ಹೊಳಲ್ಕೆರೆ: ಹನುಮಂತ ದೇವರ ಕಣಿವೆ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಶುಕ್ರವಾರ ಬೆಳಗ್ಗೆ ಉಪಹಾರ ಸೇವಿಸಿದ 28ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥಗೊಂಡಿದ್ದಾರೆ.
ವಿಷಪೂರಿತ ಆಹಾರ ಸೇವನೆಯಿಂದಾಗಿ ವಾಂತಿ-ಭೇದಿ, ಜ್ವರದಿಂದ ವಿದ್ಯಾರ್ಥಿಗಳು ಬಳಲಿದ್ದು, ಕೂಡಲೇ ಶಾಲಾ ಶಿಕ್ಷಕರು ಹಾಗೂ ಸಿಬ್ಬಂದಿ ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದು, ಮಕ್ಕಳು ಚೇತರಿಸಿಕೊಳ್ಳುತ್ತಿದ್ದಾರೆ. ಶುಕ್ರವಾರ ಬೆಳಗ್ಗೆ ಉಪಹಾರ ಸೇವನೆ ಬಳಿಕ ಶುದ್ಧೀಕರಿಸದ ನೀರನ್ನು ಕುಡಿದ ಪರಿಣಾಮ ವಿದ್ಯಾರ್ಥಿಗಳು ಹೀಗೆ ಅಸ್ವಸ್ಥಗೊಂಡಿರಬಹುದು ಎನ್ನಲಾಗಿದೆ.
ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಆಸ್ಪತ್ರೆಗೆ ಭೇಟಿ ನೀಡಿ, ಚಿಕಿತ್ಸೆ ಪಡೆಯುತ್ತಿದ್ದ ಮಕ್ಕಳ ಯೋಗಕ್ಷೇಮ ವಿಚಾರಿಸಿದರು. ವಸತಿ ನಿಲಯಕ್ಕೆ ಪ್ರತ್ಯೇಕ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.
ಕಳೆದ ಕೆಲ ದಿನಗಳ ಹಿಂದಷ್ಟೇ ಹೊಳಲ್ಕೆರೆ ಪಟ್ಟಣದ ಮೆಟ್ರಿಕ್ ಪೂರ್ವ ವಸತಿ ನಿಲಯದಲ್ಲಿನ 13 ಮಕ್ಕಳು ರಾತ್ರಿ ಊಟ ಸೇವಿಸಿದ ಬಳಿಕ ಅಸ್ವಸ್ಥರಾಗಿ ಆಸ್ಪತ್ರೆ ಸೇರಿದ್ದರು. ಇದರ ಬೆನ್ನಲ್ಲೇ ಈಗ ಮುರಾರ್ಜಿ ವಸತಿ ಶಾಲೆ ಘಟನೆ ವಿದ್ಯಾರ್ಥಿ-ಪಾಲಕರಲ್ಲಿ ಆತಂಕ ಉಂಟು ಮಾಡಿದೆ.