More

    ಆನಂದ ಸಿಂಗ್ ಬಿಜೆಪಿ ತೊರೆಯಲ್ಲ – ಸಾರಿಗೆ ಸಚಿವ ಬಿ.ಶ್ರೀರಾಮುಲು ವಿಶ್ವಾಸ

    ಹೊಸಪೇಟೆ: ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಕಾರಣರಾದ ಸಚಿವ ಆನಂದ ಸಿಂಗ್ ಯಾವುದೇ ಕಾರಣಕ್ಕೂ ಬಿಜೆಪಿ ತೊರೆಯಲ್ಲ ಎಂದು ಸಾರಿಗೆ ಸಚಿವ ಬಿ.ಶ್ರೀರಾಮುಲು ಹೇಳಿದರು.

    ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ, ಮಾಜಿ ಸಂಸದೆ ಜೆ.ಶಾಂತಾರೊಂದಿಗೆ ವಿಶ್ವವಿಖ್ಯಾತ ಹಂಪಿಗೆ ಸೋಮವಾರ ಭೇಟಿ ನೀಡಿ, ಶ್ರೀವಿರೂಪಾಕ್ಷೇಶ್ವರ ಹಾಗೂ ಯಂತ್ರೋದ್ಧಾರಕ ದೇವರಿಗೆ ಪೂಜೆ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

    ಆನಂದ ಸಿಂಗ್ ಬಿಜೆಪಿ ತೊರೆಯುವುದು ಕೇವಲ ಊಹಾಪೋಹ. ಕುಶಲೋಪರಿ ವಿಚಾರಿಸಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನಿವಾಸಕ್ಕೆ ಅವರು ತೆರಳಿರಬಹುದು. ಯಾವುದೇ ರಾಜಕೀಯ ವಿಷಯಗಳ ಕುರಿತು ಚರ್ಚಿಸಲು ಭೇಟಿ ನೀಡಿಲ್ಲ ಎಂದರು.

    ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲು ಸಿಂಗ್ ಕೊಡುಗೆ ಅಪಾರವಾಗಿದೆ. ಅವರ ತ್ಯಾಗದಿಂದ ಬಿಜೆಪಿ ರಾಜ್ಯದಲ್ಲಿ ಅಧಿಕಾರ ನಡೆಸುತ್ತಿದೆ. ಅವರೊಂದಿಗೆ ಬಂದ ಕೆಲವರ ತ್ಯಾಗ ಕೂಡ ಇದೆ. ಬಿಜೆಪಿಯನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಆನಂದ್ ಸಿಂಗ್ ಕೆಲಸ ಮಾಡುತ್ತಿದ್ದಾರೆ. 2023ರ ವಿಧಾನ ಸಭೆ ಚುನಾವಣೆಯಲ್ಲಿ ನಾನು, ಆನಂದ್ ಸಿಂಗ್ ಇಬ್ಬರೂ ಒಗ್ಗಟ್ಟಾಗಿ ಕಾಂಗ್ರೆಸ್ ಪಕ್ಷದದವರನ್ನು ಸೋಲಿಸುತ್ತೇವೆ. ಅವಳಿ ಜಿಲ್ಲೆಗಳಲ್ಲಿ ಬಿಜೆಪಿಯ ಹೆಚ್ಚು ಶಾಸಕನ್ನು ಗೆಲ್ಲಿಸುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ಬಳಿಕ ಹಂಪಿಯ ಜನತಾ ಕಾಲನಿಯಲ್ಲಿ ನಡೆದ ಹೋಮ ಹವನದಲ್ಲಿ ಶ್ರೀರಾಮುಲು ಹಾಗೂ ಜನಾರ್ದನರೆಡ್ಡಿ ಪಾಲ್ಗೊಂಡರು.

    ರೆಡ್ಡಿಗೆ ಪ್ರವಾಸಿ ಮಾರ್ಗದರ್ಶಿಗಳ ಮನವಿ: ಮಾಸಿಕ ಗೌರವ ಧನ ಕೊಡಿಸಬೇಕೆಂದು ಕೋಟಿ ಮಾಜಿ ಪ್ರವಾಸೋದ್ಯಮ ಸಚಿವ ಜನಾರ್ದನ ರೆಡ್ಡಿಗೆ ವಿಶ್ವ ವಿಖ್ಯಾತ ಹಂಪಿಯ ಪ್ರವಾಸಿ ಮಾರ್ಗದರ್ಶಿಗಳು ಸೋಮವಾರ ಮನವಿ ಸಲ್ಲಿಸಿದರು. ಪ್ರತಿಕ್ರಿಯಿಸಿದ ರೆಡ್ಡಿ, ನಾನು ಈ ಹಿಂದೆ ಪ್ರವಾಸೋದ್ಯಮ ಸಚಿವನಿದ್ದಾಗ ಗೈಡ್‌ಗಳಿಗೆ ಮಾಸಿಕ ಗೌರವ ಧನ ಕೊಡಿಸಲು ಯತ್ನಿಸಿದ್ದೆ. ಆದರೆ, ಅದು ಸಾಧ್ಯವಾಗಿರಲಿಲ್ಲ. ಈ ಕುರಿತು ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಹಾಗೂ ಸರ್ಕಾರದ ಮಟ್ಟದಲ್ಲಿ ಚರ್ಚಿಸುವೆ ಎಂದು ಭರವಸೆ ನೀಡಿದರು. ಕರ್ನಾಟಕ ರಾಜ್ಯ ಪ್ರವಾಸಿ ಮಾರ್ಗದರ್ಶಿಗಳ ಸಂಘದ ಅಧ್ಯಕ್ಷ ಜಿ.ಮಂಜುನಾಥ್ ಗೌಡ, ಪ್ರಧಾನ ಕಾರ್ಯದರ್ಶಿ ವಿರೂಪಾಕ್ಷಿ ವಿ.ಹಂಪಿ, ಹುಲುಗಪ್ಪ, ನಂಜುಂಡಿ, ಗೋಪಿನಾಥ್, ವಿ.ಗೋಪಾಲ, ಡಿ.ಶಿವು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts