More

    ಮಧು ಸಂಗ್ರಹಕ್ಕೆ ಭಾರಿ ಡಿಮಾಂಡ್

    ಹರೀಶ್ ಮೋಟುಕಾನ

    ಮಂಗಳೂರು: ಕರೊನಾ ಭೀತಿ, ಲಾಕ್‌ಡೌನ್, ನಗರದ ಉದ್ಯೋಗಕ್ಕೆ ಕುತ್ತು…. ಇವೆಲ್ಲದರ ಪರಿಣಾಮ ಕೃಷಿ ಕ್ಷೇತ್ರದತ್ತ ಬರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಅದರಲ್ಲೂ ವಿದ್ಯಾವಂತ ಯುವಕರು ಜೇನು ಕೃಷಿಯಲ್ಲಿ ಬದುಕು ಕಟ್ಟಿಕೊಳ್ಳಲು ಮನಸ್ಸು ಮಾಡಿದ್ದಾರೆ. ಕಳೆದೆರಡು ತಿಂಗಳಿನಿಂದ ಜೇನು ಪೆಟ್ಟಿಗೆ/ತರಬೇತಿ ಪಡೆಯಲು ತೋಟಗಾರಿಕೆ ಇಲಾಖೆಗೆ ಅರ್ಜಿ ಸಲ್ಲಿಸುವವರ ಸಂಖ್ಯೆ ಹೆಚ್ಚಾಗಿದೆ.

    ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಈಗಾಗಲೇ 7,297 ರೈತರು(ಪಾರಂಪರಿಕ ಸಹಿತ) ಜೇನು ಸಾಕಾಣೆ ಮಾಡುತ್ತಿದ್ದು, ಈ ವರ್ಷ ಈ ಸಂಖ್ಯೆ ಶೇ.40ರಷ್ಟು ಹೆಚ್ಚಲಿದೆ. ಜೇನು ಪೆಟ್ಟಿಗೆ ಹಾಗೂ ತರಬೇತಿಗಾಗಿ ಉಭಯ ಜಿಲ್ಲೆಗಳಲ್ಲಿ ಈಗಾಗಲೇ 450ಕ್ಕೂ ಅಧಿಕ ಅರ್ಜಿಗಳು ಬಂದಿವೆ. ಜೇನು ಕೃಷಿಗೆ ಪ್ರತಿವರ್ಷವೂ ಬೇಡಿಕೆ ಬರುತ್ತಿದ್ದು, ಈ ವರ್ಷದ ಡಿಮಾಂಡ್ ಹೆಚ್ಚಿದೆ. ಜೇನು ಕೃಷಿಯು ಆದಾಯದ ಜತೆಗೆ ರೈತರ ಬೆಳೆಯಲ್ಲಿ ಹೆಚ್ಚುವರಿ ಇಳುವರಿಗೆ ಸಹಾಯಕವಾಗುತ್ತದೆ. ಈಗಾಗಲೇ ಭತ್ತ, ಅಡಕೆ, ತೆಂಗು, ಕಾಳುಮೆಣಸು ಸೇರಿದಂತೆ ಕೃಷಿ ಚಟುವಟಿಕೆಯಲ್ಲಿ ತೊಡಗಿರುವ ಯುವಜನರು ದುಡಿಮೆಯ ಕ್ಷೇತ್ರದ ಸಾಲಿಗೆ ಜೇನು ಕೃಷಿಯನ್ನೂ ಸೇರಿಸಿದ್ದಾರೆ.

    ಉಭಯ ಜಿಲ್ಲೆಗಳಲ್ಲಿ ಕಳೆದ ವರ್ಷ ರಾಷ್ಟ್ರೀಯ ತೋಟಗಾರಿಕೆ ಮಿಶನ್‌ನಡಿ 462, ಜಿಲ್ಲಾ ಪಂಚಾಯಿತಿಯಿಂದ 108, ರಾಜ್ಯ ವಲಯ ಯೋಜನೆಯಿಂದ 452 ಮಂದಿಗೆ ಜೇನು ಪೆಟ್ಟಿಗೆ ನೀಡಲಾಗಿತ್ತು. ಪ್ರಸ್ತುತ ಈ ಪೆಟ್ಟಿಗೆಗಾಗಿ ಅರ್ಜಿ ಸಲ್ಲಿಸಿದವರ ಸಂಖ್ಯೆ 400ರ ಗಡಿ ದಾಟಿದೆ. ಮಳೆಗಾಲ ಮುಗಿದ ಬಳಿಕ ಜೇನು ಪೆಟ್ಟಿಗೆಗೆ ಕೃಷಿಕರು ಸಂಪರ್ಕಿಸುತ್ತಿದ್ದರು. ಈ ಬಾರಿ ಅವಧಿಗೂ ಮುನ್ನವೇ ವಿಚಾರಿಸುತ್ತಿದ್ದು, ಯುವಕರೇ ಮುಂಚೂಣಿಯಲ್ಲಿದ್ದಾರೆ. ಮುಂಬೈ, ಬೆಂಗಳೂರು, ದುಬೈಯಿಂದ ಊರು ಸೇರಿದವರು ಆಸಕ್ತಿ ತೋರಿಸುತ್ತಿದ್ದಾರೆ ಎಂದು ತೋಟಗಾರಿಕಾ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

    ಮಧುವನ ಜೇನು ಕೃಷಿ ಯೋಜನೆಯಡಿ ಜೇನು ಕುಟುಂಬ, ಪೆಟ್ಟಿಗೆ, ಸ್ಟ್ಯಾಂಡ್ ಸಹಿತ 4500 ರೂ. ವೆಚ್ಚವಾಗುತ್ತದೆ. ಇದಕ್ಕೆ ಸಾಮಾನ್ಯ ವರ್ಗಕ್ಕೆ ಶೇ.75ರಷ್ಟು ಸಹಾಯಧನ, ಎಸ್‌ಸಿ/ಎಸ್‌ಟಿ ಸಮುದಾಯಕ್ಕೆ ಶೇ.90ರಷ್ಟು ಸಬ್ಸಿಡಿ ಸೌಲಭ್ಯವಿದೆ. ಅದೇ ರೀತಿ, ರಾಷ್ಟ್ರೀಯ ತೋಟಗಾರಿಕೆ ಮಿಶನ್‌ನಡಿ (ಎನ್‌ಎಚ್‌ಎಂ) ಒಂದು ಜೇನು ಕುಟುಂಬ, ಪೆಟ್ಟಿಗೆಯಂತೆ 50 ಪೆಟ್ಟಿಗೆ ಪಡೆಯಲು ಅವಕಾಶವಿದೆ. ಈ ಜೇನು ಕೃಷಿಗೂ ಸಬ್ಸಿಡಿ ಅವಕಾಶವಿದೆ.
    ಭುವನೇಶ್ವರಿ, ಉಪನಿರ್ದೇಶಕರು, ತೋಟಗಾರಿಕಾ ಇಲಾಖೆ ಉಡುಪಿ
    ಜೇನು ಕೃಷಿ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ. ಈ ವರ್ಷ ಅವಧಿಗೆ ಮುನ್ನವೇ ಬೇಡಿಕೆ ಹೆಚ್ಚಿದೆ. ಜೇನು ಕೃಷಿ ತರಬೇತಿ, ಪೆಟ್ಟಿಗೆಗಾಗಿ ಸಾಕಷ್ಟು ಮಂದಿ ಅರ್ಜಿ ಸಲ್ಲಿಸಿದ್ದಾರೆ. ಜೇನಿಗೆ ಸ್ಥಳೀಯ, ಮುಂಬೈ, ಬೆಂಗಳೂರು ಹಾಗೂ ವಿದೇಶಗಳಲ್ಲೂ ಉತ್ತಮ ಬೇಡಿಕೆ ಇದೆ. ಜೇನಿಗೆ ಔಷಧೀಯ ಗುಣವೂ ಇರುವುದರಿಂದ ಶುದ್ಧ ಜೇನಿಗೆ ಸದ್ಯ ಮಾರುಕಟ್ಟೆಯಲ್ಲಿ ಕೆ.ಜಿ.ಗೆ 500 ರೂ.ಇದೆ.
    ಎಚ್.ಆರ್.ನಾಯ್ಕ, ಉಪನಿರ್ದೇಶಕರು, ತೋಟಗಾರಿಕಾ ಇಲಾಖೆ ದ.ಕ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts