More

    ಕಲ್ಲು ಗಣಿಗಾರಿಕೆಯಲ್ಲಿ ಸುರಕ್ಷತಾ ಕ್ರಮಕೈಗೊಳ್ಳದಿದ್ದರೆ ಪರವಾನಗಿ ರದ್ದು: ಬಳ್ಳಾರಿ ಡಿಸಿ ಪವನಕುಮಾರ್ ಮಾಲಪಾಟಿ ಎಚ್ಚರಿಕೆ

    ಹೊಸಪೇಟೆ: ಕಲ್ಲು ಗಣಿಗಾರಿಕೆ ನಡೆಸುವ ಗುತ್ತಿಗೆದಾರರು ಸುರಕ್ಷತಾ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಬಳ್ಳಾರಿ ಜಿಲ್ಲಾಧಿಕಾರಿ ಪವನಕುಮಾರ್ ಮಾಲಪಾಟಿ ಸೂಚಿಸಿದರು.

    ನಗರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪೊಲೀಸ್ ಇಲಾಖೆ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಗಣಿ ಸುರಕ್ಷತಾ ನಿರ್ದೇಶನಾಲಯ ಹಾಗೂ ಗಣಿ ಸುರಕ್ಷತಾ ಸಂಘದಿಂದ ಸೋಮವಾರ ಹಮ್ಮಿಕೊಂಡಿದ್ದ ಕಲ್ಲು ಗಣಿ ಸುರಕ್ಷತೆ, ಡ್ರಿಲ್ಲಿಂಗ್, ಸ್ಫೋಟಕ ಬಳಕೆ, ಅನಧಿಕೃತ ಗಣಿಗಾರಿಕೆ ತಡೆ ಕುರಿತ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸ್ಫೋಟಕ ಸಾಮಗ್ರಿ ಸಾಗಣೆ ಹಾಗೂ ಸಂಗ್ರಹಿಸುವಾಗ ಸುರಕ್ಷತಾ ಕ್ರಮ ಅನುಸರಿಸಬೇಕು. ಚಿಕ್ಕಬಳ್ಳಾಪುರದಲ್ಲಿ ನಡೆದ ಘಟನೆ ನೈಸರ್ಗಿಕವಾಗಿ ಸಂಭವಿಸಿದ್ದಲ್ಲ, ಅದು ಅಲ್ಲಿನ ಗುತ್ತಿಗೆದಾರರ ನಿರ್ಲಕ್ಷೃವೇ ಕಾರಣ. ಈ ರೀತಿ ಯಾರಾದರು ನಡೆದುಕೊಂಡರೆ ಕಾನೂನು ಕ್ರಮದ ಜತೆಗೆ ಪರವಾನಗಿ ರದ್ದುಪಡಿಸಲಾಗುವುದು ಎಂದು ಎಚ್ಚರಿಸಿದರು.

    ಎಸ್ಪಿ ಸೈದುಲು ಅದಾವತ್ ಮಾತನಾಡಿ, ಗಣಿಗಾರಿಕೆಗೆ ತರಬೇತಿ ಪಡೆದ ಕಾರ್ಮಿಕರನ್ನು ಬಳಸಿಕೊಳ್ಳಬೇಕು. ಅವರ ಸುರಕ್ಷತೆಗೆ ಆದ್ಯತೆ ನೀಡಬೇಕು. ಗಣಿ ಜಾಗದ ಪ್ರಮಾಣ ಪತ್ರ ಹೊಂದಿರಬೇಕು. ಸಂಬಂಧಿಸಿದ ಅಧಿಕಾರಿಗಳು, ಕ್ವಾರಿ ಬ್ಲಾಕ್‌ಗಳಿಗೆ ತಿಂಗಳಿಗೊಮ್ಮೆ ಭೇಟಿ ನೀಡಿ, ಅಲ್ಲಿನ ನಿಯಮ ಪಾಲನೆ, ಕೈಗೊಂಡ ಸುರಕ್ಷತಾ ಕ್ರಮ ಪರಿಶೀಲಿಸಿ ಜಿಲ್ಲಾಡಳಿತಕ್ಕೆ ವರದಿ ಸಲ್ಲಿಸಬೇಕು. ಕ್ವಾರಿಗಳಲ್ಲಿ ಬಳಕೆಯಾಗದ ಸ್ಫೋಟಕಗಳಿದ್ದರೆ ಇಲಾಖೆ ಅಧಿಕಾರಿಗಳ ಗಮನಕ್ಕೆ ತರಬೇಕು ಎಂದು ತಿಳಿಸಿದರು.

    ಡಿಸಿ ಎದುರು ಮಾಲೀಕನ ಗೋಳು: ಕಾರ್ಯಕ್ರಮದ ಬಳಿಕ ವೇದಿಕೆಯತ್ತ ಧಾವಿಸಿದ ಬುಡಾ ಮಾಜಿ ಅಧ್ಯಕ್ಷ ಹಾಗೂ ಗಣಿ ಮಾಲೀಕ ಜಹೀರ್ ಅಹಮ್ಮದ್, ಸಂಡೂರು ತಾಲೂಕಿನ ದೇವಗುಡ್ಡನಹಳ್ಳಿಯಲ್ಲಿ ಸರ್ಕಾರದ ಅನುಮತಿ ಪಡೆದು ಕಲ್ಲು ಕ್ವಾರಿ ಆರಂಭಿಸಲು ಮುಂದಾದರೆ ಗ್ರಾಮಸ್ಥರು ಅಡ್ಡಿಪಡಿಸುತ್ತಿದ್ದಾರೆ. ಕ್ವಾರಿಗೆ ಬರಲು ದಾರಿ ನೀಡುತ್ತಿಲ್ಲ. ಕಾರ್ಮಿಕರನ್ನೂ ಬಿಡುತ್ತಿಲ್ಲ. ನಾಲ್ಕು ವರ್ಷದಿಂದ ಗಣಿಗಾರಿಕೆ ನಡೆಸಲು ಸಾಧ್ಯವಾಗುತ್ತಿಲ್ಲ. ತಹಸೀಲ್ದಾರ್ ಗಮನಕ್ಕೆ ತಂದರೆ ಸ್ಥಳೀಯರ ಸಮಸ್ಯೆ ನೀವೇ ಬಗೆಹರಿಸಿಕೊಳ್ಳಿ ಎನ್ನುತ್ತಿದ್ದಾರೆ ಎಂದು ಜಿಲ್ಲಾಧಿಕಾರಿ ಪವನಕುಮಾರ್ ಮಾಲಪಾಟಿ ಬಳಿ ಅಳಲು ತೋಡಿಕೊಂಡರು. ಇದಕ್ಕೆ ಪ್ರತಿಕ್ರಿಯಿಸಿದ ಡಿಸಿ, ಈ ಬಗ್ಗೆ ಪರಿಶೀಲಿಸಿ, ಕ್ರಮವಹಿಸುವುದಾಗಿ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts