More

    38 ಲಕ್ಷ ರೂ. ಉಳಿತಾಯ ಬಜೆಟ್

    ಹೊಳಲ್ಕೆರೆ: 2020-21ನೇ ಸಾಲಿನ ಪಟ್ಟಣ ಪಂಚಾಯಿತಿ ಬಜೆಟ್ ಶುಕ್ರವಾರ ಮಂಡನೆ ಆಗಿದ್ದು, ಮೂಲ ಸೌಲಭ್ಯ ಕಲ್ಪಿಸಲು ಹೆಚ್ಚು ಆದ್ಯತೆ ನೀಡಲಾಗಿದೆ.

    ಪ್ರಾರಂಭಿಕ ಶುಲ್ಕ 10.37 ಕೋಟಿ, ನಿರೀಕ್ಷಿತ ಆದಾಯ 10.97 ಕೋಟಿ, ನಿರೀಕ್ಷಿತ ಖರ್ಚು 20.96 ಕೋಟಿಯಾಗಿದ್ದು, 38 ಲಕ್ಷ ರೂ. ಉಳಿತಾಯವಾಗಿದೆ.

    ಬಜೆಟ್ ಮಂಡಿಸಿದ ಆಡಳಿತಾಧಿಕಾರಿ ಆಗಿರುವ ತಹಸೀಲ್ದಾರ್ ಕೆ.ನಾಗರಾಜ್ ಮಾತನಾಡಿ, ಮುಂದಿನ ಆರ್ಥಿಕ ವರ್ಷದಲ್ಲಿ ಪಟ್ಟಣದ ಜನತೆಗೆ ಸಮರ್ಪಕ ಕುಡಿವ ನೀರು ಸರಬರಾಜು, ನೈರ್ಮಲ್ಯ, ಬೀದಿದೀಪಗಳ ನಿರ್ವಹಣೆ, ಸಾರ್ವಜನಿಕ ಕೆಲಸಗಳಿಗೆ ಕಾಲಮಿತಿ ನಿಗದಿ, ತ್ವರಿತ ಕಡತ ವಿಲೇವಾರಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

    ಪಂಚಾಯಿತಿ ಆದಾಯ ಮೂಲಗಳಾದ ಆಸ್ತಿ ತೆರಿಗೆ, ನೀರು ಸರಬರಾಜು ಶುಲ್ಕ, ಉದ್ದಿಮೆ ಪರವಾನಗಿ, ಮಳಿಗೆಗಳ ಬಾಡಿಗೆ ಹಾಗೂ ಇತರೆ ಮೂಲಗಳಿಂದ ನಿರೀಕ್ಷಿಸಲಾದ ಆದಾಯದ ಮೇಲೆ ಈ ಸಾಲಿನ ಆಯ-ವ್ಯಯ ತಯಾರಿಸಿದ್ದು, ಸರ್ಕಾರದ ವಿವಿಧ ಯೋಜನೆಗಳಿಂದ ಬರುವ ಅನುದಾನಕ್ಕೆ ಅನುಗುಣವಾಗಿ ಹೊಸ ಯೋಜನೆ ರೂಪಿಸಲಾಗಿದೆ ಎಂದು ತಿಳಿಸಿದರು.

    ಪಪಂ ಮುಖ್ಯಾಧಿಕಾರಿ ಎ.ವಾಸೀಂ ಮಾತನಾಡಿ, 2020-21ನೇ ಸಾಲಿನ ಆಸ್ತಿ ತೆರಿಗೆ 70 ಲಕ್ಷ, ನೀರಿನ ತೆರಿಗೆ 40 ಲಕ್ಷ ಮತ್ತು ಮಳಿಗೆ ಬಾಡಿಗೆ 30 ಲಕ್ಷ ರೂ. ಬರುವ ನಿರೀಕ್ಷೆ ಇದೆ. ಈ ತೆರಿಗೆ ಹಣವನ್ನು ಸಾರ್ವಜನಿಕರು ಸಕಾಲಕ್ಕೆ ಕಟ್ಟಿದರೆ ಪಟ್ಟಣದ ಅಭಿವೃದ್ಧಿಗೆ ಸಹಕಾರಿಯಾಗುತ್ತದೆ ಎಂದು ಹೇಳಿದರು.

    ಪಟ್ಟಣ ವ್ಯಾಪ್ತಿ ಸಾರ್ವಜನಿಕರ ಕುಡಿವ ನೀರಿನ ಸಮಸ್ಯೆ ಪರಿಹರಿಸಲು 1 ಕೋಟಿ ರೂ. ವೆಚ್ಚದ ಓವರ್‌ಹೆಡ್ ಟ್ಯಾಂಕ್ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದ್ದು, ಶೀಘ್ರವೇ ಶುದ್ಧ ನೀರು ಲಭ್ಯವಾಗಲಿದೆ ಎಂದರು.

    2020-21ನೇ ಸಾಲಿಗೆ ರಾಜ್ಯ ಹಣಕಾಸು ಯೋಜನೆಯಡಿ ಪಂಚಾಯಿತಿಗೆ 1 ಕೋಟಿ ರೂ. ಅನುದಾನ ಬರುವ ನಿರೀಕ್ಷೆ ಇದೆ. ಇದರಲ್ಲಿ ಎಸ್ಸಿ, ಎಸ್ಟಿ ಜನರ ಕಲ್ಯಾಣಕ್ಕೆ 30 ಲಕ್ಷ, ಬಡ ಕುಟುಂಬಗಳ ಉನ್ನತೀಕರಣಕ್ಕೆ 15 ಲಕ್ಷ, ಅಂಗವಿಕಲರ ಅಭಿವೃದ್ಧಿಗೆ 10 ಲಕ್ಷ ವಿನಿಯೋಗಿಸಿ ಉಳಿದ ಹಣದಲ್ಲಿ ಪಟ್ಟಣ ವ್ಯಾಪ್ತಿಯ ವಿವಿಧ ಬಡಾವಣೆಗಳಲ್ಲಿ ಸಿಸಿ ರಸ್ತೆ, ಚರಂಡಿ, ಪಾರ್ಕ್, ಉದ್ಯಾನವನಗಳ ಅಭಿವೃದ್ಧಿಗೆ ಬಳಸಲಾಗುವುದು ಎಂದು ತಿಳಿಸಿದರು.

    2020-21ನೇ ಸಾಲಿಗೆ ಪಟ್ಟಣದ ಅಭಿವೃದ್ಧಿಗೆ 14ನೇ ಹಣಕಾಸು ಯೋಜನೆಯಡಿ 1.20 ಕೋಟಿ, ಎಸ್‌ಎಫ್‌ಸಿ ಕುಡಿವ ನೀರಿಗೆ 1 ಕೋಟಿ ರೂ. ನಿಗದಿಪಡಿಸಿದ್ದು, ಶೀಘ್ರವೇ ಕ್ರಿಯಾಯೋಜನೆ ತಯಾರಿಸಿ ಘನತ್ಯಾಜ್ಯ ನಿರ್ವಹಣೆ ಮತ್ತು ಪಟ್ಟಣದ ಅಭಿವೃದ್ಧಿ, ಕುಡಿವ ನೀರಿನ ವ್ಯವಸ್ಥೆಗೆ ಕ್ರಮ ಕೈಗೊಳ್ಳಲಾಗುವುದು ಎಂದರು.

    ಗಣಪತಿ ದೇವಸ್ಥಾನದ ಹಿಂಭಾಗದಿಂದ ಪಿಎಲ್‌ಡಿ ಬ್ಯಾಂಕ್ ವರೆಗಿನ ರಸ್ತೆಯ ಎರಡೂ ಬದಿ ಚರಂಡಿ, ರಸ್ತೆ ನಿರ್ಮಾಣಕ್ಕೆ 2.50 ಕೋಟಿ ರೂ. ವೆಚ್ಚಿಸಲಾಗುತ್ತಿದೆ. ಗಣಿ ಇಲಾಖೆಯ 1 ಕೋಟಿ ರೂ. ಅನುದಾನದಲ್ಲಿ ಕಲ್ಯಾಣಿ ಪುನಶ್ಚೇತನ, ಹೊಸದುರ್ಗ ಮಾರ್ಗದ ಷಟ್ಪಥ ರಸ್ತೆ, ಚರಂಡಿ ನಿರ್ಮಾಣದ ಜತೆಗೆ ಗಣಪತಿ ದೇವಸ್ಥಾನ ರಸ್ತೆಯಲ್ಲಿ ಏಕಮುಖ ಸಂಚಾರ ವ್ಯವಸ್ಥೆಗೆ ಆದ್ಯತೆ ನೀಡಲಾಗಿದೆ ಎಂದು ಶಾಸಕ ಎಂ.ಚಂದ್ರಪ್ಪ ಹೇಳಿದರು.

    ಶಾಸಕ ಎಂ.ಚಂದ್ರಪ್ಪ ಅವರ ವಿಶೇಷ ಕಾಳಜಿಯಿಂದ ಪಟ್ಟಣ ಪಂಚಾಯಿತಿ ನೂತನ ಕಟ್ಟಡಕ್ಕೆ 5 ಕೋಟಿ ರೂ. ಬಿಡುಗಡೆಯಾಗಿದ್ದು, ಅಂದಾಜು 10 ಕೋಟಿ ರೂ. ವೆಚ್ಚದಲ್ಲಿ ಕಟ್ಟಡ ನಿರ್ಮಾಣ ಮಾಡಲಾಗುತ್ತದೆ ಎಂದು ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts