More

    ಕಠಿಣವಾಗಬೇಕಿದೆ ಮತಾಂತರ ನಿಷೇಧ ಕಾಯ್ದೆ

    ಚಿಕ್ಕಮಗಳೂರು: ರಾಜ್ಯದಲ್ಲಿ ಲವ್ ಜಿಹಾದ್ ತಡೆಗೆ ಮತಾಂತರ ನಿಷೇಧ ಕಾಯ್ದೆಯನ್ನು ಪರಿಣಾಮಕಾರಿಯಾಗಿ ಜಾರಿಗೆ ತರಬೇಕು. ಕಾಯ್ದೆಯನ್ನು ಮತ್ತಷ್ಟು ಕಠಿಣ ಮಾಡಬೇಕು ಎಂದು ಸಂಸದೆ ಶೋಭಾ ಕರಂದ್ಲಾಜೆ ಅಭಿಪ್ರಾಯಪಟ್ಟಿದ್ದಾರೆ.

    ಬೇರೆ ಬೇರೆ ರಾಜ್ಯಗಳಲ್ಲಿ ಆಗಿರುವ ಕಾನೂನಿನ ಸಾಧಕ-ಬಾಧಕಗಳ ಬಗ್ಗೆ ಚರ್ಚೆಯಾಗಬೇಕು. ಇದನ್ನು ಸಂವಿಧಾನದತ್ತವಾಗಿ ಹೇಗೆ ರೂಪಿಸಬಹುದು ಎಂಬ ಬಗ್ಗೆ ಪೊಲೀಸ್ ಇಲಾಖೆ ಸೇರಿದಂತೆ ಬೇರೆ ಬೇರೆ ಕಡೆಯಿಂದ ವರದಿ ತರಿಸಿಕೊಳ್ಳಬೇಕು. ಚರ್ಚೆಗಳು, ಅಧ್ಯಯನಗಳು ನಡೆಯಬೇಕು. ಈ ಕಾಯ್ದೆ ರೂಪಿಸುವ ವಿಚಾರದಲ್ಲಿ ಮುಖ್ಯಮಂತ್ರಿ, ಗೃಹಸಚಿವರು ನಿರ್ಧಾರ ಕೈಗೊಳ್ಳಬೇಕಿದೆ ಎಂದು ಸುದ್ದಿಗಾರರಿಗೆ ತಿಳಿಸಿದರು.

    ಮುಖ್ಯಮಂತ್ರಿ, ಗೃಹ ಸಚಿವರು, ಉನ್ನತ ಪೊಲೀಸ್ ಅಧಿಕಾರಿಗಳು ನ್ಯಾಯಾಲಯದವರೊಂದಿಗೂ ಮಾತನಾಡಬೇಕು. ಕಾನೂನು ಜಾರಿ ಮಾಡಿದರೆ ಅದು ನ್ಯಾಯಾಂಗದಲ್ಲಿ ರಕ್ಷಣೆ ಸಿಗಬೇಕು. ಗಟ್ಟಿಯಾಗಿ ಉಳಿಯಬೇಕು. ಈ ದೃಷ್ಟಿಕೋನದಿಂದ ಕಾನೂನು ರೂಪಿಸಬೇಕು. ಒಟ್ಟಿನಲ್ಲಿ ಲವ್ ಜಿಹಾದ್ ಹಾಗೂ ಮತಾಂತರ ಮಾಡುವವರಿಗೆ ಉಗ್ರ ಶಿಕ್ಷೆಯಾಗಬೇಕು ಎಂದು ಹೇಳಿದರು.

    ಭಯೋತ್ಪಾದನೆಯ ಇನ್ನೊಂದು ಮುಖ: ಲವ್ ಜಿಹಾದ್ ಈಗ ಕೇವಲ ಪ್ರೀತಿ, ಪ್ರೇಮ, ಮದುವೆ ಮಾತ್ರವಾಗಿ ಉಳಿದಿಲ್ಲ. ಭಯೋತ್ಪಾದಕತೆಯ ಇನ್ನೊಂದು ಮುಖವೂ ಅದಕ್ಕಿದೆ. ಒಂದು ಕೋಮಿನ ಜನಸಂಖ್ಯೆ ಹೆಚ್ಚು ಮಾಡುವ ವ್ಯವಸ್ಥಿತ ಷಡ್ಯಂತ್ರ ನಡೆಯುತ್ತಿದೆ. ಅವರ ಕೋಮಿನವರೇ ಬೇರೆ ಬೇರೆ ಭಾಗದ ಪ್ರಾರ್ಥನಾಲಯಗಳಲ್ಲಿ ಈ ಕುರಿತು ಭಾಷಣ ಮಾಡಿರುವುದು ಬೆಳಕಿಗೆ ಬರುತ್ತಿದೆ. ಓವೈಸಿಯಂತಹ ಕೋಮುವಾದಿಗಳು ಈ ಬಗ್ಗೆ ಬಹಿರಂಗ ಹೇಳಿಕೆ ನೀಡಿದ್ದಾರೆ ಎಂದರು.

    ಕರ್ನಾಟಕದ ಕರಾವಳಿ, ಬೆಂಗಳೂರು, ಬೇರೆ ಬೇರೆ ಭಾಗದಲ್ಲಿ ಈ ಷಡ್ಯಂತ್ರ ನಡೆಯುತ್ತಿದ್ದು, ಉಡುಪಿಯಲ್ಲಿ ಇತ್ತೀಚೆಗೆ 17 ವರ್ಷದ ಬಾಲಕಿಯೊಬ್ಬಳು ಯುವಕನೊಬ್ಬನ ಜತೆ ನಾಪತ್ತೆಯಾಗಿದ್ದಾಳೆ. ಚಿಕ್ಕ ಮಕ್ಕಳಿಗೆ ಹಣದ ಆಮಿಷವೊಡ್ಡಿ ತಮ್ಮ ಸಮಾಜಕ್ಕೆ ಪರಿವರ್ತಿಸುವ ಯತ್ನ ನಡೆದಿದೆ ಎಂದರು.

    ಚಾರ್ವಡಿ ಘಾಟಿ ರಸ್ತೆ ಅಭಿವೃದ್ಧಿಗೆ ಕೋರಿಕೆ: ಚಾರ್ವಡಿ ಘಾಟಿ ರಸ್ತೆಯನ್ನು ಇನ್ನಷ್ಟು ಅಭಿವೃದ್ಧಿಪಡಿಸಿ ರಾಷ್ಟ್ರೀಯ ಹೆದ್ದಾರಿಯಾಗಿ ಪರಿವರ್ತಿಸಲು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ತಿಳಿಸಿದರು. ಈ ರಸ್ತೆಗೆ ತಡೆಗೋಡೆಗಳನ್ನು ಕಟ್ಟುವ ಕೆಲಸ ಈಗಲೂ ನಡೆಯುತ್ತಿದ್ದು, ಇದನ್ನು ಇನ್ನಷ್ಟು ವಿಸ್ತರಿಸುವ ಸಂಬಂಧ ಯೋಜನೆ ರೂಪಿಸಲು ಸೂಚಿಸಿರುವುದಾಗಿ ಹೇಳಿದರು.

    ಶಿಶಿಲಾ-ಭೈರಾಪುರ ರಸ್ತೆಗೆ ಪ್ರಯತ್ನ: ಶಿಶಿಲಾ-ಭೈರಾಪುರ ರಸ್ತೆ ನಿರ್ವಣವಾದಲ್ಲಿ ಚಿಕ್ಕಮಗಳೂರಿನಿಂದ ಮಂಗಳೂರಿಗೆ ಅಂತರ ಕಡಿಮೆಯಾಗುತ್ತಿದೆ. ಇಂಧನ ಹಾಗೂ ಸಮಯ ಎರಡೂ ಉಳಿತಾಯವಾಗುತ್ತದೆ. ಆದರೆ ರಸ್ತೆ ನಿರ್ಮಾಣ ಯೋಜನೆಗೆ ನ್ಯಾಯಾಲಯ ತಡೆಯಾಜ್ಞೆ ನೀಡಿದೆ. ಇದು ಪರಿಸರ ಇಲಾಖೆಗೆ ಸಂಬಂಧಿಸಿದ್ದು, ಅರಣ್ಯಕ್ಕೆ ತೊಂದರೆಯಾಗಬಾರದು ಎನ್ನುವ ಕಾರಣಕ್ಕೆ ಇಲಾಖೆ ತುಂಬ ಗಟ್ಟಿ ನಿಲುವು ತಾಳಿದ್ದು, ಇಲಾಖೆಗೆ ಮನವರಿಕೆ ಮಾಡುವ ಪ್ರಯತ್ನ ಈಗ ನಡೆಯುತ್ತಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ತಿಳಿಸಿದರು.

    ಜಿಲ್ಲೆಯಲ್ಲಿ ಎಲ್ಲವೂ ಅರಣ್ಯ, ಪರಿಸರ ಇಲಾಖೆ ವ್ಯಾಪ್ತಿಗೆ ಬರುತ್ತದೆ. ಇದೇ ಕಾರಣಕ್ಕೆ ಕೆರೆಕಟ್ಟೆ ರಸ್ತೆ ವಿಸ್ತರಿಸಲು ಸಾಧ್ಯವಾಗಿಲ್ಲ. ಚರಂಡಿಯಿಂದ ಚರಂಡಿವರೆಗೆ ರಸ್ತೆ ದುರಸ್ತಿ ಮಾಡುತ್ತೇವೆಂದರೂ ಅವಕಾಶ ಕೊಟ್ಟಿಲ್ಲ. ಇದಕ್ಕಾಗಿ ಕೇಂದ್ರದಿಂದ ಬಿಡುಗಡೆಯಾಗಿದ್ದ ಅನುದಾನ ಕೂಡ ಸಹ ವಾಪಸ್ ಹೋಗಿದೆ. ಈ ನಿಟ್ಟಿನಲ್ಲಿ ಇಲಾಖೆಗೆ ಮನವರಿಕೆ ಮಾಡುವ ಪ್ರಯತ್ನ ಮುಂದುವರಿಸಿದ್ದೇನೆ ಎಂದು ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts