ಹಾನಗಲ್ಲ: ಪಟ್ಟಣದಲ್ಲಿ ಭಾನುವಾರ ಸಾರ್ವಜನಿಕರು ಸಂಭ್ರಮದಿಂದ ಹೋಳಿ ಹಬ್ಬ ಆಚರಿಸಿದರು.
ಯುವಕರು ಹಲಗೆ ಬಾರಿಸುತ್ತ, ವಿವಿಧ ವೇಷಗಳನ್ನು ಧರಿಸಿ ರಂಗಿನಾಟಕ್ಕೆ ರಂಗು ತಂದರು. ಪಟ್ಟಣದ 23 ಕಡೆಗಳಲ್ಲಿ ಪ್ರತಿಷ್ಠಾಪಿಸಿದ್ದ ಕಾಮ-ರತಿಯ ದಹನ ಮಾಡಲಾಯಿತು. ಬೆಳಗ್ಗೆ 10 ಗಂಟೆಗೆ ಚಾವಡಿ ಕ್ರಾಸ್ನಲ್ಲಿ ದೈವದ ಕಾಮದಹನ ಮಾಡಿದ ನಂತರ ತಾರಕೇಶ್ವರ ದೇವಸ್ಥಾನದ ಮೂಲಕ ವಿವಿಧೆಡೆಗಳಲ್ಲಿ ಕಾಮ ದಹನ ಕೈಗೊಂಡರು.
ತಹಸೀಲ್ದಾರ್ ಶನಿವಾರ ತಾಲೂಕು ಮಟ್ಟದ ಅಧಿಕಾರಿಗಳ ಸಭೆ ನಡೆಸಿ, ಕರೊನಾ ಮುಂಜಾಗ್ರತೆ ಕ್ರಮಗಳ ಬಗ್ಗೆ ಗಮನ ಸೆಳೆದಿದ್ದರು. ಪುರಸಭೆ ಪಟ್ಟಣದಲ್ಲಿ ಡಂಗುರ ಸಾರಿ ಎಚ್ಚರಿಕೆ ನೀಡಲಾಗಿತ್ತು. ಗುಂಪು ಗುಂಪಾಗಿ ಸೇರಿ ಬಣ್ಣ ಎರಚುವ ಮೂಲಕ ಅನಾರೋಗ್ಯದ ಪರಿಸ್ಥಿತಿ ತಂದುಕೊಳ್ಳದಂತೆ ಎಚ್ಚರಿಕೆ ನೀಡಲಾಗಿತ್ತು. ಹೀಗಾಗಿ ಹಾನಗಲ್ಲಿನಲ್ಲಿ ಓಕುಳಿ ನಡೆಯುವುದಿಲ್ಲ ಎಂಬ ಆತಂಕ ಎಲ್ಲರಲ್ಲಿ ಮನೆ ಮಾಡಿತ್ತು. ಆದರೆ, ಜನತೆ ಸಂಪ್ರದಾಯದಂತೆ ಶಾಂತಿಯುತವಾಗಿ ಕಾಮ ದಹನ ನೆರವೇರಿಸಿ ಓಕುಳಿಯಾಡಿ ಸಂಭ್ರಮಿಸಿದರು.
ಬಸ್ ಸಂಚಾರದಲ್ಲಿ ಯಾವುದೇ ವ್ಯತ್ಯಯವಾಗಲಿಲ್ಲ. ಅಂಗಡಿ-ಮುಂಗಟ್ಟುಗಳು ಮುಚ್ಚಿದ್ದವು. ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಪುರಸಭೆ ವತಿಯಿಂದ ಕರೊನಾ ಜಾಗೃತಿಯ ಬೂತ್ ಹಾಕಿ ಮಾಹಿತಿ ನೀಡಲಾಯಿತು. ಆರೋಗ್ಯಾಧಿಕಾರಿ ಸಮೇತ ಸಿಬ್ಬಂದಿ ಮುಂಜಾಗ್ರತಾ ಕ್ರಮ ಕೈಗೊಂಡಿದ್ದರು. ಹೋಳಿಯಲ್ಲಿ ಪಾಲ್ಗೊಂಡ ಸಾರ್ವಜನಿಕರಿಗೆ ಕರಪತ್ರಗಳನ್ನು ನೀಡಲಾಯಿತು. ನಂತರ ಮನೆ-ಮನೆಗೆ ಜಾಗೃತಿ ಸಂದೇಶ ಸಾರುವ ಕಾರ್ಯವೂ ನಡೆಯಿತು.