More

    ಬಿಎಲ್‌ಒ ಕಾರ್ಯದಿಂದ ಕೈಬಿಡಲು ಮನವಿ

    ಹೊನ್ನಾಳಿ: ಸರ್ಕಾರದ ಎಲ್ಲ ಯೋಜನೆಗಳಿಗೂ ನಮ್ಮನ್ನೇ ಬಳಸಿಕೊಳ್ಳುತ್ತಿರುವುದರಿಂದ ನಮಗೆ ತೀವ್ರ ಒತ್ತಡ ಉಂಟಾಗುತ್ತಿದೆ. ನಾವುಗಳು ಇನ್ಮುಂದೆ ಬಿಎಲ್‌ಒ ಕೆಲಸ ಮಾಡುವುದಿಲ್ಲ. ನಮ್ಮ ಮೂಲ ಸೇವೆ ಮಾಡಲು ಕೈಬಿಡಿ ಎಂದು ತಾಲೂಕಿನ 200ಕ್ಕೂ ಹೆಚ್ಚು ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು ತಹಸೀಲ್ದಾರ್‌ಗೆ ಮನವಿ ಮಾಡಿದರು.

    ಗುರುವಾರ ತಹಸೀಲ್ದಾರ್ ಕಚೇರಿಗೆ ಆಗಮಿಸಿದ ಕಾರ್ಯಕರ್ತೆಯರು ತಹಸೀಲ್ದಾರ್ ತಿರುಪತಿ ಪಾಟೀಲ್ ಅವರೊಂದಿಗೆ ಚರ್ಚಿಸಿದರು.

    ಈ ಸಂದರ್ಭ ಮಾತನಾಡಿದ ಕಾರ್ಯಕರ್ತೆಯರು, ಅಧಿಕಾರಿಗಳ ಪ್ರಕಾರ ನಾವು ಅಂಗನವಾಡಿ ಕೆಲಸ ಮಾಡಲು ಸಿದ್ಧ್ದರಿದ್ದೇವೆ. ಆದರೆ, ಬೇರೆ ಬೇರೆ ಇಲಾಖೆಗಳ ಕೆಲಸ ಮಾಡಲು ತಯಾರಿಲ್ಲ. ಚುನಾವಣಾ ಕೆಲಸ ನಮಗೆ ಕೊಡಬೇಡಿ. ಬಿಎಲ್‌ಒ ಕೆಲಸದಿಂದ ಅಂಗನವಾಡಿಗಳಲ್ಲಿ ದಿನೇದಿನೆ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿದೆ ಎಂದು ದೂರಿದರು.

    ಆರೋಗ್ಯ, ಕಂದಾಯ, ಶಿಕ್ಷಣ ಇಲಾಖೆ ಸೇರಿದಂತೆ ಅನೇಕ ಇಲಾಖೆಗಳ ಕೆಲಸಕ್ಕೆ ನಮ್ಮನ್ನು ನಿಯೋಜನೆ ಮಾಡುತ್ತಾರೆ. ಜತೆಗೆ, ಆಧಾರ್ ಲಿಂಕ್ ಮಾಡುವುದು, ವೆರಿಫೈ ಮಾಡುವುದು ಸೇರಿದಂತೆ ಮಾತೃಪೂರ್ಣ ಯೋಜನೆಗೂ ನಮ್ಮನ್ನು ಬಳಸಿಕೊಳ್ಳುತ್ತಿದ್ದಾರೆ.

    ಅಂಗನವಾಡಿ ಸಹಾಯಕರು ಇಲ್ಲದಿದ್ದಾಗ ಅವರು ಮಾಡುವ ಎಲ್ಲ ಕೆಲಸ ನಾವೇ ಮಾಡಬೇಕು. ಇದೀಗ ಗೃಹಲಕ್ಷ್ಮೀ, ಸುಕನ್ಯಾ ಸಮೃದ್ಧಿ ಯೋಜನೆಯಗೂ ತಮ್ಮ ಸೇವೆ ಬಯಸುತ್ತಿದ್ದಾರೆ. ಇದರಿಂದ ನಮ್ಮ ಮೂಲ ಸೇವೆ ಮಾಡಲು ಸಹ ನಮ್ಮಿಂದ ಸಾಧ್ಯವಾಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

    ಸರ್ಕಾರ ಈ ಕೆಲಸ ಮಾಡಲು ಮೊಬೈಲ್ ನೀಡಿದೆ. ಆದರೆ, ಅದು ಗುಣಮಟ್ಟದಿಂದ ಕೂಡಿಲ್ಲ. ಇದರಿಂದ ನಮ್ಮ ಸ್ವಂತ ಮೊಬೈಲ್ ಬಳಸುವಂತಾಗಿದೆ. ಶೇ. 80ರಷ್ಟು ಅಂಗನವಾಡಿ ಕಾರ್ಯಕರ್ತೆಯರಿಗೆ ಮೊಬೈಲ್ ಬಳಕೆ ಸರಿಯಾಗಿ ಗೊತ್ತಿಲ್ಲ ಎಂದು ತಮ್ಮ ಗೋಳು ತೋಡಿಕೊಂಡರು.

    ನಮ್ಮನ್ನು ಅನ್ಯ ಚಟುವಟಿಕೆಗಳಿಗೆ ನಿಯೋಜಿಸುತ್ತಿರುವುದರಿಂದ ಅಂಗನವಾಡಿಯಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿದೆ. ಎಲ್ಲ ಮಕ್ಕಳು ಖಾಸಗಿ ಶಾಲೆಗಳತ್ತ ಮುಖ ಮಾಡುತ್ತಿರುವುದರಿಂದ ಮಕ್ಕಳ ಸಂಖ್ಯೆ ಕಡಿಮೆಯಾಗಿ ಅಂಗನವಾಡಿಗಳನ್ನು ಮುಚ್ಚುವ ಸ್ಥಿತಿಗೆ ಬಂದಿದೆ ಎಂದರು.

    ಆದ್ದರಿಂದ ನಮ್ಮ ಶಾಲಾ ಪೂರ್ವ ಶಿಕ್ಷಣದ ಕರ್ತವ್ಯ ಮಾತ್ರ ನಿರ್ವಹಿಸಿಲು ನಾವು ಸಿದ್ಧರಿದ್ದೇವೆ. ಇನ್ನು ಮುಂದೆ ಉಳಿದ ಇತರೆ ಯಾವುದೇ ಕೆಲಸ ಮಾಡಲು ನಾವು ತಯಾರಿಲ್ಲ ಎಂದು ಸ್ಪಷ್ಟಪಡಿಸಿದರು.

    ತಹಸೀಲ್ದಾರ್ ತಿರುಪತಿ ಪಾಟೀಲ್ ಮಾತನಾಡಿ, ನೀವು ನನ್ನೊಂದಿಗೆ ಮಾಡಿದ ಚರ್ಚೆಯ ಪೂರ್ಣ ಸಾರಂಶವನ್ನು ನಮ್ಮ ಮೇಲಧಿಕಾರಿಗಳ ಗಮನಕ್ಕೆ ತರುತ್ತೇನೆ ಎಂದು ಹೇಳಿದರು.

    ಸಿಡಿಪಿಒ ಮಹಾಂತೇಶ್ ಪೂಜಾರ್, ನಾಗಮ್ಮ, ಗೀತಾ, ಶೃತಿ, ಜಯಲಕ್ಷ್ಮಿ, ಪ್ರೇಮಾ, ಮಂಜುಳಾ, ಗಂಗಮ್ಮ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts