More

    ಪ್ರವೀಣ್ ಹತ್ಯೆ- ಎನ್‌ಐಎಗೆ ತನಿಖಾದೇಶ ನೀಡಿದ ಕೇಂದ್ರ ಗೃಹ ಇಲಾಖೆ

    ಪುತ್ತೂರು: ರಾಜ್ಯಾದ್ಯಂತ ಸಂಚಲನ ಮೂಡಿಸಿದ ದಕ್ಷಿಣ ಕನ್ನಡ ಜಿಲ್ಲೆ ಬಿಜೆಪಿ ಯುವ ಮೋರ್ಚಾದ ಪದಾಧಿಕಾರಿ ಬೆಳ್ಳಾರೆ ನಿವಾಸಿ ಪ್ರವೀಣ್ ನೆಟ್ಟಾರ್ ಹತ್ಯೆ ಪ್ರಕರಣದ ತನಿಖೆಯನ್ನು ಕರ್ನಾಟಕ ಸರ್ಕಾರದ ಶಿಫಾರಸಿ ಮೇರೆಗೆ ಕೇಂದ್ರ ಸರ್ಕಾರದ ಗೃಹ ಸಚಿವಾಲಯವು ರಾಷ್ಟ್ರೀಯ ತನಿಖಾ ದಳ ವಹಿಸಿಕೊಳ್ಳುವಂತೆ ಸೂಚಿಸಿದೆ.
    ಭಾರತ ಸರ್ಕಾರದ ಅಧೀನ ಕಾರ್ಯದರ್ಶಿ ವಿಪುಲ್ ಅಲೋಕ್ ಅ.3 ರಂದು ಈ ಬಗ್ಗೆ ರಾಷ್ಟ್ರೀಯ ತನಿಖಾ ಸಂಸ್ಥೆಯ ಮಹಾನಿರ್ದೇಶಕರಾಗಿ ಪತ್ರ ಬರೆದು ಸೂಚಿಸಿದ್ದಾರೆ. ಭಾರತ ಸರ್ಕಾರದ ಗೃಹ ಸಚಿವಾಲಯವು ಈ ಅದೇಶವನ್ನು ಹೊರಡಿಸಿದ್ದು, ಅದರ ಪ್ರತಿಯನ್ನು ಕರ್ನಾಟಕ ಸರಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಹಾಗೂ ಡಿಜಿಪಿ ಕರ್ನಾಟಕ ಅವರಿಗೆ ಅಧಿಕೃತವಾಗಿ ನೀಡಿದ್ದಾರೆ.
    ಪತ್ರದಲ್ಲಿ ಏನಿದೆ ?
    ಅಪರಿಚಿತ ದುಷ್ಕರ್ಮಿಗಳು ಹರಿತವಾದ ಆಯುಧಗಳಿಂದ ಶ್ರೀ ಪ್ರವೀಣ್ ನೆಟ್ಟಾರು ಎಂಬವರನ್ನು ಹತ್ಯೆ ಮಾಡಿರುವ ಕ್ರೂರ ಕೃತ್ಯಕ್ಕೆ ಸಂಬಂಧಿಸಿದಂತೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ಸಂಖ್ಯೆ 63/2022 ರಂತೆ ಐಪಿಸಿ ಸೆಕ್ಷನ್ ಯು/ಎಸ್ 302 ಆರ್/ಡಬ್ಲುೃ34. ಜು. 27 ರಂದು ಪ್ರಕರಣದ ದಾಖಲಾಗಿರುವ ಮಾಹಿತಿಯನ್ನು ಕರ್ನಾಟಕ ಸರ್ಕಾರದಿಂದ ಕೇಂದ್ರ ಸರ್ಕಾರವು ಪಡೆದಿರುತ್ತದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಥಳೀಯ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ ಮತ್ತು ಪ್ರಕರಣದ ಹೆಚ್ಚಿನ ತನಿಖೆಯ ವೇಳೆ ಸ್ಥಳೀಯ ಜನರಲ್ಲಿ ಭಯ ಹುಟ್ಟಿಸುವ ಉದ್ದೇಶದಿಂದ ಆರೋಪಿಗಳು ಈ ಕೃತ್ಯಕ್ಕೆ ಸಂಚು ರೂಪಿಸಿರುವುದು ತಿಳಿದು ಬಂದಿರುತ್ತದೆ. ಹೀಗಾಗಿ ಕರ್ನಾಟಕ ಪೊಲೀಸರು ಯುಎಪಿಎ ಸೆಕ್ಷನ್ 16, 18 ಮತ್ತು ಐಪಿಸಿ 120 ಬಿ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ಈ ಸ್ಥಾಪಿತ ಪ್ರಕರಣವು ರಾಷ್ಟ್ರೀಯ ತನಿಖಾ ಸಂಸ್ಥೆ ಕಾಯಿದೆ 2008ರ ಅಡಿಯಲ್ಲಿ ಬರುವ ಅಪರಾಧ ಎಂಬ ಅಭಿಪ್ರಾಯಕ್ಕೆ ಕೇಂದ್ರ ಸರ್ಕಾರವು ಬಂದಿದೆ. ಅಪರಾಧದ ಗಂಭೀರತೆ ಮತ್ತು ಅದರ ಅಂತರ-ರಾಜ್ಯ ಪರಿಣಾಮಗಳನ್ನು ಪರಿಗಣಿಸಿ ಅದನ್ನು ರಾಷ್ಟ್ರೀಯ ತನಿಖಾ ಸಂಸ್ಥೆಯು ರಾಷ್ಟ್ರೀಯ ತನಿಖಾ ಸಂಸ್ಥೆ ಕಾಯಿದೆ 2008 ರ ಪ್ರಕಾರ ತನಿಖೆಗೆ ಒಳಪಡಿಸುವ ಅಗತ್ಯವಿದೆ. ಆದ್ದರಿಂದ ಈಗ ರಾಷ್ಟ್ರೀಯ ತನಿಖಾ ಸಂಸ್ಥೆ ಕಾಯಿದೆ 2008 ರ ಸೆಕ್ಷನ್ 8 ರೊಂದಿಗೆ ಓದಲಾದ ಸೆಕ್ಷನ್ 6 ರ ಉಪ-ವಿಭಾಗ (4) ಅಡಿಯಲ್ಲಿ ನೀಡಲಾದ ಅಧಿಕಾರಗಳನ್ನು ಚಲಾಯಿಸುವ ಮೂಲಕ ಕೇಂದ್ರ ಸರ್ಕಾರವು ಈ ಮೂಲಕ ರಾಷ್ಟ್ರೀಯ ತನಿಖಾ ಸಂಸ್ಥೆಗೆ ಮೇಲೆ ಹೇಳಿದ ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಳ್ಳುವಂತೆ ನಿರ್ದೇಶಿಸುತ್ತದೆ ಎಂದು ಪತ್ರದಲ್ಲಿ ಬರೆಯಲಾಗಿದೆ.


    ಬೆಳ್ಳಾರೆ ಠಾಣೆಯಲ್ಲಿ ಪ್ರಕರಣ ದಾಖಲು
    ಪ್ರವೀಣ್ ನೆಟ್ಟಾರು ಅವರು ಬೆಳ್ಳಾರೆಯ ಮಾಸ್ತಿ ಕಟ್ಟೆ ಎಂಬಲ್ಲಿ ಅಕ್ಷಯ ಪ್ರೆಶ್ ಚಿಕನ್ ಫಾರ್ಮ್ ಎಂಬ ಕೋಳಿ ಅಂಗಡಿಯನ್ನು ನಡೆಸುತ್ತಿದ್ದರು. ಜು 26 ರಂದು ರಾತ್ರಿ ಎಂಟು ಗಂಟೆ ಸುಮಾರಿಗೆ ಪ್ರವೀಣ್ ಅವರು ತನ್ನ ಬೈಕ್‌ನಲ್ಲಿ ಮನೆಗೆ ಹೊರಡಲು ಸಿದ್ದರಾಗಿದ್ದಾಗ ಬೈಕ್‌ವೊಂದರಲ್ಲಿ ಮುಸುಕು ಧರಿಸಿಕೊಂಡು ಬಂದ ಮೂವರು ಅಪರಿಚಿತ ದುಷ್ಕರ್ಮಿಗಳು ಮಾರಕಾಯುದ್ದಗಳಿಂದ ಅವರ ಮೇಲೆ ದಾಳಿ ಮಾಡಿದ್ದರು. ರಕ್ತದ ಮಡುವಿನಲ್ಲಿ ಬಿದ್ದಿದ್ದ ಅವರನ್ನು ಕೂಡಲೇ ಪುತ್ತೂರಿನ ಬೊಳ್ವಾರ್ ಖಾಸಗಿ ಆಸ್ಪತ್ರೆಗೆ ದಾಕಲಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದರು ಎಂದು ಬೆಳ್ಳಾರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಬಗ್ಗೆ ಪ್ರವೀಣ್ ಅವರ ಅಂಗಡಿಯಲ್ಲಿ ಕೋಳಿ ಕ್ಲೀನಿಂಗ್ ಕೆಲಸ ಮಾಡುತ್ತಿದ್ದ ಮಧು ಕುಮಾರ್ ರಾಯನ್ ಎಂಬವರು ದೂರು ನೀಡಿದ್ದರು.



    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts