More

    ರತಿ-ಮನ್ಮಥರ ನಗಿಸುವ ಸ್ಪರ್ಧೆ ಮಾ. 26ರಂದು; 64 ವರ್ಷ ನಕ್ಕಿಲ್ಲ, ಇದೀಗ 65 ಬಾರಿ ಸ್ಪರ್ಧೆ ಸಜ್ಜು

    ರಾಣೆಬೆನ್ನೂರ: ಏನ್ ಕಾಮಣ್ಣ ನಿನ್ನನ್ನಾ ಐಶ್ವರ್ಯ ಮದುವೆ ಮಾಡ್ಕೋಕೆ ಬರ‌್ತಾಳಂತೆ. ಕಳೆದ ವರ್ಷ ಬರಬೇಕಾದ ಪ್ರಧಾನಮಂತ್ರಿ ನರೇಂದ್ರ ಮೋದಿ ಈ ಸಾರಿ ಬರ‌್ತಾರ್ ಅವರಿಗೆ ಹೇಳಿ ನಿನ್ನ ಹೆಂಡತಿಗೆ ಬಂಗಾರದ ಸರಾ ಕೊಡಸ್ತೇನೆ ನೀನು ಗಂಟು ಮುಸುಡಿ ಮಾಡ್ಕಂತ ಯಾಕ ಕುಂತಿಪಾ…? ರತಿ ನೀನಗ್ ಆದ್ರ ತಿಳಿಬಾರದಾ ಅವನ ಜೊತೆ ಹ್ಯಾಂಗ್ ಬಾಳ್ವೆ ಮಾಡತಿ. ಅವನ ಜೋತು ಬಿದ್ದಿರುವ ಮೀಸೆ ನೋಡು ಎಳ್ಳಷ್ಟು ಚೆನ್ನಾಗಿಲ್ಲ…!
    ಹೀಗೆ ಹತ್ತು ಹಲವು ಹಾಸ್ಯದ ಮೂಲಕ ಜೀವಂತ ಕಾಮಣ್ಣರನ್ನು (ರತಿ-ಮನ್ಮಥರು) ನಗಿಸಲು ಹೋಗಿ ಪೇಚೆಗೆ ಸಿಲುಕಿಕೊಂಡವರಂತೆ ನಗೆಚಟಾಕಿಗಳು ಬಂದ ದಾರಿಗೆ ಸುಂಕವಿಲ್ಲ ಎಂದು ವಾಪಸ್ ಆಗುತ್ತಾರೆ.
    ಇದು ಪ್ರತಿ ವರ್ಷ ಹೋಳಿ ಹಬ್ಬದ ನಿಮಿತ್ತ ರಾಣೆಬೆನ್ನೂರ ನಗರದ ದೊಡ್ಡಪೇಟೆಯಲ್ಲಿ ಏರ್ಪಡಿಸುವ ರತಿ-ಮನ್ಮಥರನ್ನು ನಗಿಸುವ ಸ್ಪರ್ಧೆಯಲ್ಲಿ ಕಂಡು ಬರುವ ದೃಶ್ಯ.
    ಕಳೆದ 64 ವರ್ಷಗಳಿಂದ ನಡೆದುಕೊಂಡು ಬಂದ ಈ ಮನರಂಜನಾ ಸ್ಪರ್ಧೆ ಐತಿಹಾಸಿಕ ಮಹತ್ವ ಪಡೆದುಕೊಂಡಿದೆ. ಪ್ರತಿವರ್ಷ ರತಿ-ಮನ್ಮಥರನ್ನು ನಗಿಸಲು ದಾವಣಗೆರೆ, ಹುಬ್ಬಳ್ಳಿ, ಹಾವೇರಿ ಸೇರಿ ವಿವಿಧ ಜಿಲ್ಲೆ ಹಾಗೂ ರಾಜ್ಯದ ಮೂಲೆಮೂಲೆಗಳಿಂದ ಸಾವಿರಾರು ನಗೆಚಟಾಕಿಗಳು ಬಂದು ಪ್ರಯತ್ನಿಸುತ್ತಾರೆ. ಆದರೆ, ಈವರೆಗೂ ಯಾರೋಬ್ಬರು ರತಿ-ಮನ್ಮಥರನ್ನು ನಗಿಸಿದ ಇತಿಹಾಸವಿಲ್ಲ.
    ಇವರನ್ನು ನಗಿಸಿದವರಿಗೆ 1 ಲಕ್ಷ ರೂ.ಯಿಂದ 10 ಲಕ್ಷ ರೂ.ಗೂ ಅಧಿಕ ಮೌಲ್ಯದ ನಗದು ಬಹುಮಾನ ಇಡಲಾಗುತ್ತದೆ. ಆದರೆ, ದುಡ್ಡು ಸಿಗುವುದು ಎಂದು ನಗಿಸಲು ಹೋದವರು ಮಾತ್ರ ಪೇಚಿಗೆ ಸಿಲುಕುವುದು ಗ್ಯಾರಂಟಿ.
    ಬಲು ಭಟ್ಟರು ಇವರು…
    ರತಿ-ಮನ್ಮಥರನ್ನು ದೇವಸ್ಥಾನದ ಗದ್ದುಗೆಯ ಮೇಲೆ ಕುಂದರಿಸಿ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ನಂತರ ನಗೆ ಚಟಾಕಿಗಳು ರತಿ-ಮನ್ಮಥರ ಕುರಿತು ಹಾಸ್ಯ ಕಥೆ, ನಟನೆ, ಯುವಕರು ಯುವತಿಯ ಬಟ್ಟೆ ಧರಿಸಿ ಬರುವುದು. ಹಾಸ್ಯದ ಮೂಲಕ ಕಾಮನ ಸತ್ತಾಗ ಆತನ ಹೆಂಡತಿ ಅಳುವ ರೀತಿ. ವಿಶೇಷವಾಗಿ ಮಹಿಳೆಯರು ವಿವಿಧ ಬಗೆಯ ಸರ್ಕಸ್ ಮಾಡುತ್ತಾರೆ. ಆದರೂ ಈವರೆಗೂ ರತಿ-ಮನ್ಮಥರು ನಕ್ಕಿಲ್ಲ. ಹೀಗಾಗಿ ನಗೆಚಟಾಕಿಗಳು ಕೊನೆಗೆ ಬಲು ಭಂಟರು ಇವರು ಎನ್ನುವ ಬಿರುದು ನೀಡಿ ವಾಪಾಸಾಗುತ್ತಾರೆ. ಪ್ರಸಕ್ತ ವರ್ಷವೂ ಈ ಸ್ಪರ್ಧೆ ಏರ್ಪಡಿಸಲಾಗಿದ್ದು, ರತಿ-ಮನ್ಮಥರನ್ನು ಯಾರಾದರೂ ನಗಿಸುವರೇ ಎಂಬುದನ್ನು ಕಾಯ್ದು ನೋಡಬೇಕಿದೆ.
    ಈ ಬಾರಿ 65ನೇ ವರ್ಷದ ಸ್ಪರ್ಧೆ
    ಹೋಳಿ ಹುಣ್ಣಿಮೆ ನಿಮಿತ್ತ ಸ್ಥಳೀಯ ಶ್ರೀಶಕ್ತಿ ಯುವಕ ಮಂಡಳ, ರಾಮಲಿಂಗೇಶ್ವರ ಸಮಿತಿ ವತಿಯಿಂದ ಮಾ. 26ರಂದು ಸಂಜೆ 7.30ರಿಂದ ರಾತ್ರಿ 12 ಗಂಟೆಯವರೆಗೆ ನಗರದ ದೊಡ್ಡಪೇಟೆಯ ರಾಮಲಿಂಗೇಶ್ವರ ದೇವಸ್ಥಾನದ ಎದುರು ಜೀವಂತ ರತಿ-ಮನ್ಮಥರನ್ನು ನಗಿಸುವ 65ನೇ ವರ್ಷದ ಸ್ಪರ್ಧೆ ನಡೆಯಲಿದೆ. ಪ್ರತಿ ವರ್ಷದಂತೆ ಕಾಮನ ವೇಷವನ್ನು ಗದಿಗೆಪ್ಪ ರೊಡ್ಡನವರ ಹಾಗೂ ರತಿ ವೇಷದಲ್ಲಿ ಕುಮಾರ ಹಡಪದ ಕುಳಿತುಕೊಳ್ಳಲಿದ್ದಾರೆ. ಕಾಮಣ್ಣರನ್ನು ನಗಿಸಲು ಬರುವವರಿಗೆ ಪುರುಷ ಹಾಗೂ ಮಹಿಳೆಯರ ಎರಡು ವಿಭಾಗಗಳ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಸಮಿತಿಯ ಪ್ರಕಟಣೆ ತಿಳಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts