More

    26ರಂದು ರಾಷ್ಟ್ರೀಯ ಹೆದ್ದಾರಿ ಸಂಚಾರ ತಡೆ: ರೈತ ಸಂಘ-ಹಸಿರು ಸೇನೆ ಪ್ರಧಾನ ಕಾರ್ಯದರ್ಶಿ ಜೆ.ಕಾರ್ತಿಕ್ ಹೇಳಿಕೆ

    ಹೊಸಪೇಟೆ: ರೈತರಿಗೆ ಮಾರಕವಾಗಿರುವ ಮೂರು ಕೃಷಿ ಕಾಯ್ದೆಗಳನ್ನು ಸಂಸತ್ ಅಧಿವೇಶನದಲ್ಲಿ ಅಧಿಕೃತವಾಗಿ ವಾಪಸ್ ಪಡೆಯಬೇಕೆಂದು ಒತ್ತಾಯಿಸಿ ನ.26 ರಂದು ಟಿ.ಬಿ. ಡ್ಯಾಂ ಬಳಿ ಇರುವ ಗಣೇಶ ದೇವಸ್ಥಾನದ ಹತ್ತಿರ ರಾಷ್ಟ್ರೀಯ ಹೆದ್ದಾರಿ ಸಂಚಾರ ತಡೆ ನಡೆಸಲಾಗುವುದು ಎಂದು ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಪ್ರಧಾನ ಕಾರ್ಯದರ್ಶಿ ಜೆ.ಕಾರ್ತಿಕ್ ಹೇಳಿದರು.

    ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಸಂಯುಕ್ತ ಹೋರಾಟ ಕರ್ನಾಟಕ ಸಂಘಟನೆ ನೇತೃತ್ವದಲ್ಲಿ ರೈತ, ಕಾರ್ಮಿಕ ಸೇರಿದಂತೆ ವಿವಿಧ ಸಂಘಟನೆಗಳೊಂದಿಗೆ ಬೆಳಗ್ಗೆ 9 ರಿಂದ ಸಂಜೆ 5 ಗಂಟೆವರೆಗೆ ರಸ್ತೆ ಸಂಚಾರ ಬಂದ್ ಮಾಡಿ ಪ್ರತಿಭಟನೆ ನಡೆಸಲಾಗುತ್ತದೆ. ರಾಜ್ಯದಲ್ಲೂ ಕೃಷಿ ತಿದ್ದುಪಡಿ ಕಾಯ್ದೆ, ಜಾನುವಾರು ಹತ್ಯೆ ನಿಷೇಧ ಕಾಯ್ದೆಗಳನ್ನು ಹಿಂಪಡೆಯಬೇಕು. ಅತಿವೃಷ್ಟಿಯಿಂದ ರೈತರು ಕಂಗಾಲಾಗಿದ್ದಾರೆ. ಪ್ರತಿ ಎಕರೆ ಭತ್ತ, ಮೆಕ್ಕೆಜೋಳಕ್ಕೆ 25 ಸಾವಿರ ರೂ, ಮೆಣಸಿನಕಾಯಿಗೆ 80 ಸಾವಿರ ರೂ., ಈರುಳ್ಳಿಗೆ 35 ಸಾವಿರ ಸೇರಿದಂತೆ ವಿವಿಧ ಬೆಳೆಗಳಿಗೆ ವೈಜ್ಞಾನಿಕವಾಗಿ ಪರಿಹಾರ ನಿಗದಿ ಮಾಡಬೇಕು ಎಂದು ಆಗ್ರಹಿಸಿದರು.

    ಸಂಘದ ತಾಲೂಕು ಅಧ್ಯಕ್ಷ ಸಣ್ಣಕ್ಕಿ ರುದ್ರಪ್ಪ ಮಾತನಾಡಿ, ವಿಜಯನಗರ ಜಿಲ್ಲೆಯಲ್ಲಿ ಮಳೆಯಿಂದ ಅಪಾರ ಬೆಳೆ ಹಾನಿಯಾದರೂ ಸಚಿವರು ಎಲ್ಲಿಗೂ ಭೇಟಿ ನೀಡಿಲ್ಲ. ತಾಲೂಕಿನಲ್ಲಿ 20 ಹೆಕ್ಟೇರ್ ರಾಗಿ, 10 ಹೆ. ಶೇಂಗಾ, 93 ಹೆ. ಮೆಕ್ಕೆಜೋಳ, 3 ಹೆ. ಕಬ್ಬು ಸೇರಿ ಒಟ್ಟು 217.10 ಹೆಕ್ಟೇರ್ ಬೆಳೆ ಹಾನಿಯಾಗಿದ್ದು, ಕೂಡಲೇ ಸೂಕ್ತ ಪರಿಹಾರ ವಿತರಣೆಗೆ ಮುಂದಾಗಬೇಕು ಎಂದು ಒತ್ತಾಯಿಸಿದರು. ಹತ್ತಿರದಲ್ಲಿರುವ ಐಎಸ್‌ಆರ್ ಕಾರ್ಖಾನೆ ಆರಂಭಿಸುವ ಮೂಲಕ ಕಬ್ಬು ಬೆಳೆಗಾರರ ಸಾಗಣೆ ವೆಚ್ಚ ಉಳಿಸಬೇಕೆಂದು ಮುಖಂಡ ಎಂ.ಜಂಬಯ್ಯ ನಾಯಕ ಆಗ್ರಹಿಸಿದರು. ಸಂಘಟನೆ ಸದಸ್ಯರಾದ ಆರ್.ಭಾಸ್ಕರ್ ರೆಡ್ಡಿ, ಎನ್.ನಾಗರತ್ನಮ್ಮ, ಸೋಮಶೇಖರ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts