More

    ದೇವರ ಆಶೀರ್ವಾದದಿಂದ ಗುರು ಸ್ಥಾನ ಪ್ರಾಪ್ತಿ

    ಹೊಸದುರ್ಗ: ಓರುಗಲ್ಲಮ್ಮ ದೇವಿ ಹಾಗೂ ಶ್ರೀಗುರು ರೇವಣಸಿದ್ದೇಶ್ವರರ ಆಶೀರ್ವಾದದ ಬಲದಿಂದ ನಾವು ಕನಕ ಗುರುಪೀಠದ ಗುರುವಾಗಲು ಸಾಧ್ಯವಾಗಿದೆ ಎಂದು ಕಾಗಿನೆಲೆ ಕನಕ ಮಠದ ಶ್ರೀ ನಿರಂಜನಾನಂದಪುರಿ ಸ್ವಾಮೀಜಿ ತಿಳಿಸಿದರು.

    ತಾಲೂಕಿನ ಬಾಗೂರು ಗ್ರಾಮದಲ್ಲಿ ಸೋಮವಾರ ಆಯೋಜಿಸಿದ್ದ ಓರುಗಲ್ಲಮ್ಮ ದೇವಿ ಸಮುದಾಯ ಭವನದ ಉದ್ಘಾಟನಾ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು. ಓರುಗಲ್ಲಮ್ಮ ದೇವಿಯು ಹಾಲುಮತ ಸಮುದಾಯವನ್ನು ಸಲುಹುತ್ತಿರುವ ಶಕ್ತಿಶಾಲಿ ದೇವತೆ. ನಾವು ಬಾಲ್ಯದಲ್ಲಿದ್ದಾಗ ಅನಾರೋಗ್ಯಕ್ಕೆ ತುತ್ತಾಗಿ ಮನೆಯವರೆಲ್ಲ ಕೈ ಚೆಲ್ಲಿ ಕುಳಿತ ಪರಿಸ್ಥಿತಿಯಲ್ಲಿ ದೇವಿಯ ಪವಾಡದಿಂದ ನಾವು ಬದುಕಿ ಉಳಿದಿದ್ದೇವೆ. 15 ವರ್ಷ ದೇವಿಯ ಸೇವೆ ಮಾಡುತ್ತ, ಆಕೆಯ ಮಡಿಲಿನಲ್ಲಿ ಬೆಳೆದು ಕನಕ ಗುರುಪೀಠಕ್ಕೆ ಗುರುವಾಗಿದ್ದೇವೆ ಎಂದರು.

    ಬಾಗೂರು ಗ್ರಾಮದ ಓರುಗಲ್ಲಮ್ಮ ದೇವಿಯ ದೇಗುಲದಲ್ಲಿ ಸಮುದಾಯ ಭವನ ನಿರ್ಮಿಸುವ ಮೂಲಕ ಎಲ್ಲ ಸಮುದಾಯದ ಜನರಿಗೂ ಅನುಕೂಲ ಮಾಡಿಕೊಡಲಾಗಿದೆ. ಧಾರ್ಮಿಕ ಹಾಗೂ ಶುಭ ಸಮಾರಂಭಗಳು ನಡೆದರೆ ಅದರ ನಿರ್ಮಾಣದ ಅಶಯ ಈಡೇರುತ್ತದೆ. ಕೆ.ಎಸ್.ಈಶ್ವರಪ್ಪ ಮತ್ತು ದೇವಿಯ ವಕ್ಕಲು ಬಳಗ ಇಂತಹ ಧರ್ಮಕಾರ್ಯದಲ್ಲಿ ತೊಡಗಿರುವುದು ಮಾದರಿ ಕಾರ್ಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

    ಮಾಜಿ ಉಪಮುಖ್ಯಮಂತ್ರಿ, ಶಿವಮೊಗ್ಗದ ಶಾಸಕ ಕೆ.ಎಸ್.ಈಶ್ವರಪ್ಪ ಮಾತನಾಡಿ, ಕನ್ಯಾಕುಮಾರಿಯಲ್ಲಿ ವಿವೇಕಾನಂದರ ಮೂರ್ತಿ ನಿರ್ಮಿಸುವಾಗ ಅದರ ವೆಚ್ಚ ಭರಿಸಲು ಹಲವರು ಮುಂದೆ ಬಂದಿದ್ದರು. ಆದರೆ, ಜನಸಾಮಾನ್ಯರಿಂದ ಕಾಣಿಕೆ ಪಡೆದು ಮೂರ್ತಿ ನಿರ್ಮಿಸುವ ಅಶಯದಿಂದ ಜನರಿಂದ ದೇಣಿಗೆ ಪಡೆದು ಮೂರ್ತಿ ನಿರ್ಮಿಸಲಾಯಿತು. ಹಾಗೆಯೇ ಓರುಗಲ್ಲಮ್ಮ ದೇವಿ ಸಮುದಾಯ ಭವನದ ನಿರ್ಮಾಣವೂ ಭಕ್ತರ ದೇಣಿಗೆಯಿಂದ ನಡೆದಿದೆ. ಎಲ್ಲರಿಗೂ ದೇವಿ ಕೃಪೆ ದೊರಕಲಿ ಎನ್ನುವ ಉದ್ದೇಶದಿಂದ ಸಮಾನ ಅವಕಾಶ ಕಲ್ಪಿಸಲಾಗಿದೆ ಎಂದರು.

    ಶ್ರೀಗಳಿಗೆ ತುಲಾಭಾರ ಸೇವೆ: ಓರುಗಲ್ಲಮ್ಮ ದೇವಿ ದೇವಾಲಯದಲ್ಲಿ ಅಮ್ಮನವರಿಗೆ ವಿಶೇಷ ಪೂಜಾ ಕಾರ್ಯಕ್ರಮಗಳು ನೆರವೇರಿದವು. ಸಮಾರಂಭದಲ್ಲಿ ಶ್ರೀ ನಿರಂಜನಾನಂದಪುರಿ ಸ್ವಾಮೀಜಿ ಅವರನ್ನು ನಾಣ್ಯಗಳಿಂದ ತುಲಾಭಾರ ನಡೆಸುವ ಮೂಲಕ ಗೌರವಿಸಲಾಯಿತು. ಕೆ.ಎಸ್.ಈಶ್ವರಪ್ಪ ದಂಪತಿ ತುಲಾಭಾರ ಸೇವೆ ನೆರವೇರಿಸಿದರು.

    ಮುನ್ನೂರು ವರ್ಷಗಳ ಬಳಿಕೆ ಭೇಟಿಗೆ ದೇವರ ಒಪ್ಪಿಗೆ: ಕಳೆದ 300 ವರ್ಷಗಳಿಂದ ಭೇಟಿಯಾಗದಿರುವ ದೇವಪುರದ ಬೀರಲಿಂಗೇಶ್ವರ ಹಾಗೂ ಕೆಲ್ಲೋಡು ಗ್ರಾಮದ ಸಿದ್ದೇಶ್ವರ ಸ್ವಾಮಿ ದೇವರನ್ನು ಕೂಡು ಭೇಟಿ ಮಾಡಿಸುವುದಾದರೆ ಮಾತ್ರ ಕಾರ್ಯಕ್ರಮಕ್ಕೆ ಕೆಲ್ಲೋಡು ಗ್ರಾಮಸ್ಥರಿಗೆ ತಿಳಿಸಿದ್ದೆ. ಅದರಂತೆ ಎರಡೂ ದೇವರುಗಳು ಈ ಕಾರ್ಯಕ್ಕೆ ಅಪ್ಪಣೆ ನೀಡಿವೆ. ಕೂಡು ಭೇಟಿಯು ಐತಿಹಾಸಿಕ ಕಾರ್ಯಕ್ರಮವಾಗಲಿದೆ. ದೇವರುಗಳ ನಡುವೆ ಯಾವುದೇ ವೈರತ್ವವಿರುವುದಿಲ್ಲ. ಭಕ್ತರು ಇದನ್ನು ಆರ್ಥ ಮಾಡಿಕೊಂಡು ಪ್ರೀತಿ, ಸಹಬಾಳ್ವೆಯಿಂದ ಬದುಕಬೇಕು ಎಂದು ಶ್ರೀ ನಿರಂಜನಾನಂದಪುರಿ ಸ್ವಾಮೀಜಿ ಸಲಹೆ ನೀಡಿದರು.

    ಶಾಸಕ ಗೂಳಿಹಟ್ಟಿ ಡಿ.ಶೇಖರ್, ಗ್ರಾಪಂ ಅಧ್ಯಕ್ಷೆ ಗಂಗಮ್ಮ, ಜಿಪಂ ಮಾಜಿ ಸದಸ್ಯ ಕಾಂತೇಶ್, ಮಹೇಶ್ ಒಡೆಯರ್, ಕೆಆರ್‌ಡಿಸಿಎಲ್ ಎಂಡಿ ಶಿವಪ್ರಸಾದ್, ಮಂಜಯ್ಯ ಒಡೆಯರ್, ಎಂ.ಆರ್.ಸಿ.ಮೂರ್ತಿ, ಚಂದ್ರಶೇಖರ್, ಮಂಜುನಾಥ ಮಾಗೋದಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts