ಹೊಸದುರ್ಗ: ಭಾರತೀಯ ಸಂಸ್ಕೃತಿ, ಸಂಪ್ರದಾಯ ಉಳಿಸುವ ಜತೆಗೆ ಎಲ್ಲರೂ ನಮ್ಮವರು ಎಂದು ಬದುಕಿ ಅಸ್ಪೃಶ್ಯತೆ ನಿವಾರಣೆ ಮಾಡುವುದೇ ನಿಜವಾದ ಹಿಂದುತ್ವ ಎಂದು ಕುಂಚಿಟಿಗ ಮಠದ ಶ್ರೀ ಶಾಂತವೀರ ಸ್ವಾಮೀಜಿ ತಿಳಿಸಿದರು.
ತಾಲೂಕಿನ ಯಾದಘಟ್ಟ ಗ್ರಾಮದ ಕರಡಿ ರಂಗನಾಥ ಸ್ವಾಮಿ ದೇವಾಲಯದಲ್ಲಿ ಶನಿವಾರ ಕುಂಚಿಟಿಗ ಸಮಾಜ ಆಯೋಜಿಸಿದ್ದ ಶತ ರುದ್ರಾಭಿಷೇಕ ಹಾಗೂ ಧಾರ್ಮಿಕ ಜಾಗೃತಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಹಿಂದುಳಿದ, ದಲಿತರು ಹಾಗೂ ಶೋಷಿತರನ್ನು ಜತೆಯಲ್ಲಿ ಕರೆದುಕೊಂಡು ಹೋಗುವ ಕೆಲಸವಾಗಬೇಕು. ಜಾತಿ ವ್ಯವಸ್ಥೆ ದೇಶಕ್ಕೆ ಅಂಟಿರುವ ಬಹು ದೊಡ್ಡ ಶಾಪವಾಗಿದೆ. ಜಾತಿ, ಜಾತಿಗಳ ನಡುವೇ ಕಿಚ್ಚು ಹಚ್ಚುವ ಬದಲು ಜ್ಞಾನದ, ಸಮಾನತೆಯ ಜ್ಯೋತಿ ಬೆಳಗಿಸುವ ಕೆಲಸ ಮಾಡಬೇಕು ಎಂದರು.
ಕೆಲ ಧಾರ್ಮಿಕ ಮುಖಂಡರು ಹಾಗೂ ಪ್ರಗತಿಪರರು ನಮ್ಮ ಸಂಪ್ರದಾಯ ಬದ್ಧವಾದ ಆಚರಣೆಗಳನ್ನು ಅವಮಾನಿಸುವ ಕೆಲಸ ಮಾಡುತ್ತಾರೆ. ದೇವಸ್ಥಾನಗಳಿಗೆ ಹೋಗುವುದು ಅಪರಾಧ ಎನ್ನುವ ಮಾತುಗಳು ದರ್ಪದಿಂದ ಕೂಡಿದ್ದು, ಸಮಾಜವನ್ನು ದಾರಿತಪ್ಪಿಸುವ ಕೆಲಸ ಮಾಡುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದರು.
ಮಾಜಿ ಶಾಸಕ ಟಿ.ಎಚ್.ಬಸವರಾಜು ಮಾತನಾಡಿ, ಧಾರ್ಮಿಕ ಆಚರಣೆಗಳು ಮನುಷ್ಯನ ಬದುಕಿಗೆ ನೆಮ್ಮದಿ ನೀಡುತ್ತವೆ. ಯುವ ಪೀಳಿಗೆ ಹಿರಿಯರ ಮಾರ್ಗದರ್ಶನದಲ್ಲಿ ಸಂಸ್ಕೃತಿ ಹಾಗೂ ಸಂಪ್ರದಾಯವನ್ನು ಉಳಿಸಿ ಬೆಳೆಸುವ ಕೆಲಸ ಮಾಡಬೇಕು ಎಂದರು.
ಗ್ರಾಪಂ ಅಧ್ಯಕ್ಷೆ ಮಂಜಮ್ಮ, ರಾಜ್ಯ ಕುಂಚಿಟಿಗ ಸಮಾಜದ ಅಧ್ಯಕ್ಷ ಎಚ್.ಆರ್.ಕಲ್ಲೇಶಪ್ಪ, ತಾಲೂಕು ಅಧ್ಯಕ್ಷ ಕೆ.ಸಿ.ಸಿದ್ದಪ್ಪ, ಗುರುಸ್ವಾಮಿ ಮತ್ತಿತರರು ಇದ್ದರು.