More

    ಮತದಾನ ದಿನದಂದು ವೇತನ ಸಹಿತ ರಜೆ: ತುಷಾರ್ ಗಿರಿನಾಥ್

    ಬೆಂಗಳೂರು: ಮತದಾನದ ದಿನದಂದು ವೇತನ ಸಹಿತ ರಜೆ ಇರುವುದರಿಂದ ಎಲ್ಲ ಸರ್ಕಾರಿ ನೌಕರರು ತಪ್ಪದೆ ಮತದಾನ ಮಾಡಬೇಕೆಂದು ಬೆಂಗಳೂರು ನಗರ ಜಿಲ್ಲಾ ಚುನಾವಣಾಧಿಕಾರಿ ತುಷಾರ್ ಗಿರಿನಾಥ್ ಕೋರಿದ್ದಾರೆ.

    ಮಹಿಳಾ ಮತದಾರರಲ್ಲಿ ಅರಿವು ಮೂಡಿಸಲು ಬಿಬಿಎಂಪಿಯಿಂದ ಸೋಮವಾರ ಪುರಭವನದಲ್ಲಿ ಆಯೋಜಿಸಲಾಗಿದ್ದ ‘ಪಿಂಕಥಾನ್’ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

    ಇದನ್ನೂ ಓದಿ: ಕರ್ನಾಟಕ ವಿಧಾನಸಭೆ ಚುನಾವಣೆ-2023: ಮೆಟ್ರೋ ಸೇವೆ ಮಧ್ಯರಾತ್ರಿವರೆಗೂ ವಿಸ್ತರಣೆ

    ಮಹಿಳೆಯರನ್ನು ಆಕರ್ಷಿಸಿಸುವ ಮತಗಟ್ಟೆಗಳು

    ರಾಜಧಾನಿಯಲ್ಲಿ ಎಲ್ಲರಿಗೂ ಮತದಾರರ ಗುರುತಿನ ಚೀಟಿ ವಿತರಿಸಲಾಗಿದೆ. ಇದರಲ್ಲಿ ಎಲ್ಲ ಮಾಹಿತಿ ಲಭ್ಯವಿದೆ. ಇದರಿಂದಾಗಿ ಸುಲಭವಾಗಿ ಮತಗಟ್ಟೆಗೆ ತೆರಳಿ ಮತ ಚಲಾಯಿಸಬಹುದು. ಮಹಿಳೆಯರಿಗಾಗಿ ಪ್ರತಿ ವಿಧಾನಸಭಾ ಕ್ಷೇತ್ರಗಳಲ್ಲಿ ಐದು ಪಿಂಕ್‌ಬೂತ್ ವ್ಯವಸ್ಥೆ ಮಾಡಲಾಗಿದೆ. ಪಿಂಕ್‌ಬೂತ್‌ಗಳಲ್ಲಿ ಮಹಿಳಾ ಅಧಿಕಾರಿ, ಸಿಬ್ಬಂದಿ ಕಾರ್ಯನಿರ್ವಹಿಸಲಿದ್ದಾರೆ. ಪಿಂಕ್ ಬಣ್ಣದಲ್ಲಿ ವಿವಿಧ ಚಿತ್ರಗಳನ್ನು ರಚಿಸುವುದು, ಮತ ಚಲಾವಣೆಗೆ ಬರುವವರಿಗೆ ಸ್ವಾಗತ ಕೋರುವುದು, ಸ್ವಾಗತ ಕಮಾನು, ಪಿಂಕ್ ಬಲೂನ್‌ಗಳ ಅಲಂಕಾರ ಸೇರಿ ಮಹಿಳೆಯರನ್ನು ಆಕರ್ಷಿಸಿಸುವ ರೀತಿಯಲ್ಲಿ ಮತಗಟ್ಟೆಗಳನ್ನು ಸಿದ್ಧಪಡಿಸಲಾಗಿದೆ ಎಂದು ಹೇಳಿದರು.

    ಪಿಂಕ್‌ಬೂತ್ ಮತಗಟ್ಟೆಗಳ ಜತೆಗೆ ವಿವಿಧ ಪರಿಕಲ್ಪನೆಯಡಿ ಮತಗಟ್ಟೆಗಳನ್ನೂ ಸ್ಥಾಪಿಸಲಾಗಿದೆ. ಅಂಗವಿಕಲರ, ತೃತೀಯ ಲಿಂಗಿ, ತಂತ್ರಜ್ಞಾನ, ಪರಿಸರ, ಸೈನಿಕ, ಕ್ರೀಡೆ, ಯುವ ಮತದಾರ, ಸಂಸ್ಕೃತಿ ಹಾಗೂ ಸೈನಿಕರ ಮತಗಟ್ಟೆಗಳಿವೆ. ಮುಂಜಾಗ್ರತವಾಗಿ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಆಂಬುಲೆನ್ಸ್ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ತುಷಾರ್ ಗಿರಿನಾಥ್ ವಿವರಿಸಿದರು.

    ಇದನ್ನೂ ಓದಿ: ಬಿಜೆಪಿ ಪರ ಲಿಂಗಾಯತ ಮುಖಂಡರಿಂದ ಮತಯಾಚನೆ; ಡಾ. ವಿಜಯ ಸಂಕೇಶ್ವರ, ಪ್ರಲ್ಹಾದ ಜೋಶಿ ಭಾಗಿ

    ಬಹುಮಾನ ವಿತರಣೆ

    ವಿಶೇಷ ಚೇತನರು, ವೈದ್ಯರು, ಆಶಾ ಕಾರ್ಯಕರ್ತೆಯರು, ಪೌರಕಾರ್ಮಿಕರು, ಸ್ವಸಹಾಯ ಸಂಘದ ಗುಂಪುಗಳು, ವಿದ್ಯಾರ್ಥಿಗಳು, ಕ್ರೀಡಾಪಟುಗಳು, ಬೀದಿಬದಿ ವ್ಯಾಪಾರಿಗಳು, ಅಂಗನವಾಡಿ ಕಾರ್ಯಕರ್ತೆಯರು ಸೇರಿ ಎನ್‌ಎಸ್‌ಎಸ್ ವಿದ್ಯಾರ್ಥಿಗಳು ಭಾಗವಹಿಸಿದ್ದರು. ವಿವಿಧ ರಂಗಗಳ ಮಹಿಳಾ ಪ್ರತಿನಿಧಿಗಳು ಮತದಾನದ ಪ್ರತಿಜ್ಞೆ ವಿಧಿ ಸ್ವೀಕರಿಸಿದರು.ವೋಟ್-ಎ-ಥಾನ್ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ನಗದು ಬಹುಮಾನ, ಸ್ಮರಣಿಕೆ ವಿತರಿಸಲಾಯಿತು. ಪೋಸ್ಟರ್, ರೀಲ್ಸ್, ಸ್ಲೋಗನ್‌ನಲ್ಲಿ ಪ್ರಥಮ ಸ್ಥಾನ ಪಡೆದವರಿಗೆ 5 ಸಾವಿರ ರೂ, ದ್ವಿತೀಯ 3 ಸಾವಿರ ರೂ. ನಗದು ಬಹುಮಾನ ನೀಡಲಾಯಿತು. ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷ ಸಂಗಪ್ಪ, ನೋಡಲ್ ಅಧಿಕಾರಿ ಸಿದ್ದೇಶ್ವರ್, ಬೂತ್‌ಮಟ್ಟದ ಅಧಿಕಾರಿಗಳು ಮತ್ತಿತರರಿದ್ದರು.

    ಸಿಲಿಕಾನ್ ಸಿಟಿಯಲ್ಲಿರುವ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಮತಗಟ್ಟೆಗಳಿಗೆ ಆಗಮಿಸಿ ಸಂವಿಧಾನ ನೀಡಿರುವಂಥ ಮತದಾನ ಅಧಿಕಾರ ಚಲಾಯಿಸುವ ಜತೆಗೆ ಇತರರಿಗೂ ಮತದಾನ ಮಾಡಲು ಪ್ರೇರೇಪಿಸಬೇಕು. ಇದರಿಂದ ಪ್ರಜಾಪ್ರಭುತ್ವ ಮೌಲ್ಯಗಳಿಗೆ ಇನ್ನಷ್ಟು ಬಲ ಬರಲಿದೆ. ಒಳ್ಳೆಯ ಹಾಗೂ ಭವಿಷ್ಯದಲ್ಲಿ ಉತ್ತಮ ಕೆಲಸ ಮಾಡುವ ಅಭ್ಯರ್ಥಿಗೆ ಮತ ಹಾಕಬೇಕು.

    | ಶಾಲಿನಿ ರಜನೀಶ್, ಐಎಎಸ್ ಅಧಿಕಾರಿ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts