾಯರ ಸಲಹೆ ಮೇರೆಗೆ ಬ್ರಹ್ಮವಿಠ್ಠಲ ಮಂಟಪದಲ್ಲಿ ಆಯೋಜಿಸಲಾಗಿದೆ ಎಂದರು.
    ಡಾ.ಮಾನಕರಿ ಶ್ರೀವಾಸಾಚಾರ್, ಪುರಂದರ ದಾಸರ ಕೀರ್ತನೆಗಳ ಕುರಿತು ಉಪನ್ಯಾಸ ನೀಡಿದರು. ಮಂತ್ರಾಲಯದ ಶ್ರೀಗುರು ಸಾರ್ವಭೌಮ ದಾಸಸಾಹಿತ್ಯ ಪ್ರಾಜೆಕ್ಟ್‌ನ ವ್ಯವಸ್ಥಾಪಕ ಪದ್ಮನಾಭಾಚಾರ್ಯ, ಪ್ರಾಜೆಕ್ಟ್‌ನ ಸಂಚಾಲಕರಾದ ಅನಂತಾಚಾರ್, ಪವನಾಚಾರ್, ಅನಂತ ಪದ್ಮನಾಭರಾವ್ ಪಾಲ್ಗೊಂಡಿದ್ದರು.

    ವಿಶೇಷ ಪೂಜೆ ಸಲ್ಲಿಕೆ: ಪುರಂದರ ದಾಸರ ಮಂಟಪದಲ್ಲಿ ಶನಿವಾರ ಬೆಳಗ್ಗೆಯಿಂದಲೇ ವಿಶೇಷ ಪೂಜೆ ನಡೆಯಿತು. ಬೆಳಗ್ಗೆ ಪಂಚಾಮೃತಾಭಿಷೇಕ, ಜಲಾಭಿಷೇಕ, ವಿಶೇಷ ಅಂಕಾರ ಸೇವೆ ಹಾಗೂ ನೈವೇದ್ಯ ಅರ್ಪಿಸಿ ಪೂಜೆ ಸಲ್ಲಿಸಲಾಯಿತು. ಮಂಟದಲ್ಲಿ ಪುರಂದರ ದಾಸರ ಭಾವಚಿತ್ರದ ಮೆರವಣಿಗೆ ನಡೆಸಲಾಯಿತು. ದಾಸ ಸಾಹಿತ್ಯ ಪ್ರಾಜೆಕ್ಟ್‌ನ ವಿಜಯನಗರ, ಬಳ್ಳಾರಿ, ಕರ್ನೂಲು, ಆದೋನಿಯಿಂದ ಆಗಮಿಸಿದ್ದ ಭಜನ ಮಂಡಳಿಗಳಿಂದ ದಾಸರ ಕೀರ್ತನೆಗಳನ್ನು ಹಾಡಲಾಯಿತು.

    ದಿನವಿಡೀ ಹರಿಯಿತು ಭಕ್ತಿ ಸುಧೆ: ಪುರಂದರ ದಾಸರ ಆರಾಧನೋತ್ಸವ ಅಂಗವಾಗಿ ಶನಿವಾರ ದಿನವಿಡೀ ಖ್ಯಾತ ಸಂಗೀತ ಕಲಾವಿದರಿಂದ ಭಕ್ತಿಸುಧೆ ಹರಿಯಿತು. ಪಂಡಿತ್ ನಾಗರಾಜ್ ಹವಾಲ್ದಾರ್ ಅವರಿಂದ ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ, ಸುಧಾ ರಂಗನಾಥ್ ಅವರಿಂದ ಕರ್ನಾಟಕ ಸಂಗೀತ ಗಾಯನ, ರೂಪಾಲಿಕಾ ತಂಡದಿಂದ ಸಮೂಹ ನೃತ್ಯ, ಅಮೃತ ತಂಡದಿಂದ ನೃತ್ಯ ರೂಪಕ, ಪಿ.ಭವ್ಯಾ ಅವರಿಂದ ಗಿರಿಜಾ ಕಲ್ಯಾಣ ನೃತ್ಯ ಹಾಗೂ ಇಂದ್ರಾಣಿ ತಂಡದಿಂದ ಸಮೂಹ ನೃತ್ಯ ಪ್ರದರ್ಶನ ನೋಡುಗರ ಮನ ಸೆಳೆಯಿತು.

    ಕಾರ್ಯಕ್ರಮಕ್ಕೆ ನೀರಸ ಪ್ರತಿಕ್ರಿಯೆ: ಹಂಪಿಯ ವಿಜಯವಿಠ್ಠಲ ದೇವಸ್ಥಾನದ ಸಮೀಪದ ಬ್ರಹ್ಮವಿಠ್ಠಲ ಮಂಟಪದ ಆವರಣದಲ್ಲಿ ಶನಿವಾರ ಸಂಜೆ ಆಯೋಜಿಸಿದ್ದ ಪುರಂದರದಾಸರ ಆರಾಧನೋತ್ಸವಕ್ಕೆ ಸಾರ್ವಜನಿಕರಿಂದ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು. ವೇದಿಕೆ ಮುಂಭಾಗದಲ್ಲಿ ಹತ್ತಾರು ಜನರ ಹೊರತಾಗಿ ನೂರಾರು ಕುರ್ಚಿಗಳು ಖಾಲಿಖಾಲಿಯಾಗಿದ್ದವು.
    ಪ್ರತಿ ವರ್ಷ ಇಲ್ಲಿನ ಶ್ರೀ ವಿರೂಪಾಕ್ಷ ದೇವಸ್ಥಾನ ಆವರಣದಲ್ಲಿ ಪುರಂದರ ದಾಸರ ಆರಾಧನೆಯನ್ನು ಆಯೋಜಿಸಲಾಗುತ್ತಿತ್ತು. ಆದರೆ, ಈ ಬಾರಿ ಬ್ರಹ್ಮವಿಠ್ಠಲ ಮಂಟಪದ ಆವರಣದಲ್ಲಿ ಆಯೋಜಿಸಿದ್ದರಿಂದ ಅನೇಕರಿಗೆ ಗೊಂದಲವಾಗಿದೆ. ವಿರೂಪಾಕ್ಷ ದೇವಸ್ಥಾನದಿಂದ ಬಹು ದೂರದಲ್ಲಿರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲಿಲ್ಲ. ಮುಖ್ಯವಾಗಿ ಆಹ್ವಾನ ಪತ್ರಿಕೆಯಲ್ಲಿರುವ ಸಚಿವ, ಶಾಸಕರು ಹಾಗೂ ಸ್ಥಳೀಯ ಗ್ರಾಪಂ ಅಧ್ಯಕ್ಷರು, ಸದಸ್ಯರು ಸೇರಿದಂತೆ ಮುಖಂಡರು ಕಾರ್ಯಕ್ರಮಕ್ಕೆ ಆಗಮಿಸಿರಲಿಲ್ಲ. ಜಿಲ್ಲಾಧಿಕಾರಿಗಳೂ ಕಾರ್ಯಕ್ರಮಕ್ಕೆ ಗೈರಾಗಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts