More

    ಹೂವಿನಶಿಗ್ಲಿ ಜಾತ್ರಾ ಮಹೋತ್ಸವ ಇಂದಿನಿಂದ

    ಸವಣೂರ: ತಾಲೂಕಿನ ಹೂವಿನಶಿಗ್ಲಿ ಗ್ರಾಮದ ವಿರಕ್ತಮಠದ 41ನೇ ಜಾತ್ರಾ ಮಹೋತ್ಸವ ಹಾಗೂ ಲಿಂ. ನಿರಂಜನ ಮಹಾಸ್ವಾಮಿಗಳವರ 10ನೇ ಪುಣ್ಯ ಸ್ಮರಣೋತ್ಸವ ಕಾರ್ಯಕ್ರಮ ಜ. 13ರಿಂದ 16 ರವರೆಗೆ ಜರುಗಲಿದೆ.

    ಜ. 13ರಂದು ಬೆಳಗ್ಗೆ 7 ಗಂಟೆಗೆ ಬನ್ನಿಕೊಪ್ಪ ಜಪದಕಟ್ಟಿ ಮಠದ ಸುಜ್ಞಾನದೇವ ಶಿವಾಚಾರ್ಯರಿಂದ ಲಿಂಗದೀಕ್ಷೆ ಹಾಗೂ ಅಯ್ಯಾಚಾರ. 9 ಗಂಟೆಗೆ ಜರಗುವ ಷಟಸ್ಥಲ ಧ್ವಜಾರೋಹಣವನ್ನು ಸವಣೂರ ಕಲ್ಮಠದ ಮಹಾಂತ ಸ್ವಾಮೀಜಿ ನೆರವೇರಿಸುವರು. ಸಂಜೆ 7 ಗಂಟೆಗೆ ಪ್ರವಚನ ಮಹಾಮಂಗಲ ಕಾರ್ಯಕ್ರಮ. ಗುಡ್ಡದ ಆನ್ವೇರಿ ವಿರಕ್ತಮಠದ ಶಿವಯೋಗೀಶ್ವರ ಮಹಾಸ್ವಾಮೀಜಿ ಸಾನ್ನಿಧ್ಯ ವಹಿಸುವರು. ನೆಗಳೂರಿನ ಹಿರೇಮಠದ ಗುರುಶಾಂತೇಶ್ವರ ಶಿವಾಚಾರ್ಯ ಸ್ವಾಮೀಜಿ ಅಧ್ಯಕ್ಷತೆ ವಹಿಸುವರು. ಹರ್ಲಾಪುರ ಕೊಟ್ಟೂರೇಶ್ವರ ಮಠದ ಅಭಿನವ ಕೊಟ್ಟೂರೇಶ್ವರ ಸ್ವಾಮೀಜಿ ನೇತೃತ್ವ ವಹಿಸುವರು.

    14ರಂದು ಬೆಳಗ್ಗೆ 6 ಗಂಟೆಗೆ ಶ್ರೀಗಳ ಕರ್ತೃ ಗದ್ದುಗೆಗೆ ವಿಶೇಷ ಪೂಜಾ ಹಾಗೂ ಮಠದ ಹಳೆಯ ವೈದಿಕ ವಿದ್ಯಾರ್ಥಿಗಳಿಂದ ಮಹಾ ಮಂಗಳಾರತಿ ಕಾರ್ಯಕ್ರಮ ಜರಗುವುದು. 8 ಗಂಟೆಗೆ ಸೂರಣಗಿ ಮತ್ತು ಯಲವಿಗಿ ಗ್ರಾಮದ ಪುರವಂತರ ಮೇಳದ ವೀರಗಾಸೆಯೊಂದಿಗೆ ಗ್ರಾಮದ ಪ್ರಮುಖ ಬೀದಿಯಲ್ಲಿ ಲಿಂ. ನಿರಂಜನ ಮಹಾಸ್ವಾಮೀಜಿ ಭಾವಚಿತ್ರ ಹಾಗೂ ಗುರು ಗುಹೆಸಿದ್ಧೇಶ್ವರ ಉತ್ಸವ ಮೂರ್ತಿಯ ಮೆರವಣಿಗೆ ನಡೆಯಲಿದೆ. ಸಂಜೆ 4 ಗಂಟೆಗೆ ಶ್ರೀಗಳ ತುಲಾಭಾರ, ನಂತರ 5 ಗಂಟೆಗೆ ಆಗಮಿಸಿದ ಹರಗುರು ಚರಮೂರ್ತಿಗಳ ಸಾನ್ನಿಧ್ಯದಲ್ಲಿ ಡೊಳ್ಳು, ಬಾಜಾ ಭಜಂತ್ರಿ, ಝಾಂಜ್, ನಂದಿಕೋಲು ಹಾಗೂ ಕೀಲುಕುದರೆ ನೃತ್ಯದೊಂದಿಗೆ ಮಹಾರಥೋತ್ಸವ ಜರುಗುವುದು. ಸಂಜೆ 7 ಗಂಟೆಗೆ ಪುಣ್ಯಸ್ಮರಣೋತ್ಸವ ಕಾರ್ಯಕ್ರಮ ಜರುಗುವುದು. ವೈದ್ಯ ನಿರಂಜನ ಪ್ರಶಸ್ತಿ ಪ್ರದಾನ ಜರಗುವುದು.

    ಜ. 15ರಂದು ಬೆಳಗ್ಗೆ 10.30ಕ್ಕೆ ಸಾಮೂಹಿಕ ವಿವಾಹ ಕಾರ್ಯಕ್ರಮ. ಸವಣೂರಿನ ಚನ್ನಬಸವ ಸ್ವಾಮೀಜಿ ಸಾನ್ನಿಧ್ಯ, ಶಿಗ್ಗಾಂವಿಯ ಸಂಗನಬಸವ ಸ್ವಾಮೀಜಿ ಅಧ್ಯಕ್ಷತೆ, ಹಾವೇರಿಯ ಅಭಿನವ ರುದ್ರಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ನೇತೃತ್ವ ವಹಿಸುವರು. ಸಂಜೆ 3 ಗಂಟೆಗೆ ಶ್ರೀಗಳವರ ತುಲಾಭಾರ, 4 ಗಂಟೆಗೆ ಗುರುಕುಲ ಶಾಲಾ ಮಕ್ಕಳಿಂದ ಮಲ್ಲಕಂಬ ಪ್ರದರ್ಶನ, 5 ಗಂಟೆಗೆ ಕಡುಬಿನ ಕಾಳಗ ಜರುಗುವುದು. ನಂತರ 6 ಗಂಟೆಗೆ ಮಹಾತ್ಮರ ಬದುಕು-ಬೆಳಕು ಚಿಂತನಗೋಷ್ಠಿ ಕಾರ್ಯಕ್ರಮ ಜರುಗುವುದು. ಬಾಲೇಹೊಸೂರಿನ ದಿಂಗಾಲೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಹಾವೇರಿಯ ಸದಾಶಿವ ಸ್ವಾಮೀಜಿ ಅಧ್ಯಕ್ಷತೆ, ಅಕ್ಕಿಆಲೂರಿನ ಶಿವಬಸವ ಸ್ವಾಮೀಜಿ ನೇತೃತ್ವವನ್ನು ವಹಿಸುವರು. ಗೃಹ ಸಚಿವ ಬಸವರಾಜ ಬೊಮ್ಮಾಯಿ, ಸಂಸದ ಶಿವಕುಮಾರ ಉದಾಸಿ, ಶಾಸಕರಾದ ನೆಹರು ಓಲೇಕಾರ, ರಾಮಣ್ಣ ಲಮಾಣಿ, ವಿಧಾನ ಪರಿಷತ್ ಸದಸ್ಯ ಪ್ರದೀಪ ಶೆಟ್ಟರ, ಹಾವೇರಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಶಿವರಾಜ ಸಜ್ಜನ ಇತರರು ಭಾಗವಹಿಸುವರು. ಜ. 16ರಂದು ಬೆಳಗ್ಗೆ 8 ಗಂಟೆಗೆ ರಾಜ್ಯ ಮಟ್ಟದ ಭಾರಿ ಗಾಡಾ ಓಡಿಸುವ ಸ್ಪರ್ಧೆ, ನಂತರ ಮಠದ ಅಧ್ಯಕ್ಷರಾದ ಚನ್ನವೀರ ಮಹಾಸ್ವಾಮಿ ಅವರಿಗೆ ಭಕ್ತರಿಂದ ತುಲಾಭಾರ ನಡೆಯಲಿದೆ.

    ತ್ರಿವಿಧ ದಾಸೋಹಕ್ಕೆ ಮಾದರಿ ಮಠ

    ಜ್ಞಾನ ದಾಸೋಹದೊಂದಿಗೆ, ಅನ್ನ, ಅಕ್ಷರ ದಾಸೋಹ ಕೈಗೊಳ್ಳುತ್ತಿರುವ ಹೂವಿನಶಿಗ್ಲಿ ವಿರಕ್ತಮಠ ತನ್ನ ಕಾಯಕ ನಿಷ್ಠೆಯಿಂದ ಅಗ್ರಪಂಕ್ತಿಯಲ್ಲಿ ಕಂಗೊಳಿಸುತ್ತಿದೆ. ಶ್ರೀಮಠದ ಸಂಸ್ಥಾಪಕ ಪೀಠಾಧಿಪತಿಗಳಾದ ಲಿಂ.ನಿರಂಜನ ಸ್ವಾಮಿಗಳ ದೂರದೃಷ್ಟಿ ಹಾಗೂ ಇಂದಿನ ಪೀಠಾಧಿಪತಿ ಚನ್ನವೀರ ಸ್ವಾಮೀಜಿ ಅವರ ಕಾಯಕ ನಿಷ್ಠೆಯಿಂದಾಗಿ ತಾಲೂಕಿನ ಹೂವಿನಶಿಗ್ಲಿ ವಿರಕ್ತಮಠ ಇಂದು ನಾಡಿನಾದ್ಯಂತ ಖ್ಯಾತಿ ಪಡೆದಿದೆ.

    ಗ್ರಾಮೀಣ ಭಾಗದ ಬಡ ಮಕ್ಕಳಿಗೆ ಸಂಸ್ಕಾರದ ಶಿಕ್ಷಣ ನೀಡುವ ಸದುದ್ದೇಶದಿಂದ ಶ್ರೀ ಗುರುಕುಲ ಶಿಕ್ಷಣ ಸಂಸ್ಥೆ ಕಟ್ಟಿ ಪೂರ್ವ ಪ್ರಾಥಮಿಕ, ಪ್ರಾಥಮಿಕ, ಪ್ರೌಢ ಶಾಲೆ ಪ್ರಾರಂಭಿಸಲಾಯಿತು. ಹಾವೇರಿ ತಾಲೂಕಿನ ಸೋಮನಕಟ್ಟಿಯ ಪಂಚಾಗ್ನಿಮಠ, ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಕೊಂಚಿಗೇರಿಯ ವಿರಕ್ತಮಠ, ಬೀದರ ಜಿಲ್ಲೆಯ ಔರಾದ ತಾಲೂಕಿನ ಸೋನಾಳದ ವಿರಕ್ತಮಠ, ಪಕ್ಕದಲ್ಲಿರುವ ಆಂಧ್ರಪ್ರದೇಶದ ನಾಗೂರಿನ ವಿರಕ್ತಮಠ ಪೂಜ್ಯರ ಸನ್ನಿಧಿಗೆ ಸೇರಿದ್ದು ನೋಡಿದರೆ, ಪೂಜ್ಯರ ಕಾರ್ಯದಕ್ಷತೆಗೆ ತಲೆಬಾಗಬೇಕಾಗುತ್ತದೆ. ತ್ಯಾಗಕ್ಕೆ, ವಿರಕ್ತತೆಗೆ, ವಿರಾಗಕ್ಕೆ ಮತ್ತೊಂದು ಹೆಸರಾಗಿದ್ದ ಹೂವಿನಶಿಗ್ಲಿ ವಿರಕ್ತಮಠದ ಲಿಂ. ನಿರಂಜನ ಮಹಾಸ್ವಾಮೀಜಿ 2009ರ ಡಿಸೆಂಬರ್ 21ರಂದು ಲಿಂಗಕೈರಾದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts