More

    ಕಂದಾಯ ವ್ಯಾಪ್ತಿಗೆ ತರಲು ಶ್ರಮ

    ಹೊನ್ನಾಳಿ: ಸ್ಥಳಾಂತರ ಗ್ರಾಮಗಳಾದ ಯಕ್ಕನಹಳ್ಳಿ, ಮಳಲಿ, ಲಿಂಗಾಪುರ, ಕುರುವ, ಹನುಮಸಾಗರ ಸೇರಿದಂತೆ ಅನೇಕ ಗ್ರಾಮಗಳು ಕಂದಾಯ ಗ್ರಾಮಗಳಿಂದ ವಂಚಿತವಾಗಿದ್ದು, ಶೀಘ್ರ ಕಂದಾಯ ಗ್ರಾಮ ವ್ಯಾಪ್ತಿಗೆ ತರಲು ಶ್ರಮಿಸಲಾಗುವುದು ಎಂದು ಶಾಸಕ ಡಿ.ಜಿ. ಶಾಂತನಗೌಡ ಭರವಸೆ ನೀಡಿದರು.

    ತಾಲೂಕಿನ ಯಕ್ಕನಹಳ್ಳಿ ಗ್ರಾಮದ ಬಸವೇಶ್ವರ ಸಮುದಾಯ ಭವನದಲ್ಲಿ ಏರ್ಪಡಿಸಿದ್ದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಈ ಸಂಬಂಧ ಶೀಘ್ರ ಜಿಲ್ಲಾಧಿಕಾರಿಗಳನ್ನು ಗ್ರಾಮಕ್ಕೆ ಕರೆಸಿ ಚರ್ಚಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.

    ಗ್ರಾಪಂ ಕಚೇರಿ ಶಿಥಿಲಾವಸ್ಥೆಯಲ್ಲಿದೆ. ಅಲ್ಲಿ ಆಡಳಿತ ನಡೆಸಲು ಸಾಧ್ಯವಾಗುತ್ತಿಲ್ಲ, ಮತ್ತೆ ದಾಖಲಾತಿಗಳು ಹಾಳಾಗುವ ಸಂಭವ ಇರುವುದರಿಂದ ಕೂಡಲೇ ನೂತನ ಗ್ರಾಪಂ ಕಟ್ಟಡಕ್ಕೆ ಅನುದಾನ ನೀಡಬೇಕೆಂದು ಯಕ್ಕನಹಳ್ಳಿ ಗ್ರಾಪಂ ಆಡಳಿತ ವರ್ಗ ಹಾಗೂ ಗ್ರಾಮಸ್ಥರು ಶಾಸಕರಲ್ಲಿ ಮನವಿ ಮಾಡಿದಾಗ ಸ್ಥಳದಲ್ಲೇ ಪಿಡಿಒ ಅವರನ್ನು ಕರೆಸಿ 15ನೇ ಹಣಕಾಸಿನ ಯೋಜನೆ ಬಳಸಿ ಕಟ್ಟಡ ಕಟ್ಟಬಹುದಲ್ಲವೇ? ಎಂದು ಶಾಸಕರು ಪ್ರಶ್ನಿಸಿದಾಗ ಪಿಡಿಒ ಉತ್ತರಿಸಿ, 15 ನೇ ಹಣಕಾಸಿನಲ್ಲಿ ಸಿಬ್ಬಂದಿಗಳ ವೇತನ, ಕಚೇರಿಯ ಖರ್ಚುವೆಚ್ಚ ಮಾಡುತ್ತಿದ್ದೇವೆ, ಕಟ್ಟಡಕ್ಕೆ ಅನುದಾನ ಇಲ್ಲ ಎಂದಾಗ, ಸರ್ಕಾರದಿಂದ ಅನುದಾನ ತರುತ್ತೇನೆ ಎಂದು ಗ್ರಾಮಸ್ಥರಿಗೆ ಭರವಸೆ ನೀಡಿದರು.

    ಭದ್ರಾ ನಾಲೆಯಲ್ಲಿ ಮಹಿಳೆಯರು ಬಟ್ಟೆ ತೊಳೆಯಲು ಸೋಪಾನದ ವ್ಯವಸ್ಥೆ ಇಲ್ಲ, ನಮಗೆ ಬಹಳ ತೊಂದರೆಯಾಗುತ್ತಿದೆ ಎಂದು ಸಮಸ್ಯೆ ಹೇಳಿಕೊಂಡಿದ್ದರು. ಅವರ ಮನವಿಯಂತೆ ನಾಲೆಯಲ್ಲಿ ನೀರು ಬರುವ ಮುಂಚೆಯೇ ಸೋಪಾನ ಕಟ್ಟಿಸಿಕೊಡುತ್ತೇನೆ ಎಂದು ಆಶ್ವಾಸನೆ ನೀಡಿದರು.

    ಕಳೆದ ಬಿಜೆಪಿ ಸರ್ಕಾರದಲ್ಲಿ ಜಲಜೀವನ್ ಮಿಷನ್ ಕಾಮಗಾರಿ ಕಳಪೆಯಿಂದ ಕೂಡಿದ್ದು, ಹಲವಾರು ಮನೆಗಳಿಗೆ ನೀರೇ ತಲುಪಿಲ್ಲ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳ ಜತೆ ಚರ್ಚೆ ಮಾಡಿ ಸರಿಪಡಿಸುವುದಕ್ಕೆ ಕ್ರಮ ಕೈಗೊಳ್ಳುತ್ತೇನೆ ಎಂದು ತಿಳಿಸಿದರು.

    ಚನ್ನಗಿರಿ ಶಾಸಕ ಶಿವಗಂಗಾ ಬಸವರಾಜ್ ಮಾತನಾಡಿ, ಹಿರಿಯ ಶಾಸಕ ಡಿ.ಜಿ. ಶಾಂತನಗೌಡರ ಜತೆಗೂಡಿ ಚನ್ನಗಿರಿ ಹಾಗೂ ಹೊನ್ನಾಳಿ ತಾಲೂಕಿಗೆ ಆಗಬೇಕಾದ ಅಭಿವೃದ್ಧಿ ಕಾರ್ಯಗಳನ್ನು ಇಬ್ಬರೂ ಸೇರಿ ಮಾಡುತ್ತೇವೆ. ಡಿ.ಜಿ.ಶಾಂತನಗೌಡರ ಅನುಭವ ಹಾಗೂ ಮಾರ್ಗದರ್ಶನ ಪಡೆಯುತ್ತೇನೆ ಎಂದರು.

    ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಬಿ. ಮಂಜಪ್ಪ ಮಾತನಾಡಿ, ನಮ್ಮ ಸರ್ಕಾರ ಪ್ರಣಾಳಿಕೆಯಲ್ಲಿ ಭರವಸೆ ನೀಡಿದಂತೆ ಐದು ಯೋಜನೆ ಜಾರಿಗೆ ತಂದು, ಎಲ್ಲ ವರ್ಗದವರು ಸ್ವಾಭಿಮಾನದಿಂದ ಜೀವನ ಮಾಡುವುದಕ್ಕೆ ಅವಕಾಶ ಕಲ್ಪಿಸಿದೆ. ಕೊಟ್ಟ ಮಾತಿನಂತೆ ನಡೆದುಕೊಂಡ ಪಕ್ಷ ಯಾವುದಾದರು ಇದ್ದರೆ ಅದು ಕಾಂಗ್ರೆಸ್ ಪಕ್ಷ ಎಂದರು.

    ಮಾಜಿ ಶಾಸಕ ಡಾ.ಗಂಗಪ್ಪ, ಸಾಸ್ವೆಹಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಆರ್. ನಾಗಪ್ಪ, ಎಚ್.ಎ. ಉಮಾಪತಿ, ಬಿ. ಸಿದ್ದಪ್ಪ, ಡಿ.ಜಿ. ವಿಶ್ವಾನಥ್, ಗದ್ದಿಗೇಶ್, ಉಪಾಧ್ಯಕ್ಷ ಮುಕ್ತೇನಹಳ್ಳಿ ಮರುಳಸಿದ್ದಪ್ಪ ಮಾತನಾಡಿದರು.

    ಎಂ.ಆರ್. ಮಹೇಶ್, ಕೆಂಗಲಹಳ್ಳಿ ಷಣ್ಮುಖಪ್ಪ, ಕುಂದೂರು ಶಿವಣ್ಣಗೌಡ್ರು, ಯಕ್ಕನಹಳ್ಳಿ ಗ್ರಾಪಂ ಅಧ್ಯಕ್ಷೆ ಮಂಜಮ್ಮ, ಉಪಾಧ್ಯಕ್ಷೆ ರೇಣುಕಮ್ಮ, ಸದಸ್ಯರಾದ ರಂಗಮ್ಮ, ಮಾಜಿ ಅಧ್ಯಕ್ಷ ದಯಾನಂದ್, ದೊಡ್ಡರಂಗಪ್ಪ, ರಾಜಣ್ಣ, ಹಾಲೇಶಪ್ಪ, ನಾಗರಾಜಪ್ಪ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts