More

    ಮದ್ಯ ಮಾರಾಟ, ಜನ ವಿರೋಧಿ ನಡೆ

    ಹೊಸದುರ್ಗ: ಮದ್ಯ ಮಾರಾಟ ಆರಂಭಕ್ಕೆ ಕೇಂದ್ರ ಸರ್ಕಾರ ಅನುಮತಿ ನೀಡಿರುವ ನಿರ್ಧಾರ ತಪ್ಪು ನಡೆ ಎಂದು ಸಾಣೇಹಳ್ಳಿಯ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದ್ದಾರೆ.

    ಜನರ ಆರೋಗ್ಯಕ್ಕಿಂತ ಆದಾಯವೇ ಮುಖ್ಯವೆಂದು ಭಾವಿಸುವ ನೇತಾರರಿಂದ ಖಂಡಿತ ದೇಶದ ಪ್ರಗತಿ ಸಾಧ್ಯವಿಲ್ಲ. ಕರೊನಾದಿಂದ ಮದ್ಯಪಾನ ನಿಷೇಧಿಸಿದ್ದ ಹಿನ್ನೆಲೆಯಲ್ಲಿ ಬಹುತೇಕ ಮದ್ಯವ್ಯಸನಿಗಳು ದುಶ್ಚಟದಿಂದ ದೂರವಾಗಲು ನಿರ್ಧರಿಸಿದ್ದರು. ಮದ್ಯಕ್ಕೆ ಅನುಮತಿ ನೀಡಿರುವ ಸರ್ಕಾರದ ತೀರ್ಮಾನ ನಿದ್ರೆ ಬಂದವರಿಗೆ ನಿದ್ರೆ ಮಾತ್ರೆ ಕೊಟ್ಟಂತಾಗುವುದು ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.

    ಕುಡಿದವರು ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಸಾಧ್ಯವೇ? ಇದು ಮತ್ತೇನೇನು ಅನಾಹುತಕ್ಕೆ ಕಾರಣವಾಗುವುದೋ? ಕುಡಿತದಿಂದ ಹಣ, ಆರೋಗ್ಯ, ನೆಮ್ಮದಿ ನೆಲಕಚ್ಚುವುದಲ್ಲದೆ ಕಳವು, ಸುಲಿಗೆ, ಅಪಘಾತ ಮತ್ತಿತರ ಅನಾಹುತಗಳು ಸಾಲು ಸಾಲಾಗಿ ನಡೆಯಬೇಕೆ?

    ಬಡವರಿಗೆ ಕುಡಿಸಿ ಆ ಹಣದಿಂದಲೇ ರಾಜ್ಯಭಾರ ಮಾಡಬೇಕೇ? ಕುಡಿತ ಬಿಟ್ಟಿರುವುದರಿಂದ ಆಗಿರುವ ಅನುಕೂಲತೆ, ಅನಾನುಕೂಲಗಳನ್ನು ಸರ್ವೇ ಮಾಡಿಸಿದ್ದರೆ ಖಂಡಿತ ಕೇಂದ್ರ ಸರ್ಕಾರ ಈ ನಿಲವು ತೆಗೆದುಕೊಳ್ಳುತ್ತಿರಲಿಲ್ಲ. ಇದನ್ನು ಸಾರ್ವಜನಿಕರ ಆರೋಗ್ಯ, ಆದಾಯ, ನೆಮ್ಮದಿಯ ಹಿನ್ನೆಲೆಯಲ್ಲಿ ತೀವ್ರವಾಗಿ ಖಂಡಿಸುತ್ತೇವೆ.

    ಮದ್ಯಪಾನ ನಿಷೇಧ ಕುರಿತಂತೆ ಕರ್ನಾಟಕ ಸರ್ಕಾರಕ್ಕೆ ಇನ್ನು ಸ್ವಾತಂತ್ರೃವಿದೆ. ಕರೊನಾ ಮಾರಿ ಮರೆ ಆಗುವವರೆಗಾದರೂ ಸಂಪೂರ್ಣ ಮದ್ಯ ನಿಷೇಧ ಮಾಡಬೇಕು. ಬಳಿಕ ಸರ್ವೆ ಮೂಲಕ ಮುಂದಿನ ಕ್ರಮ ಜರುಗಿಸಬೇಕು.

    ಕೇಂದ್ರ ಸರ್ಕಾರದ ನಿಲುವನ್ನು ಜನಪರ ಕಾಳಜಿ ಇರುವ ವಿವಿಧ ಕ್ಷೇತ್ರದವರು ವಿರೋಧಿಸಿ ಸರ್ಕಾರದ ಕಣ್ಣು ತೆರೆಸಬೇಕು. ಇಲ್ಲವಾದರೆ ಖಂಡಿತ ಕರೊನಾ ತಡೆಗಟ್ಟಲು ಇದುವರೆಗೂ ಮಾಡಿರುವ ಸಾಹಸ ಹೊಳೆಯಲ್ಲಿ ಹುಣಸೆ ಹಣ್ಣನ್ನು ಕದಡಿದಂತಾಗುವುದು.

    ಸಾರ್ವಜನಿಕರು ಸಹ ತಮ್ಮ ಪ್ರತಿಭಟನೆಯನ್ನು ವ್ಯಕ್ತಪಡಿಸಿ ಕುಡಿತದಿಂದ ಕುಟುಂಬಗಳನ್ನು ರಕ್ಷಿಸುವ ಸಂಕಲ್ಪ ಸ್ವೀಕರಿಸಬೇಕೆಂದು ಶ್ರೀಗಳು ಮನವಿ ಮಾಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts