More

    ಹೊಸದುರ್ಗದಲ್ಲಿ ಜಾನುವಾರ ಸಂತೆ

    ಹೊಸದುರ್ಗ : ವಿಶ್ವ ಮಟ್ಟದಲ್ಲಿ ತಲ್ಲಣ ಉಂಟು ಮಾಡಿರುವ ಕರೊನಾ ವೈರಸ್ ತಡೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತೀವ್ರ ಕ್ರಮ ತೆಗೆದುಕೊಂಡಿವೆಯಾದರೂ ತಾಲೂಕಿನಲ್ಲಿ ಸೋಂಕು ತಡೆಯುವ ಕಾರ್ಯವನ್ನು ತಾಲೂಕು ಆಡಳಿತ ಗಂಭೀರವಾಗಿ ಪರಿಗಣಿಸಿಲ್ಲ ಎಂಬ ಆರೋಪ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.

    ಎಪಿಎಂಸಿ ಮಾರುಕಟ್ಟೆಯಲ್ಲಿ ಬುಧವಾರ ಕುರಿ ಸಂತೆ ತಡೆಯುವಲ್ಲಿ ತಾಲೂಕು ಆಡಳಿತ ವಿಫಲವಾಗಿದೆ. ಜಿಲ್ಲಾಧಿಕಾರಿ ಜಿಲ್ಲೆಯಾದ್ಯಂತ 144 ಸೆಕ್ಷನ್ ಜಾರಿಗೊಳಿಸಿದ ನಂತರ ಗುರುವಾರ ಬೆಳಗ್ಗೆ ಜಾನುವಾರು ಸಂತೆ ನಡೆದಿದೆ.

    ಕರೊನಾ ತಡೆಗೆ ರಚಿಸಿರುವ ವಿಶೇಷ ಪಡೆಯ ಅಧಿಕಾರಿಗಳು ಸಮರ್ಪಕವಾಗಿ ಕಾರ್ಯನಿರ್ವಹಿಸದಿರುವುದೇ ಇಂತಹ ಅವಘಡಗಳಿಗೆ ಕಾರಣವಾಗಿದೆ ಎನ್ನುವುದು ಸಾರ್ವಜನಿಕರ ಅಭಿಪ್ರಾಯ. ಜನರಿಂದ ಆಕ್ರೋಶ ವ್ಯಕ್ತವಾದ ನಂತರ ತಾಲೂಕು ಆರೋಗ್ಯಾಧಿಕಾರಿ ಕಚೇರಿಯಲ್ಲಿ ಗುರುವಾರ ರೋಗ ತಡೆ ಕುರಿತು ಸಭೆ ನಡೆಸಲಾಗಿದೆ.

    ವಿದೇಶದಿಂದ ಆಗಮಿಸಿದ ಯಾವುದೇ ವ್ಯಕ್ತಿಗೆ ಸೋಂಕು ಇರಲಿ, ಇಲ್ಲದಿರಲಿ 14 ದಿನಗಳ ಕಾಲ ಜನರಿಂದ ದೂರವಿಡಬೇಕು ಎಂದು ಸರ್ಕಾರ ಆದೇಶ ನೀಡಿದ್ದರೂ ತಾಲೂಕಿನಲ್ಲಿರುವ ಅಂತಹ ವ್ಯಕ್ತಿಗಳನ್ನು ಸರಿಯಾದ ಕ್ರಮದಲ್ಲಿ ನಿರ್ವಹಿಸಿಲ್ಲ ಎನ್ನುವ ಆರೋಪವಿದೆ.

    ಸೌದಿ ಅರೇಬಿಯಾದಿಂದ ಪಟ್ಟಣಕ್ಕೆ ವಾಪಸಾಗಿರುವ ಚಾಮರಾಜಪೇಟೆ ನಿವಾಸಿಯೊಬ್ಬ ಬುಧವಾರ ಮತ್ತು ಗುರವಾರ ಪಟ್ಟಣದ ಸಂತೆ ಮಾರುಕಟ್ಟೆ ಸೇರಿ ಸಾರ್ವಜನಿಕ ಸ್ಥಳಗಳಲ್ಲಿ ಸಂಚರಿಸಿದ್ದಾರೆನೆ ಎನ್ನಲಾಗಿದ್ದು, ಸುರಕ್ಷತೆ ಕ್ರಮಗಳ ಬಗ್ಗೆ ನಿರ್ಲಕ್ಷೃ ವಹಿಸಲಾಗಿದೆ ಎಂದು ಜನ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಸಾರ್ವಜನಿಕರ ಮಾಹಿತಿಯ ನಂತರ ಎಚ್ಚೆತ್ತುಕೊಂಡ ತಾಲೂಕು ಆಡಳಿತ ವ್ಯಕ್ತಿಯನ್ನು ಸಂಪರ್ಕಿಸುವ ಪ್ರಯತ್ನಕ್ಕೆ ಮುಂದಾಗಿದೆ. ಟಿಎಚ್‌ಒ ಕಚೇರಿಯಲ್ಲಿ ನಡೆದ ಸಭೆಯ ನಂತರ ನೀಡಿದ ಮಾಹಿತಿಯಲ್ಲೂ ಅಸ್ಪಷ್ಟತೆಯಿದೆ. ವಿದೇಶದಿಂದ ಮರಳಿದವರ ಸಂಖ್ಯೆ 6 ಎಂದು ತಹಸೀಲ್ದಾರ್ ತಿಪ್ಪೇಸ್ವಾಮಿ ಹೇಳಿದರೆ ಟಿಎಚ್‌ಒ ಕಂಬಾಳಿಮಠ ಅವರು ಎಂಟು ಜನ ಎನ್ನುವ ಮಾಹಿತಿ ನೀಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts