ಹೊಸದುರ್ಗ: ಸಕಲ ಜೀವಾತ್ಮರಿಗೆ ಲೇಸನ್ನು ಬಯಸುವುದೇ ಜಗತ್ತಿನ ಎಲ್ಲ ಧರ್ಮಗಳ ಮೂಲ ಆಶಯವಾಗಿ ದೆ ಎಂದು ಸಾಣೇಹಳ್ಳಿಯ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.
ಅರಸೀಕೆರೆ ತಾಲೂಕು ಕಲ್ಲುಸಾದರಹಳ್ಳಿ ಗ್ರಾಮದಲ್ಲಿ ಭಾನುವಾರ ರಾತ್ರಿ ಮತ್ತೆ ಕಲ್ಯಾಣ ಕಾರ್ಯಕ್ರಮಸಾನ್ನಿಧ್ಯ ವಹಿಸಿ ಮಾತನಾಡಿದರು.
ಧರ್ಮಾಂಧರ ಕಾರಣದಿಂದ ಧರ್ಮಗಳು ತಮ್ಮ ಮೂಲ ಸ್ವರೂಪ ಕಳೆದುಕೊಂಡಿವೆ. ಧರ್ಮದ ಹೊರ ಕವಚವನ್ನು ಇಟ್ಟುಕೊಂಡು ಅಂತಃಸತ್ವವನ್ನು ದೂರೀಕರಿಸುವ ಕೆಲಸ ನಡೆಯುತ್ತಿರುವುದು ದುರದೃಷ್ಟಕರ ಸಂಗತಿ ಯಾಗಿದೆ. ಲಿಂಗ, ವರ್ಣ, ಜಾತಿ ಮುಂತಾದ ಅನೇಕ ಅಸಮಾನತೆಗಳು ವಿಜೃಂಭಿಸುತ್ತಿದ್ದ ಸಂದರ್ಭದಲ್ಲಿ ಬಸವಣ್ಣ ಸಮ ಸಮಾಜ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಕಲ್ಯಾಣದಲ್ಲಿ ಕಾರ್ಯ ಯೋಜನೆಗಳನ್ನು ರೂಪಿಸಿದರು ಎಂದರು.
ಚಿಂತಕ ಜಗದೀಶ್ ಎಸ್.ಪಾಟೀಲ್ ಮಾತನಾಡಿ, ಅಲ್ಪಸಂಖ್ಯಾತರು ಬಹುಸಂಖ್ಯಾತರ ಶೋಷಣೆ ಮಾಡಿದಾಗ ಚಳವಳಿಗಳು ಹುಟ್ಟಿಕೊಳ್ಳುತ್ತವೆ ಎನ್ನುವುದಕ್ಕೆ 12ನೇ ಶತಮಾನದ ಶರಣ ಚಳವಳಿ ಸಾಕ್ಷಿಯಾಗಿದೆ. ಬಸವಣ್ಣನ ನೇತೃತ್ವದಲ್ಲಿ ಶೋಷಣಾ ವ್ಯವಸ್ಥೆಯ ವಿರುದ್ಧ ನಡೆದ ಬಹುದೊಡ್ಡ ವೈಚಾರಿಕ ಚಳವಳಿಯಾಗಿದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಹರೀಶ್, ಸ್ವಾಮಿ, ಕಲ್ಲೇಶ್ ಮತ್ತಿತರಿದ್ದರು.