More

    ಅಯೋದ್ಯೆ-ಅಂಜನಾದ್ರಿ ರೈಲು ಮಾರ್ಗವಾಗಲಿ- ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಒತ್ತಾಯ

    ಹೊಸಪೇಟೆ: ಅಯೋಧ್ಯೆಯಿಂದ ಅಂಜನಾದ್ರಿಗೆ ನೇರ ರೈಲು ಮಾರ್ಗ ನಿರ್ಮಿಸಲಿ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಒತ್ತಾಯಿಸಿದರು. ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿದರು. ಅಂಜನಾದ್ರಿ ಅಭಿವೃದ್ಧಿಗೆ ಸರ್ಕಾರ ಘೋಷಿಸಿರುವ 120 ಕೋಟಿ ರೂ.ಅನುದಾನ ಚುನಾವಣಾ ಭರವಸೆಯಾಗಿ ಉಳಿಯದೇ ತ್ವರಿತವಾಗಿ ಕಾರ್ಯರೂಪಕ್ಕೆ ಬರಬೇಕು ಎಂದು ಒತ್ತಾಯಿಸಿದರು.

    ಹನುಮದ್ ವ್ರತ ಹಿನ್ನೆಲೆಯಲ್ಲಿ ರಾಜ್ಯ, ಹೊರ ರಾಜ್ಯಗಳಿಂದ ಸಾವಿರಾರು ಹನುಮ ಮಾಲಾಧಾರಿಗಳು ಆಗಮಿಸಿದ್ದು, ಅಭೂತಪೂರ್ವವಾಗಿ ಯಶಸ್ಸು ಕಂಡಿದೆ. ದೇಶದ ವಿವಿಧ ರಾಜ್ಯಗಳಲ್ಲಿ ಸದ್ಯ ಚುನಾವಣೆ ನಡೆಯುತ್ತಿರುವುದು, ಕರ್ನಾಟಕದಲ್ಲೂ ಕೆಲ ತಿಂಗಳಲ್ಲಿ ಚುನಾವಣೆ ಎದುರಾಗಲಿದೆ. ಈ ಕಾರಣಕ್ಕೆ ಅನೇಕ ರಾಜಕೀಯ ನಾಯಕರೂ ಅಂಜನಾದ್ರಿಗೆ ಆಗಮಿಸಿದ್ದರು. ದೇವರ ಬಗೆಗಿನ ಶ್ರದ್ಧೆ, ಭಕ್ತಿ ಸದಾ ಮುಂದುವರಿಯಲಿ ಎಂದರು.

    ಧಾರ್ಮಿಕ ದತ್ತಿ ಇಲಾಖೆ ನಿಯಮಾವಳಿಯಂತೆ ಅನ್ಯ ಧರ್ಮೀಯರು ವ್ಯಾಪಾರ ಮಾಡುವಂತಿಲ್ಲ. ಆದರೆ, ಗೋ ಹಂತಕರು, ನಾಸ್ತಿಕರು ಅಂಜನಾದ್ರಿಯಲ್ಲಿ ವ್ಯಾಪಾರ ಮಾಡುತ್ತಿದ್ದಾರೆ. ಜತೆಗೆ ಅಂಜನಾದ್ರಿಯಲ್ಲಿ ಪ್ರವಾಸೋದ್ಯಮ ಉತ್ತೇಜನಗೊಳ್ಳುತ್ತಿದ್ದಂತೆ ಆನೆಗೊಂದಿ ಭಾಗದಲ್ಲಿ ಅನಧಿಕೃತ ರೆಸಾರ್ಟ್‌ಗಳು ತಲೆ ಎತ್ತಿವೆ. ಡ್ರಗ್ಸ್, ವೇಶ್ಯಾವಾಟಿಕೆ ಅಡ್ಡೆಗಳಾಗಿದ್ದು, ಪುಣ್ಯ ಕ್ಷೇತ್ರ ಅಪವಿತ್ರಗೊಳ್ಳುತ್ತಿದೆ. ತಕ್ಷಣವೇ ಅನೈತಿಕ ಚಟುವಟಿಕೆಗಳನ್ನು ತಡೆಗಟ್ಟಬೇಕು ಎಂದು ಆಗ್ರಹಿಸಿದರು.

    ದೆಹಲಿಯ ಶ್ರದ್ಧಾ ಕೊಲೆ ಪ್ರಕರಣದಿಂದ ಮನುಕುಲವೇ ತಲೆ ತಗ್ಗಿಸುವಂತಾಗಿದೆ. ಪಾಶ್ಚಿಮಾತ್ಯ ಪದ್ಧತಿಯಾಗಿರುವ ಲಿವಿಂಗ್ ಟು ಗೆದರ್ ನೆಪದಲ್ಲಿ ಹಿಂದು ಹೆಣ್ಣು ಮಕ್ಕಳ ಶೋಷಣೆಯಾಗುತ್ತಿದೆ. ಮಹಿಳೆಯರ ರಕ್ಷಣೆಗಾಗಿ ಕೇಂದ್ರ ಸರ್ಕಾರ ಸಹಜೀವನ ಪದ್ಧತಿಯನ್ನು ನಿಷೇಧಿಸಬೇಕು. ಅಲ್ಲದೇ ಇತ್ತೀಚೆಗೆ ಲವ್ ಜಿಹಾದ್ ಹೆಚ್ಚುತ್ತಿದೆ. ಹಿಂದು ಹೆಣ್ಣು ಮಕ್ಕಳನ್ನ ಪುಸಲಾಯಿಸಿ ತಮ್ಮ ಬಲೆಗೆ ಬೀಳಿಸಿಕೊಂಡು, ಬಳಿಕ ಭಯೋತ್ಪಾದನೆಯಲ್ಲಿ ತೊಡಗಿಸಲಾಗುತ್ತಿದೆ. ಉತ್ತರ ಪ್ರದೇಶ, ಆಸ್ಸಾಂ ಮಾದರಿಯಲ್ಲಿ ಕರ್ನಾಟಕ ಸರ್ಕಾರ ಲವ್ ಜಿಹಾದ್ ವಿರುದ್ಧ ಕಾನೂನು ರೂಪಿಸಬೇಕು ಎಂದು ಒತ್ತಾಯಿಸಿದರು.

    ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ 25 ಜನ ಪ್ರಖರ ಹಿಂದು ಪರ ಹೋರಾಟಗಾರರಿಗೆ ಬಿಜೆಪಿ ಟಿಕೆಟ್ ಕೊಡಬೇಕು. ರಾಜ್ಯ ಮತ್ತು ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ತರುವಲ್ಲಿ ನಮ್ಮಗಳ ಪಾತ್ರವೂ ಇದೆ. ಬಿಜೆಪಿ ಯಾರಪ್ಪನ ಪಕ್ಷ ಅಲ್ಲ. ಆದರೂ, ಬಿಜೆಪಿ ಟಿಕೆಟ್ ದೊರೆಯದಿದ್ದರೆ, ಶ್ರೀರಾಮ ಸೇನೆಯಿಂದ ಜೇವರ್ಗಿ ತಾಲೂಕಿನ ಕರುಣೇಶ್ವರ ಮಠ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ, ಧಾರವಾಡದ ಪರಮಾತ್ಮ ಸ್ವಾಮೀಜಿ ಸ್ಪರ್ಧಿಸುವರು. ಅವರೊಂದಿಗೆ ನಾನೂ ಕೂಡ ಒಂದು ಕ್ಷೇತ್ರದಲ್ಲಿ ಕಣಕ್ಕಿಳಿಯುತ್ತೇನೆ.
    | ಪ್ರಮೋದ್ ಮುತಾಲಿಕ್, ಶ್ರೀರಾಮಸೇನೆ ರಾಷ್ಟ್ರೀಯ ಅಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts