More

    ಒಳ ಮೀಸಲಾತಿ ವರದಿ ಶಿಫಾರಸಿನ ವಿರುದ್ಧ ಹೋರಾಟ

    ಹೊನ್ನಾಳಿ: ಸರ್ಕಾರ ಘೋಷಣೆ ಮಾಡಿದ ಒಳ ಮೀಸಲಾತಿ ವರದಿ ಶಿಫಾರಸಿನ ವಿರುದ್ಧ ಬಂಜಾರ, ಕೊರಚ, ಕೊರಮ ಹಾಗೂ ಇತರೆ ಸಮುದಾಯದವರು ಬುಧವಾರ ಪ್ರತಿಭಟನೆ ನಡೆಸಿ, ತಕ್ಷಣ ಒಳ ಮೀಸಲಾತಿ ಶಿಫಾರಸು ವಾಪಾಸ್ ಪಡೆಯಬೇಕು ಎಂದು ಒತ್ತಾಯಿಸಿ ತಹಸೀಲ್ದಾರ್ ತಿರುಪತಿ ಪಾಟೀಲ್ ಅವರಿಗೆ ಮನವಿ ಅರ್ಪಿಸಿದರು.

    ನೂರಾರು ಪ್ರತಿಭಟನಾಕಾರರು ಪಟ್ಟಣದ ಟಿಬಿ ವೃತ್ತದಿಂದ ತಾಲೂಕು ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.

    ಈ ಸಂದರ್ಭದಲ್ಲಿ ಮಾತನಾಡಿದ ಸಮುದಾಯದ ನಾಯಕರು, ರಾಜ್ಯ ಸರ್ಕಾರ ತನ್ನ ಕೊನೆ ಸಚಿವ ಸಂಪುಟ ಸಭೆಯಲ್ಲಿ ಸದಾಶಿವ ಆಯೋಗದ ವರದಿ ಜಾರಿಗೊಳಿಸಲು ಶಿಫಾರಸು ಮಾಡಿ ಎಸ್ಸಿ ಜಾತಿ ಜನಾಂಗವನ್ನು ಬೇರ್ಪಡಿಸಿ ಒಳ ಜಗಳಕ್ಕೆ ಕಾರಣ ಮಾಡಿದೆ. ಅವೈಜ್ಞಾನಿಕವಾದ ವರದಿ ಶಿಫಾರಸನ್ನು ಯಾರೂ ಒಪ್ಪುವುದಿಲ್ಲ ಎಂದು ಹೇಳಿದರು.

    ಲಂಬಾಣಿ ಜನಾಂಗ ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಅತ್ಯಂತ ಹಿಂದುಳಿದಿದೆ. ಇಂದಿಗೂ ಲಂಬಾಣಿ ಸಮಾಜದ ಬಾಂಧವರು ತಮ್ಮ ಹೊಟ್ಟೆ ಹೊರೆಯಲು ಇತರೆ ಜಿಲ್ಲೆಗಳಿಗೆ ವಲಸೆ ಹೊಗುತ್ತಿದ್ದಾರೆ ಎಂದು ಹೇಳಿದರು.

    ಇದುವರೆಗಿನ ಸರ್ಕಾರಗಳು ಈ ವರದಿ ಬಗ್ಗೆ ಚಕಾರ ಎತ್ತದೆ ಇದ್ದು, ಈಗ ಬಿಜೆಪಿ ಸರ್ಕಾರ ಸದಾಶಿವ ಆಯೋಗದ ಒಳ ಮೀಸಲಾತಿ ಜಾರಿಗೊಳಿಸಲು ಕೇಂದ್ರಕ್ಕೆ ಶಿಫಾರಸು ಮಾಡಿರುವುದು ಖಂಡನೀಯ ಎಂದು ಹೇಳಿದರು.

    ನಮ್ಮದೇ ಸಮಾಜದ ಕುಡಚಿ ಕ್ಷೇತ್ರದ ಶಾಸಕ ರಾಜೀವ್ ನಮಗಿದ್ದ ಶೇ.15ರ ಮೀಸಲಾತಿಯಲ್ಲಿ ಸಬ್‌ಇನ್ಸಪೆಕ್ಟರ್ ಆಗಿ ನೇಮಕವಾಗಿದ್ದರು. ನಂತರ 2 ಬಾರಿ ಶಾಸಕರಾಗಿ ಆಯ್ಕೆಯಾದರು. ಈಗ ಅವರಿಗೆ ರಾಜ್ಯ ಬಂಜಾರ ನಿಗಮದ ಅಧ್ಯಕ್ಷಗಿರಿ ಕೊಟ್ಟ ಕಾರಣ ಬಂಜಾರ ಸಮುದಾಯ ಏಕೆ ಪ್ರತಿಭಟನೆ ಮಾಡುತ್ತಿದ್ದಾರೆ ಎಂದು ಪ್ರಶ್ನಿಸುತ್ತಿದ್ದಾರೆ. ಇವರಿಗೆ ಸಮಾಜದ ಬಗ್ಗೆ ಕಾಳಜಿ ಇದ್ದರೆ ಸದಾಶಿವ ವರದಿ ಅನುಷ್ಠಾನದ ವಿರುದ್ಧ ಹೋರಾಟ ಮಾಡಲಿ ಎಂದರು.

    ಜಿಪಂ ಮಾಜಿ ಉಪಾಧ್ಯಕ್ಷ ಸುರೇಂದ್ರನಾಯ್ಕ, ಬಂಜಾರ ಅಭಿವೃದ್ಧಿ ನಿಗಮದ ಮಾಜಿ ನಿರ್ದೇಶಕ ಮಾರುತಿನಾಯ್ಕ, ಸಮಾಜದ ಮುಖಂಡರಾದ ಡಾ. ಈಶ್ವರನಾಯ್ಕ, ಶಿವರಾಮನಾಯ್ಕ, ರಮೇಶ್ ನಾಯ್ಕ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts