More

    ದುಡಿವ ಕೈಗೆ ಕೆಲಸ ಮೊದಲ ಆದ್ಯತೆ

    ಹೊಸದುರ್ಗ: ಕೋವಿಡ್ ಕಾರಣದಿಂದ ತಾಲೂಕಿಗೆ ಮರಳಿರುವ ಜನರಿಗೆ ಉದ್ಯೋಗ ನೀಡುವ ಹಾಗೂ ಪ್ರವಾಹ ತಡೆಯುವ ಉದ್ದೇಶದಿಂದ ನರೇಗಾ ಯೋಜನೆಯಡಿಯಲ್ಲಿ ಹಿರೇಹಳ್ಳ ಅಭಿವೃದ್ಧಿ ಕಾಮಗಾರಿ ನಡೆಸಲಾಗುತ್ತಿದೆ ಎಂದು ಶಾಸಕ ಗೂಳಿಹಟ್ಟಿ ಡಿ.ಶೇಖರ್ ಹೇಳಿದರು.

    ತಾಲೂಕಿನ ನರಸೀಪುರ ಗ್ರಾಮದ ಬಳಿ ಬುಧವಾರ ಜಾನಕಲ್ಲು, ದೊಡ್ಡಘಟ್ಟ ಹಾಗೂ ದೇವಪುರ ಗ್ರಾಪಂ ವ್ಯಾಪ್ತಿಯ ಹಿರೇಹಳ್ಳ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.

    ಅಂದಾಜು ನೂರು ಅಡಿ ಅಗಲವುಳ್ಳ ಹಿರೇಹಳ್ಳವು ಅಭಿವೃದ್ಧಿ ಇಲ್ಲದೆ ಮುಚ್ಚಿದೆ. ಇದರಿಂದ ಕಳೆದ ವರ್ಷ ಸುರಿದ ಮಳೆಗೆ ಪ್ರವಾಹ ಉಂಟಾಗಿ ಗ್ರಾಮಗಳು ಮುಳುಗಡೆ ಆಗಿದ್ದವು. ಲಾಕ್‌ಡೌನ್ ವೇಳೆ ಕೆರೆ ಅಭಿವೃದ್ಧಿ ಪಡಿಸುವ ಯೋಜನೆ ರೂಪಿಸಿ 2 ತಿಂಗಳು 6 ಹಿಟಾಚಿ ಮೂಲಕ ಹಳ್ಳದಲ್ಲಿ ಬೆಳೆದಿದ್ದ ಗಿಡ ಹಾಗೂ ಒತ್ತುವರಿ ತೆರವುಗೊಳಿಸಲಾಗಿದೆ ಎಂದರು.

    16 ಕಿಮೀ ಸುತ್ತಳತೆಯ ಹಳ್ಳವನ್ನು 60 ಅಡಿ ಅಗಲ ಹಾಗೂ 20 ಅಡಿ ಆಳವಾಗಿ ನಿರ್ಮಿಸಲು ಯೋಜಿಸಲಾಗಿದೆ. ಒಂದು ಕೋಟಿ ರೂ. ಹೆಚ್ಚು ಸ್ವಂತ ಹಣ ಖರ್ಚು ಮಾಡಿ ಮಣ್ಣು ತೆಗೆಸಲಾಗಿದೆ. ಇದಕ್ಕೆ ನರೇಗಾ ಯೋಜನೆ ಹಣ ಬಳಸಿಲ್ಲ ಎಂದು ಹೇಳಿದರು.

    ನರೇಗಾ ಯೋಜನೆಯು ನಿಜವಾದ ಫಲಾನುಭವಿಗಳ ಬದಲಾಗಿ ಜನಪ್ರತಿನಿಧಿಗಳು ಹಾಗೂ ಗುತ್ತಿಗೆದಾರರಿಗೆ ಅನುಕೂಲವಾಗಿತ್ತು. ಜನರ ಜಾಬ್‌ಕಾರ್ಡ್‌ಗಳನ್ನು ಪಡೆದು ಅವರ ಪಾಲಿನ ಹಣವನ್ನು ಲೂಟಿ ಮಾಡಲಾಗುತ್ತಿತ್ತು. ಇಂತಹ ವ್ಯವಸ್ಥೆಯನ್ನು ನಿಲ್ಲಿಸಿ ನಿಜವಾದ ಫಲಾನುಭವಿಗಳಿಗೆ ಉದ್ಯೋಗ ನೀಡಿ ಅವರ ಖಾತೆಗೆ ಕೂಲಿ ಹಣ ವರ್ಗಾಹಿಸಲಾಗುತ್ತಿದೆ ಎಂದರು.

    ನೀರು ನಿಲ್ಲಿಸಲು ಯೋಜನೆ: ಹಿರೇಹಳ್ಳದಲ್ಲಿ ಸಂಪೂರ್ಣವಾಗಿ ನೀರು ನಿಲ್ಲಿಸಲು ಯೋಜನೆ ರೂಪಿಸಲಾಗಿದೆ. ಜಿಲ್ಲಾ ಖನಿಜ ಪ್ರತಿಷ್ಠಾನದಡಿಯಲ್ಲಿ 2 ಕೋಟಿ ರೂ. ವೆಚ್ಚದಲ್ಲಿ 2 ಬ್ರಿಡ್ಜ್ ಕಂ ಬ್ಯಾರೇಜ್, ಸಣ್ಣ ನೀರಾವರಿ ಇಲಾಖೆಯಡಿ 10 ಚೆಕ್ ಡ್ಯಾಂ ನಿರ್ಮಿಸಿ ಮಳೆ ನೀರನ್ನು ಹಿಡಿದಿಡಲಾಗುವುದು. ಪ್ರವಾಹ ತಡೆಯುವ ಜತೆಗೆ ಅಂತರ್ಜಲ ಹೆಚ್ಚಿಸುವುದು, ಕೃಷಿ ಜಮೀನಿಗೆ ನೀರು ಒದಗಿಸುವ ಉದ್ದೇಶವಿದೆ ಎಂದು ಶಾಸಕರು ತಿಳಿಸಿದರು.

    ಕಾರ್ಮಿಕರ ಜತೆ ಕೆಲಸ ಮಾಡಿದ ಶಾಸಕ: ಶಾಸಕ ಗೂಳಿಹಟ್ಟಿ ಶೇಖರ್ ಅವರು ಕೂಲಿ ಕಾರ್ಮಿಕರ ಜತೆ ಅರ್ಧ ಗಂಟೆಗೂ ಹೆಚ್ಚು ಕಾಲ ಸಲಿಕೆ ಹಿಡಿದು ಕೆಲಸ ಮಾಡಿದರು. ಪುಟ್ಟಿಯಲ್ಲಿ ಮಣ್ಣು ತುಂಬಿ ಕಾರ್ಮಿಕರ ತಲೆ ಮೇಲೆ ಹೊರಿಸುವ ಮೂಲಕ ಗಮನ ಸೆಳೆದರು. ಬಳಿಕ ಮಾತನಾಡಿದ ಅವರು ಭೋವಿ ಸಮುದಾಯಕ್ಕೆ ಸೇರಿದ ನನಗೆ ಕಲ್ಲು, ಮಣ್ಣು ಕೆಲಸ ರಕ್ತಗತವಾಗಿ ಬಂದಿದೆ. ಕೂಲಿ ಮಾಡುವ ಜನರ ಸಂಕಷ್ಟ ತಿಳಿದಿದೆ. ಅವರಿಗೆ ಕೂಲಿ ಕೆಲಸ ಕಲ್ಪಿಸುವುದು ನನ್ನ ಕರ್ತವ್ಯವಾಗಿದೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts