More

    ಹೊಸದುರ್ಗದಲ್ಲಿ ಕೋತಿಗಳ ದಾಳಿಗೆ ಕಂಗೆಟ್ಟ ಜನ

    ಎಂ.ಯೋಗೀಶ್ ಹೊಸದುರ್ಗ
    ಹೊಸದುರ್ಗದಲ್ಲಿ ಮೊದಲೆಲ್ಲ ಕರಡಿಗಳ ಹಾವಳಿ ಹೆಚ್ಚಿತ್ತು. ಆದರೆ, ಈಚೆಗೆ ಮಂಗಗಳ ಹಿಂಡು ಜನರನ್ನು ಭಯಭೀತಿಗೊಳಿಸಿವೆ.

    ಪಟ್ಟಣದ ಮುಖ್ಯರಸ್ತೆ, ವಿನಾಯಕ ಬಡಾವಣೆ, ಎಸ್‌ಜೆಎಂ ಬಡಾವಣೆ, ವಿಜಯ ನಗರ ಸೇರಿ ವಿವಿಧ ಬಡಾವಣೆಗಳಲ್ಲಿ ಕಳೆದ ಕೆಲವು ತಿಂಗಳುಗಳಿಂದ ಕೋತಿಗಳ ಹಾವಳಿ ಹೆಚ್ಚಾಗಿದೆ. ಜನರು ಮನೆಯಿಂದ ಹೊರಬರಲು ಹೆದರುತ್ತಿದ್ದಾರೆ.

    ಕಳೆದ ವಾರ ಮುಖ್ಯರಸ್ತೆಯಲ್ಲಿರುವ ಜೂನಿಯರ್ ಕಾಲೇಜು ಬಳಿ ಕೋತಿಗಳ ಗುಂಪು ವಿದ್ಯಾರ್ಥಿ ಮೇಲೆ ದಾಳಿ ನಡೆಸಿದೆ.ಇದೇ ರಸ್ತೆಯಲ್ಲಿ ಮಹಿಳೆಯೊಬ್ಬರ ಮೇಲೆ ದಾಳಿ ಮಾಡಿ ಗಾಯಗೊಳಿಸಿವೆ.

    ಮನೆಗಳ ಮೇಲೆ ದಾಳಿಯಿಡುವ ಕೋತಿಗಳು ಕೈಗೆ ಸಿಕ್ಕ ವಸ್ತುಗಳನ್ನು ಹೊತ್ತೊಯ್ಯುತ್ತವೆ. ಒಣಗಲು ಹಾಕಿದ್ದ ಬಟ್ಟೆಗಳನ್ನು ಹರಿದು ಹಾಕುತ್ತವೆ.

    ಬಾಗಿಲು ತೆಗೆದು ಮನೆಗೆ ನುಗ್ಗುವ ಕೋತಿಗಳು ವಿರೋಧಿಸಿದವರ ಮೇಲೆ ದಾಳಿ ಮಾಡಿ ಗಾಯಗೊಳಿಸುತ್ತಿವೆ. ರಸ್ತೆಯಲ್ಲಿ ತೆರಳುವ ಮಕ್ಕಳು, ಮಹಿಳೆಯರ ಮೇಲೆ ಗುಂಪಾಗಿ ಎರಗುತ್ತಿವೆ.

    ಹೊಸದುರ್ಗದಲ್ಲಿ ಕೋತಿಗಳ ದಾಳಿಗೆ ಕಂಗೆಟ್ಟ ಜನ

    ವಿನಾಯಕ ಬಡಾವಣೆಯ ಮೊಬೈಲ್ ಟವರ್‌ನಲ್ಲಿ ಬಿಡಾರ ಹೂಡಿರುವ ಇಪ್ಪತ್ತಕ್ಕೂ ಹೆಚ್ಚು ಕೋತಿಗಳ ಗುಂಪು ಬೆಳಗಾಗುತ್ತಲೆ ಮನೆಗಳಿಗೆ ನುಗ್ತುತ್ತವೆ. ಸಂಜೆಯಾಗುತ್ತಲೆ ಟವರ್ ಏರಿ ನಿದ್ರೆಗೆ ಜಾರುತ್ತವೆ.

    ಕೋತಿಗಳ ಕಾಟದಿಂದ ಬೇಸತ್ತಿರುವ ಜನರ ಸಮಸ್ಯೆಗೆ ಪರಿಹಾರ ನೀಡಲು ಪುರಸಭೆ ಅಧಿಕಾರಿಗಳು ವಿಫಲರಾಗಿದ್ದಾರೆ. ಕೋತಿಗಳನ್ನು ಹಿಡಿಯುವುದು ಅರಣ್ಯ ಇಲಾಖೆ ಕೆಲಸ, ನಮಗೆ ಸಂಬಂಧವಿಲ್ಲ ಎಂದು ಕೈಚೆಲ್ಲುತ್ತಾರೆ.

    ಚುನಾಯಿತ ಆಡಳಿತವಿಲ್ಲದ ಪುರಸಭೆಯಲ್ಲಿ ಉಪವಿಭಾಗಾಧಿಕಾರಿ ಆಡಳಿತಾಧಿಕಾರಿಗಳಾಗಿ ಕಾರ್ಯನಿರ್ವಹಿಸುತ್ತಿದ್ದು, ಅವರು ಇತ್ತ ತಲೆ ಹಾಕುತ್ತಿಲ್ಲ.

    ಆಡಳಿತದ ಜ್ಞಾನವಿಲ್ಲದ ಪರಿಸರ ಅಭಿಯಂತರನ್ನು ಮುಖ್ಯಾಧಿಕಾರಿಯಾಗಿ ನೇಮಿಸಿರುವ ಸರ್ಕಾರ ಸಮಸ್ಯೆ ಹೆಚ್ಚಾಗಲು ಕಾರಣವಾಗಿದೆ. ಪುರಸಭೆ ಬೇಜವಾಬ್ದಾರಿತನದಿಂದ ಜನರು ಕೋತಿಗಳ ದಾಳಿಗೆ ಒಳಗಾಗುತ್ತಿದ್ದಾರೆ ಎಂಬುದು ಜನರ ಆರೋಪ.

    ಅವ್ಯವಸ್ಥೆಯಿಂದ ಕೂಡಿರುವ ಪುರಸಭೆ ಆಡಳಿತವನ್ನು ಸರಿದಾರಿಗೆ ತರುವ ಕೆಲಸವನ್ನು ಜಿಲ್ಲಾಧಿಕಾರಿಗಳು ಮಾಡಬೇಕು. ಕೋತಿಗಳ ಕಾಟದಿಂದ ಜನರನ್ನು ಮುಕ್ತಗೊಳಿಸಬೇಕು ಎನ್ನುವುದು ಜನರ ಒತ್ತಾಯ.

    ಕೋತಿಗಳ ಉಪಟಳ ಹೆಚ್ಚಾಗಿರುವ ಕುರಿತು ಮಾಹಿತಿಯಿದೆ. ಕೋತಿಗಳನ್ನು ಹಿಡಿಯುವುದು ಅರಣ್ಯ ಇಲಾಖೆಯ ಕೆಲಸ. ಈ ಸಂಬಂಧ ಅರಣ್ಯಾಧಿಕಾರಿಗಳಿಗೆ ಪತ್ರ ಬರೆದು ಕೋತಿಗಳನ್ನು ಹಿಡಿಸುವ ಕೆಲಸ ಮಾಡಲಾಗುವುದು.
    ತಿಮ್ಮರಾಜು, ಪುರಸಭೆ ಮುಖ್ಯಾಧಿಕಾರಿ

    ಪುರಸಭೆಯ ವ್ಯಾಪ್ತಿಯಲ್ಲಿರುವ ಮಂಗಳಗಳನ್ನು ಹಿಡಿಯುವ ಕೆಲಸ ಸ್ಥಳೀಯ ಆಡಳಿತದ್ದಾಗಿರಲಿದೆ. ಕಾಡು ಪ್ರಾಣಿಗಳ ಉಪಟಳವನ್ನು ಅರಣ್ಯ ಇಲಾಖೆ ನಿರ್ವಹಿಸುತ್ತದೆ. ಸಾರ್ವಜನಿಕರ ಹಿತದೃಷ್ಟಿಯಿಂದ ಪುರಸಭೆ ಅಧಿಕಾರಿಗಳು ಸಹಕಾರ ನೀಡಿದರೆ ಕೋತಿಗಳನ್ನು ಹಿಡಿದು ಬೇರೆಡೆ ಬಿಡುವ ಕೆಲಸವನ್ನು ಅರಣ್ಯ ಇಲಾಖೆ ಸಿಬ್ಬಂದಿ ಮಾಡುತ್ತಾರೆ.
    ಸುನಿಲ್‌ಕುಮಾರ್, ವಲಯ ಅರಣ್ಯಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts