More

    ಗುರುಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಕಾರ, ರಸ್ತೆ ತಿರುವಿನಲ್ಲಿ ಅಪಾಯಕಾರಿ ಹೊಂಡ

    ಧನಂಜಯ ಗುರುಪುರ

    ಗುರುಪುರ ಗ್ರಾಮ ಪಂಚಾಯಿತಿ ಕಚೇರಿಗೆ ಹೊಂದಿಕೊಂಡಿರುವ ರಾಷ್ಟ್ರೀಯ ಹೆದ್ದಾರಿ(169) ತಿರುವಿನಲ್ಲಿ ಮೋರಿ ಅಳವಡಿಕೆ ಮತ್ತು ರಸ್ತೆ ವಿಸ್ತರಣೆ ಕಾಮಗಾರಿ ಸಂದರ್ಭ ಕಳಪೆ ಡಾಂಬರು ಹಾಕಿರುವುದರಿಂದ ತಿರುವಿನಲ್ಲಿ ಭಾರಿ ಪ್ರಮಾಣದ ಹೊಂಡಗಳು ಸೃಷ್ಟಿಯಾಗಿದ್ದು, ವಾಹನ ಸವಾರರು ರಸ್ತೆಯಲ್ಲೇ ಏರಿಳಿದು ಸಂಚರಿಸುವ ದೃಶ್ಯಗಳು ಸಾಮಾನ್ಯವಾಗಿವೆ.

    ಗುರುಪುರ ಕೈಕಂಬ ಕಾನ್ವೆಂಟ್‌ಗೆ ಹತ್ತಿರದಲ್ಲಿರುವ ಈ ತಿರುವಿನಲ್ಲಿ ಒಂದೇ ಕಡೆ ಹಲವು ಹೊಂಡಗಳು ಸೃಷ್ಟಿಯಾಗಿವೆ. ಮುಂದುವರಿದಿರುವ ಮಳೆ ನೀರಿಗೆ ಹೊಂಡಗಳು ಪದೇಪದೆ ‘ಅದೃಶ್ಯ’ವಾಗುವುದರಿಂದ ಸಹಜವಾಗಿ ದ್ವಿಚಕ್ರ ವಾಹನಗಳು ಅಪಘಾತಕ್ಕೀಡಾಗುತ್ತಿವೆ. ಕಳೆದ ವಾರ ಇಲ್ಲಿ ಲಾರಿಯೊಂದು ಮಗುಚಿ ಬಿದ್ದಿತ್ತು.

    ಕೆಲವು ಸಮಯದ ಹಿಂದೆ ಹೆದ್ದಾರಿಯ ಈ ತಿರುವಿನಲ್ಲಿ ಬೃಹತ್ ಮೋರಿ ಅಳವಡಿಸಲಾಗಿತ್ತು. ಕಾಮಗಾರಿ ವೇಳೆ ಹೆದ್ದಾರಿ ವಿಸ್ತರಿಸಲಾಗಿತ್ತು. ನಿರಂತರ ಸುರಿಯುತ್ತಿರುವ ಮಳೆಗೆ ಅಲ್ಲಲ್ಲಿ ಡಾಂಬರು ಕಿತ್ತು ಹೋಗಿ, ಜಲ್ಲಿ ಚೆಲ್ಲಾಪಿಲ್ಲಿಯಾಗಿವೆ. ಪರಿಣಾಮ ರಸ್ತೆಯ ಒಂದೇ ಕಡೆ ಹಲವು ಅಪಾಯಕಾರಿ ಹೊಂಡಗಳು ಸೃಷ್ಟಿಯಾಗಿವೆ.

    ಈಗಾಗಲೇ ಕೆಲವು ದ್ವಿಚಕ್ರ ವಾಹನಗಳು ಪಲ್ಟಿ ಹೊಡೆದು, ಕೆಲವರು ಸಣ್ಣಪುಟ್ಟ ಗಾಯ ಮಾಡಿಕೊಂಡಿದ್ದಾರೆ. ಇಲ್ಲಿ ಹೊಂಡ ತಪ್ಪಿಸಲು ವಾಹನ ಸವಾರರು ಹರಸಾಹಸಡುವಂತಿದೆ. ಹತ್ತಿರದಲ್ಲಿ ಶಾಲೆ(ಕಾನ್ವೆಂಟ್), ಪಂಚಾಯಿತಿ ಕಚೇರಿ ಇದೆ. ಹೆದ್ದಾರಿ ತಿರುವಿನಲ್ಲಿ ಶೀಘ್ರ ದುರಸ್ತಿ ಕಾರ್ಯ ನಡೆಯಬೇಕು.

    ಹನೀಫ್ ತಾರಿಕರಿಯ
    ಗುರುಪುರ ಪಂಚಾಯಿತಿ ಮಾಜಿ ಸದಸ್ಯ

    ಕಾನ್ವೆಂಟ್‌ಗೆ ಹತ್ತಿರದ ಹೆದ್ದಾರಿ ತಿರುವಿನಲ್ಲಿ ಸೃಷ್ಟಿಯಾಗಿರುವ ಅಪಾಯಕಾರಿ ಹೊಂಡಗಳ ಬಗ್ಗೆ ಸಾರ್ವಜನಿಕರು ಈಗಾಗಲೇ ದೂರು ನೀಡಿದ್ದಾರೆ. ಮೊನ್ನೆ ಖುದ್ದಾಗಿ ಸ್ಥಳ ಪರಿಶೀಲನೆ ನಡೆಸಿದ್ದೇನೆ. ಮಳೆಯಿಂದಾಗಿ ದುರಸ್ತಿ ಸಾಧ್ಯವಾಗಿಲ್ಲ. ಕೆಲವೇ ದಿನದಲ್ಲಿ ದುರಸ್ತಿ ಕಾರ್ಯ ನಡೆಸಲಾಗುವುದು.

    ಮುರುಗೇಶ್
    ರಾಷ್ಟ್ರೀಯ ಹೆದ್ದಾರಿ ಮಂಗಳೂರು ವಿಭಾಗ ಸಹಾಯಕ ಇಂಜಿನಿಯರ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts