More

    ದೀಪಾವಳಿ ಗ್ರಹಗಳ ದೃಷ್ಟಿಯಿಂದ ಹೇಗೆ-ಏನು?

    ದೀಪಾವಳಿ ಗ್ರಹಗಳ ದೃಷ್ಟಿಯಿಂದ ಹೇಗೆ-ಏನು?

    | ಮಹಾಬಲಮೂರ್ತಿ ಕೊಡ್ಲೆಕೆರೆ

    ಮನುಷ್ಯನು ಸಂಭ್ರಮಪಡುವುದು ತಪ್ಪೇನಲ್ಲ. ಧರ್ವರ್ಥ ಕಾಮ ಮೋಕ್ಷಗಳ ನೆಲೆಯಲ್ಲಿ ಮಾನವೀಯತೆ ಮೆರೆದು ನಾವು ಸಂಭ್ರಮಪಡುವುದರಲ್ಲಿ ಯಾವ ತಪ್ಪೂ ಇಲ್ಲ. ಆದರೆ ಕಾಮ, ಕ್ರೋಧ, ಲೋಭ, ಮೋಹ, ಮದ, ಮಾತ್ಸರ್ಯಗಳನ್ನು (ಅರಿಷಡ್ವರ್ಗಗಳು) ತೊರೆಯಲಾರದೆ ಮುಂದುವರಿಯುತ್ತೇನೆ ಎಂಬ ರಾಕ್ಷಸತ್ವ ಮನುಷ್ಯನಿಗಂಟಿದ ಶಾಪ. ನಿಯಂತ್ರಿಸಬೇಕು ಅಂದುಕೊಂಡ ಮಾತ್ರಕ್ಕೆ ಅರಿಷಡ್ವರ್ಗಗಳು ನಿಯಂತ್ರಣಕ್ಕೆ ಸಿಗಲಾರವು. ನಿರುಪಾಯವಾಗಿ ನಾವು ಯಾವುದೋ ದುಷ್ಟಶಕ್ತಿ ನಮ್ಮ ದಾರಿತಪ್ಪಿಸುತ್ತದೆ ಎಂಬುದನ್ನು ನಂಬಲೇಬೇಕು. ಹಾಗೆಯೇ ಒಂದು ಕಾಯುವ ಶಕ್ತಿ ನಮಗೆ ತಿಳಿಯದಂತೆ ನಮ್ಮ ಬೆನ್ನ ಹಿಂದೆ ನಿಂತು ರಕ್ಷಿಸುತ್ತದೆ ಎಂಬುದರಲ್ಲಿ ಅನುಮಾನ ಬೇಡ. ವಿಷದ ಹೆಡೆಯ ಸರ್ಪವನ್ನು ಅಮೃತ ಹೊತ್ತ ಗರುಡ ದಮನ ಮಾಡಿಯೇ ತೀರುತ್ತದೆ. ಅಶುಭ ಗ್ರಹಗಳು ತರುವ ವಿಪ್ಲವಗಳನ್ನು ನಿಯಂತ್ರಿಸಲು ಶುಭಗ್ರಹಗಳು ಮುಂದಾಗುತ್ತವೆ. ನೆರಳು ಬೆಳಕಿನಾಟದ ಜಗದ ರಂಗ ಮಂದಿರದಲ್ಲಿ ಅಶುಭ ಗ್ರಹಗಳೂ ಶುಭಕರವಾಗಿ ನಿಲ್ಲುವ ಚೋದ್ಯವಿದೆ. ಶುಭಗ್ರಹಗಳೇ ಅಶುಭವಾಗುವ ದುರ್ಭರತೆಯೂ ಸೃಷ್ಟಿಯಾಗುತ್ತಿರುತ್ತದೆ. ಹಾಗಾದರೆ ಈ ದೀಪಾವಳಿಯು ಜಗದ ಪಾಲಿಗೆ, ನಮ್ಮ ಭಾರತದ ಪಾಲಿಗೆ, ನಮ್ಮ ರಾಜ್ಯದ ಪಾಲಿಗೆ ಏನೆಲ್ಲವನ್ನು ಶುಭಾಶುಭಗಳ ಪಾತ್ರೆಯಲ್ಲಿ ಹಂಚಬಹುದು? ಒಳಿತಿಗಾಗಿನ ನಿರೀಕ್ಷೆಯನ್ನು ಖಂಡಿತವಾಗಿ ಇಟ್ಟುಕೊಳ್ಳೋಣ. ಭವಿಷ್ಯ ಹೇಗಿರಬಹುದು?

    ಜಗದ ಅಂಗಳದಲ್ಲಿ ಏನು, ಎತ್ತ?

    ಅಮೆರಿಕದಲ್ಲಿ ಟ್ರಂಪ್ ಆಳ್ವಿಕೆಯನ್ನು ಜನ ತಡೆದಿದ್ದಾರೆ. ಆದರೆ ಸೋಲನ್ನು ಒಪ್ಪಿಕೊಳ್ಳಲು ಟ್ರಂಪ್ ತಯಾರಿಲ್ಲ. ಜೋ ಬೈಡೆನ್ ಹೊಸ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಜಗದ ಇಡೀ ಅಂಗಳವೇ ಕರೊನಾದ ಮೂಲಕ ತತ್ತರಿಸಿದೆ. ಇದು ಬರುತ್ತಿರುವ ಹೊಸ ವರ್ಷದಲ್ಲಿ ಏಕಾಏಕಿ ನಿಲ್ಲುವುದನ್ನು ನಿರೀಕ್ಷಿಸಲು ಸಾಧ್ಯವೇ ಇಲ್ಲ. ಯಾರ ಅಂಕೆಗೂ ಸಿಗದಂತೆ ಮುಂದರಿಯಲು ಬಯಸುತ್ತಿರುವ ಚೀನಾದಲ್ಲಿ ಕ್ಸಿ ಜಿನ್​ಪಿಂಗ್ ಪಾಲಿಗೆ ರಾಹು ಬಲಾಢ್ಯವಾಗಿದೆ. ಆದರೆ ಅದೇ ಪ್ರಮಾಣದಲ್ಲಿ ಶಕ್ತಿಯನ್ನು ಕೊಡಲು ಕೇತು ಅವಕಾಶ ಒದಗಿಸಲಾರ. ಬಹುದೊಡ್ಡ ಭೂಕಂಪನ ಒಂದು ಚೀನಾವನ್ನು ಬಾಧಿಸಲಿರುವ ಮುನ್ಸೂಚನೆಯನ್ನು ಕೇತು ಕೊಡುತ್ತಿದ್ದಾನೆ. ತಾನು ಕಡಿಮೆ ಮಾತನಾಡಿದಷ್ಟೂ ಹೆಚ್ಚು ಹೆಚ್ಚು ಬಲಿಷ್ಠನಾಗುತ್ತೇನೆ ಎಂದು ನಂಬಿರುವ ಜಿನ್​ಪಿಂಗ್ ನಂಬಿಕೆ ಹುಸಿಯಾಗಲಿದೆ. ಜೋ ಬೈಡೆನ್, ಟ್ರಂಪ್ ರೀತಿಯಲ್ಲಿ ಚೀನಾದ ಪಾಲಿಗೆ ವಿರುದ್ಧವಾಗಿ ಇರಲಾರರು ಎಂಬ ನಂಬಿಗೆ ಸುಳ್ಳಾಗಲಿದೆ. ನೀರಿನ ರಾಶಿಯ ಯಜಮಾನನಾದ ಚಂದ್ರನ ಕಾರಣಕ್ಕಾಗಿ ಬೈಡೆನ್ ಚೀನಾದ ವಿರುದ್ಧದ ನಿಲುವನ್ನು ಪ್ರದರ್ಶಿಸಲೇ ಬೇಕಾಗುತ್ತದೆ. 2022 ಜೂನ್​ವರೆಗೂ ಗುರುಗ್ರಹದ ಅನುಗ್ರಹದಿಂದಾಗಿ ಬೈಡನ್ ಅಮೆರಿಕಾಕ್ಕೆ ಒಳ್ಳೆಯ ಆಡಳಿತ ನೀಡುತ್ತಾರೆ. ತದನಂತರ ವಿಷಮಿಸಲಿರುವ ಆರೋಗ್ಯದ ವಿಚಾರಕ್ಕಾಗಿನ ಮುಳ್ಳನ್ನು ಈ ವರ್ಷವೇ ಶನೈಶ್ಚರನು ಗುರುಗ್ರಹದಲ್ಲಿ ಊರಲು ಮುಂದಾಗುತ್ತಾನೆ. ಕಮಲಾ ಹ್ಯಾರಿಸ್ ನಿರೀಕ್ಷಿಸಿದ ಮಟ್ಟದ ಚಾಣಾಕ್ಷತೆ ಪ್ರದರ್ಶಿಸಲು ಮಂಗಳ ಗ್ರಹ ಬಿಡಲಾರದು. ಇಡುವ ಹೆಜ್ಜೆಗಳು ಪ್ರಬುದ್ಧವಾಗಿರಬೇಕು ಎಂಬುದನ್ನು ಕ್ರಮೇಣ ಬುಧಗ್ರಹ ಒದಗಿಸಿಕೊಡಲಿದೆ. ಜಗದ ಪರಿಧಿಯಲ್ಲಿ ಆರ್ಥಿಕ ಕುಸಿತ ಬರುವ ಫೆಬ್ರವರಿಯ ಹೊತ್ತಿಗೆ ಅಧಿಕವಾಗಲಿದೆ. ನಿಯಂತ್ರಣಕ್ಕೆ ಬರುತ್ತಲಿದೆ ಎಂಬ ಕರೊನಾ ಥಟ್ಟನೆ ನಿಶ್ಶಸ್ತ್ರಗೊಳ್ಳದೆ ತನ್ನ ದುಷ್ಟತನ ಪ್ರದರ್ಶಿಸಲು ಅದು ಸಶಕ್ತಗೊಳ್ಳುತ್ತಲೇ ಇರುತ್ತದೆ. ಶನೈಶ್ಚರನಿರುವಾಗ ಧನುರ್ ರಾಶಿಯನ್ನು ಹಾದುಬಂದ ಕೇತುವಿನ ನಂಜಿನಿಂದಾಗಿ ಜಗತ್ತು ಕರೊನಾದಿಂದ ಬಾಧೆಗೊಳಗಾಗುವುದು ಬೇಗ ಮುಗಿಯಲಾರದು. ಚೀನಾದ ವಿರುದ್ಧ ಇಡೀ ಜಗತ್ತಿನ ಧ್ವನಿ ಬಲಗೊಳ್ಳಲಿದೆ. ತೈವಾನ್, ಲಡಾಖಿನಲ್ಲಿ ಚೀನಾ ತನ್ನ ಕಪಿಮುಷ್ಟಿಯನ್ನು ಇಟ್ಟು ಗೀರುವ ಪ್ರಯತ್ನ ನಡೆಸಲಿದೆ. ಪಾಕಿಸ್ತಾನ ಇನ್ನಿಷ್ಟು ಭಯೋತ್ಪಾದನೆಯನ್ನು ಜಗತ್ತಿಗೇ ವಿಸ್ತರಿಸುವ ಪಿಚ್ ಒಂದನ್ನು ಚೀನಾದ ಕುಮ್ಮಕ್ಕಿನಿಂದ ನಡೆಸಲಿದೆ.

    ರಷ್ಯಾ ತನ್ನ ಪ್ರಭಾವಳಿಯಲ್ಲಿ ಹಿನ್ನಡೆ ಕಾಣುವ, ಉತ್ತರ ಕೊರಿಯಾದ ಕಿಮ್ ಜಾಂಗ್ ಉನ್ ದುರ್ಬಲವಾಗುವ ಅವಕಾಶ ಹೇರಳ. ಇರಾನ್ ಮಾತ್ರ ಜಾಗತಿಕ ಶಾಂತಿಯನ್ನು ಕದಡುವ ಶಕ್ತಿಯನ್ನು ಶತಾಯಗತಾಯ ಪಡೆಯಲಿದೆ. (ರಾಹುವಿನ ವಿಷದ ಶಕ್ತಿ ಇರಾನಿಗೆ ಬಲವಾಗಿದೆ.) ಬೇಕಾಗಿರದ ಸಣ್ಣ ಪ್ರಮಾಣದ ಯುದ್ಧವೊಂದನ್ನು ಇರಾನ್ ಸೃಷ್ಟಿಸಬಹುದಾಗಿದೆ. ಈ ಪರಿಸ್ಥಿತಿಯಲ್ಲಿ ಜೋ ಬೈಡೆನ್ ಭಾರತಕ್ಕೆ ಹೆಚ್ಚು ಹತ್ತಿರವಾಗುವ ಅನಿವಾರ್ಯತೆ ನಿಚ್ಚಳ. ಗುರು ಮತ್ತು ಶನೈಶ್ಚರರ ವರ್ಷಪೂರ್ತಾ ಇರುವ ಸಂಯೋಜನೆಯಿಂದಾಗಿ (ಮಕರ ರಾಶಿಯಲ್ಲಿ) ಯುದ್ಧದ ಕರಾಳ ಸ್ಥಿತಿ, ನಿರ್ವಣವಾದಷ್ಟೇ ವೇಗದಲ್ಲಿ ಮತ್ತೆ ತಣ್ಣಗಾಗುವ ಸ್ಥಿತಿ ದಟ್ಟವಾಗಿದೆ. ಆದರೆ ಆರ್ಥಿಕ ಕುಸಿತದ ಕಾರಣವಾಗಿ ಜಗತ್ತು ಪರದಾಡಲಿದೆ.

    ಕರ್ನಾಟಕದಲ್ಲಿನ ಸುಖ-ದುಃಖಗಳು

    ಅನೇಕ ರೀತಿಯಲ್ಲಿ (ಕರ್ನಾಟಕ ನಿರ್ದಿಷ್ಟವಾದ ರಾಜಕೀಯ ಸ್ಥಿರತೆಯನ್ನು ಕಂಡುಕೊಳ್ಳುವಲ್ಲಿ) ಬಂಡಾಯಗಳು ಎದ್ದೇಳುತ್ತವೆ. ಅದು ಆಡಳಿತದಲ್ಲಿರುವ ಭಾಜಪದಲ್ಲಿ ಮಾತ್ರವಲ್ಲ. ಪ್ರಮುಖವಾದ ಎಲ್ಲಾ ಪಕ್ಷಗಳಲ್ಲೂ ಬಂಡಾಯ ಶತಃಸಿದ್ಧ. ಪ್ರಧಾನವಾಗಿ ಯಡಿಯೂರಪ್ಪನವರಿಗೆ ಕೇತು ಪ್ರಬಲನಾಗಿದ್ದಾನೆ. (ಕೇತು ಗಣಪತಿಯನ್ನು ಸಂಕೇತಿಸುತ್ತಾನೆ.) ಆರೋಗ್ಯದ ದೃಷ್ಟಿಯಿಂದ ಯಡಿಯೂರಪ್ಪ ಗರಿಷ್ಠವಾದ ಎಚ್ಚರಿಕೆ ನಿರ್ವಹಿಸಲೇಬೇಕು. ಶನೈಶ್ಚರ ಹಾಗೂ ಗುರುವಿನ ಸಂಯೋಜನಾ ಸ್ಥಿತಿಯು ಮಕರದಲ್ಲಿ ವರ್ಷದುದ್ದಕ್ಕೂ ಇರುವುದರಿಂದ ಸಿದ್ಧರಾಮಯ್ಯ, ಕುಮಾರಸ್ವಾಮಿ ಮತ್ತು ಡಿ.ಕೆ.ಶಿವಕುಮಾರ್ ಕೂಡಾ ಆರೋಗ್ಯದ ವಿಚಾರದಲ್ಲಿ ಎಚ್ಚರ ಹೊಂದಿರುವುದು ಸೂಕ್ತ. ಹಿಂದೆ ಕರ್ನಾಟಕದ ಸ್ಥಿತಿಗತಿಗಳ ಬಗೆಗೆ ಬರೆಯುವಾಗ ನಾಯಕತ್ವದ ವಿಚಾರದಲ್ಲಿ ಯಡಿಯೂರಪ್ಪ ಜೂನ್​ನಲ್ಲಿ ಎದುರಿಸುವ ಕಂಪನವೊಂದರಿಂದ ಪಾರಾದರೆ ಸುರಕ್ಷಿತ ಎಂದು ಹೇಳಿದ್ದೆ. ಕಂಪನ ಸದ್ಯಕ್ಕೆ ಮುಗಿದ ವಿಷಯ ಎಂಬುದನ್ನು ಗಣೇಶ, ಭದ್ರಕಾಳಿಯ ಆರಾಧನೆಯಿಂದಲೇ ಯಡಿಯೂರಪ್ಪ ಗಟ್ಟಿಮಾಡಿಕೊಳ್ಳಬೇಕು. ಕರ್ನಾಟಕದಲ್ಲಿ ಅನೇಕ ರೀತಿಯ (ಪ್ರತಿಭಾವಂತರು, ಯೋಗ ಇರುವವರು ಸುಮಾರು ಏಳೆಂಟು ಜನರು ಇದ್ದರೂ) ರಾಜಕೀಯ, ನಾಯಕತ್ವದ ವಿಚಾರಗಳಲ್ಲಿ ರಾಜಕೀಯವನ್ನು ಹೊಸ ದಿಕ್ಕಿನತ್ತ ತಿರುಗಿಸಬಲ್ಲ ಶಕ್ತಿ ಹೊಂದಿದ್ದರೂ ಸದ್ಯಕ್ಕೆ ಯಾವುದೂ ಏಕಾಏಕಿ ಅತುಳ ಬಲದೊಡನೆ ಎದ್ದೇಳಲಾರದು. ನೀರು, ಅಗ್ನಿ ಮತ್ತು ಸದ್ಯದ ಕರೊನಾ ಅವಸ್ಥೆಗಳು ತಲ್ಲಣತರುವ ಸ್ಥಿತಿಯಲ್ಲಿ ಸವಾಲಾಗಿ ನಿಲ್ಲಲಿವೆ. ಅತಿವೃಷ್ಟಿ, ಭೀಕರ ಬೇಸಿಗೆಯ ವಿಪ್ಲವ ನಿರೀಕ್ಷಿತ. ಹೊಸದೇ ಶಕ್ತಿಯೊಂದು ಕರ್ನಾಟಕದ ವಿಚಾರದಲ್ಲಿ ಹೊರಗಡೆಯಲ್ಲಿ ಏನನ್ನೂ ತೋರಿಸದೆಯೇ, ಒಳಗೊಳಗೇ ಅನ್ಯಸ್ವರೂಪ ಪಡೆಯುವುದನ್ನು ವರ್ತಮಾನ ಹೊತ್ತು ನಿಂತಿದೆ. ಆದರೂ ಕೇತುಗ್ರಹದ ಕಾರಣದಿಂದಾಗಿ, ಸಮಯಕ್ಕೆ ಸರ›ನೆ ಒಂದು ಹೊಸಮುಖವನ್ನು ಅನಾವರಣಗೊಳಿಸಲು ಸಾಧ್ಯವಿಲ್ಲವಾಗಿದೆ.

    ಭಾರತದಲ್ಲಿ ಯಾವ ಪರಿಸ್ಥಿತಿ?

    ಯಾವುದೋ ಒಂದು ಶಕ್ತಿ ವರ್ಷದುದ್ದಕ್ಕೂ ಪ್ರಧಾನಿ ನರೇಂದ್ರ ಮೋದಿಯವರನ್ನು ಮುಂಚೂಣಿಯಲ್ಲೇ ನಿಲ್ಲಿಸಲು ಶಕ್ತವಾಗುತ್ತದೆ ಎಂದು ಆಸ್ತಿಕರು ನಂಬುತ್ತಾರೆ. ಅದು ನಿಚ್ಚಳವಾಗಿ ಮೋದಿಯವರ ಬಗೆಗಾಗಿನ ಶನೈಶ್ಚರನ ತಟಸ್ಥ ನಿಲುವು. ಆದರೂ ರಾಹು ಅವರನ್ನು ಸಪ್ತಮದಲ್ಲಿ ಕಾಡುತ್ತಿದ್ದಾನೆ. ಕೇತು ಜನ್ಮಭಾವಕ್ಕೆ ಭಾರವಾಗುತ್ತ ನೆಮ್ಮದಿಯಲ್ಲಿರಲು ಬಿಡಲಾರ. ಚೀನಾವನ್ನು (ಆರ್ಥಿಕ, ವಾಣಿಜ್ಯ, ತಾಂತ್ರಿಕ ಬಲಗಳನ್ನೆಲ್ಲ ಒಗ್ಗೂಡಿಸಿಕೊಳ್ಳುವುದು ಏಕಾಏಕಿ ಸಾಧ್ಯವಾಗದು. ಆದರೂ ಬೌದ್ಧಿಕ ಶಕ್ತಿಯ ಮೂಲಕವೇ ಜಗತ್ತನ್ನು ಇಡಿಯಾಗಿ ಚೀನಾದ ಎದುರು ತಂದುನಿಲ್ಲಿಸುವ ತಾಳ್ಮೆ ತೋರಲೇಬೇಕು. ಶುಕ್ರ ಮತ್ತು ಗುರು ಗ್ರಹಗಳು ಮೋದಿಯವರಿಗೆ ಈ ನಿಟ್ಟಿನಲ್ಲಿ ಅನುಕೂಲಕರವಾಗಿವೆ) ಶಸ್ತ್ರಾಸ್ತ್ರಗಳೊಡನೆ ಎದುರಿಸುವ ವಿಚಾರ ದುಬಾರಿಯಾಗಬಹುದು. ಪ್ರಬಲ ಹೆಣ್ಣು ಮಗಳೊಬ್ಬಳು ರಾಹುವಿನ ಕಾರಣದಿಂದ ಚೀನಾವನ್ನು ಭಾರತದ ಬಲ ಪರೀಕ್ಷಿಸಲು ಸಂಘರ್ಷ ತರುತ್ತಲೇ ಇರುತ್ತಾಳೆ. ಆದರೆ ಅವಳು ನೇಪಥ್ಯದ ಶಕ್ತಿಯಾಗಿ ನಿಲ್ಲುತ್ತಾಳೆ. ನೇರವಾಗಿ ಎದುರಿಗೆ ಬರಲಾರಳು. ಆರ್ಥಿಕ ಸ್ವಾವಲಂಬನೆ ಸಾಧಿಸುವ, ಚೀನಾವನ್ನು ನೇರವಾಗಿ ಎದುರಿಸುವ ವಿಚಾರ ಹೆಚ್ಚು ಹೆಚ್ಚು ನರಸಿಂಹ ಆರಾಧನೆಯಿಂದಲೇ ಸಾಧ್ಯವಾಗಬೇಕು. ಪಾಕಿಸ್ತಾನ ಮತ್ತು ನೇಪಾಳವನ್ನು ನಿಯಂತ್ರಿಸುವ ಮೋದಿಯವರ ಯೋಜನೆಗಳು ಯಶಸ್ಸು ತರುತ್ತವೆ. ಇಡೀ ಭಾರತಕ್ಕೆ ಅವಶ್ಯವಾದ ಜಲಸಂಬಂಧವಾದ ವಿಚಾರ ಒಂದು ಚಂದ್ರನ ಕಾರಣಕ್ಕಾಗಿ ಮೋದಿಯವರನ್ನು ಕೈಹಿಡಿಯಲಿದೆ. ಪ್ರಬಲ ಭೂಕಂಪನಗಳು ಭಾರತವನ್ನು ಕಾಡಲಿವೆ. ರಾಹುಲ್ ಪ್ರಾಬಲ್ಯ ಪಡೆಯುವ ವಿಚಾರ ರಾಹು ಕಾಟದಿಂದಾಗಿ ಕಷ್ಟವೇ. ಸೋನಿಯಾ ಆರೋಗ್ಯದ ವಿಚಾರದಲ್ಲಿ ಹೆಚ್ಚಿನ ಎಚ್ಚರಿಕೆ ಹೊಂದಿರಲೇಬೇಕು. ಈಶಾನ್ಯ ಭಾಗದಲ್ಲಿನ ಪ್ರಾಕೃತಿಕ ವಿಕೋಪಗಳು, ಈಶಾನ್ಯ ಭಾಗದಲ್ಲಿನ, ಮಧ್ಯಭಾರತದಲ್ಲಿನ ಜಲಸಂಬಂಧೀ ಉಪಟಳಗಳು ಭಾರತಕ್ಕೆ ಸವಾಲಾಗುತ್ತವೆ. ಹಣಕಾಸು ಮತ್ತು ಹೊಸ ಆರ್ಥಿಕ ನೀತಿಯ ವಿಚಾರದಲ್ಲಿ ದಕ್ಷಿಣ ಭಾರತದ ಶಕ್ತಿದೇವತೆಯೊಂದನ್ನು ಮೋದಿ ಆರಾಧಿಸಿ ಗೆಲ್ಲುವ ವಿಚಾರ ನೆರವಿಗೆ ಬರಬಹುದಾಗಿದೆ. ರಕ್ಷಣಾ(ಆತ್ಮರಕ್ಷಣಾ) ವಿಷಯದಲ್ಲಿ 2021 ಫೆಬ್ರವರಿಯಿಂದ ಆಗಸ್ಟ್​ವರೆಗಿನ ಅವಧಿ ಬಹಳಷ್ಟು ಮುಖ್ಯವಾಗಿದೆ. ಒಟ್ಟಿನಲ್ಲಿ ರಾಹುಗ್ರಹವು ಭಾರತದ ಪ್ರಕ್ಷುಬ್ಧತೆಗೆ, ಹಾಗೆಯೇ ಮೋದಿಯವರ ಪಾಲಿಗೆ ಹಲವು ತಲೆನೋವುಗಳಿಗೆ ಕಾರಣವಾಗುವ ಉರಿಕೆಂಡಗಳನ್ನು ಸೃಷ್ಟಿಸುತ್ತಲೇ ಇರುತ್ತದೆ. ಶನೈಶ್ಚರ ಮತ್ತು ಗುರುಗ್ರಹಗಳ ಮಕರ ರಾಶಿಯಲ್ಲಿನ ವರ್ಷದುದ್ದಕ್ಕೂ ಒಗ್ಗೂಡಿಯೇ ಇರುವ ಸಂಯೋಜನೆ ವರ್ತಮಾನದ ವಿಚಾರದಲ್ಲಿ ಒಮ್ಮೆ ಬಲಿಷ್ಠರಾಗಿ ಕಾಣುವ, ಮತ್ತೆ ಸೊರಗಿದಂತೆ ಕಾಣುವ ಧಾತುಗಳನ್ನು ಮೋದಿಯವರ ಪಾಲಿಗೆ ರಾಹು ತಂದಿಡುವ ವಿಹ್ವಲತೆಯನ್ನು ಸಾಕಷ್ಟು ನಿಯಂತ್ರಿಸಲು ಸಜ್ಜಾಗಿಯೇ ಇರುತ್ತವೆ ಎಂಬುದು ಸ್ಪಷ್ಟ.

    (ಲೇಖಕರು ಭಾರತೀಯ ಜ್ಯೋತಿಷವಿಜ್ಞಾನ ಸಂಶೋಧಕರು, ಕಥೆಗಾರರು)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts