ಹೊಳಲ್ಕೆರೆ: ನಾಟಕ ವೀಕ್ಷಣೆಯಿಂದ ನಮ್ಮಲ್ಲಿರುವ ನಕಾರಾತ್ಮಕ ಗುಣಗಳು ದೂರವಾಗುತ್ತವೆ ಎಂದು ಶ್ರೀ ಶಿವಮೂರ್ತಿ ಮುರುಘಾ ಶರಣರು ಹೇಳಿದರು.
ಅನಾಥಸೇವಾಶ್ರಮದ ಸಂಸ್ಥಾಪಕ ಶ್ರೀ ರಾಘವೇಂದ್ರ ಸ್ವಾಮೀಜಿ ಹಾಗೂ ಸೂರುದಾಸ್‌ಜೀ ಪುಣ್ಯಾರಾಧನೆ ಅಂಗವಾಗಿ ಮಲ್ಲಾಡಿಹಳ್ಳಿಯಲ್ಲಿ ಬುಧವಾರ ರಾತ್ರಿ ಏರ್ಪಡಿಸಿದ್ದ ತಿರುಕನೂರಿನಲ್ಲಿ ರಂಗದಾಸೋಹ ನಾಟಕೋತ್ಸವದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಮನುಷ್ಯನಲ್ಲಿನ ಮೃಗೀಯ ಭಾವನೆಗಳನ್ನು ಹೋಗಲಾಡಿಸಿ ಸಕಾರಾತ್ಮಕ ಭಾವನೆ, ಒಳ್ಳೆ ಚಿಂತನೆ ಬೆಳೆಸಲು ನಾಟಕಗಳು ಸಹಕಾರಿಯಾಗಿವೆ ಎಂದರು.
ಸಮಾಜ ಪರಿವರ್ತನೆಯಲ್ಲಿ ಪೂಜ್ಯ ರಾಘವೇಂದ್ರ ಸ್ವಾಮೀಜಿಯವರ ಕೊಡುಗೆ ಅಪಾರ. ವಿದ್ಯಾರ್ಥಿ ದೆಸೆಯಲ್ಲಿಯೇ ಸಮಾಜಮುಖಿ ಚಿಂತನೆ ನಡೆಸುತ್ತಿದ್ದ ಅವರು ನುಡಿದಂತೆ ನಡೆದುಕೊಂಡಿದ್ದಾರೆ. ಇವರ ಆದರ್ಶ ಯುವ ಪೀಳಿಗೆಗೆ ಮಾದರಿಯಾಗಬೇಕು ಎಂದು ತಿಳಿಸಿದರು.
ತಿರುಕಶ್ರೀ ಪ್ರಶಸ್ತಿ ಸ್ವೀಕರಿಸಿದ ಶ್ರೀನಿವಾಸ ಜಿ.ಕಪ್ಪಣ್ಣ ಮಾತನಾಡಿ, ನಾನೇ ತಿರುಕ, ನನಗೆ ತಿರುಕಶ್ರೀ ಪ್ರಶಸ್ತಿ ನೀಡಿರುವುದು ಅತೀವ ಸಂತೋಷ ತಂದಿದೆ. ಇದು ನನ್ನ ಸಮಾಜಮುಖಿ ಕಾರ್ಯಗಳಿಗೆ ಸಂದ ಫಲ ಎಂದು ಹೇಳಿದರು.
ಕಾರ್ಯಕ್ರಮವನ್ನು ಇತಿಹಾಸ ಸಂಶೋಧಕ ಬಿ.ರಾಜಶೇಖರಪ್ಪ ಉದ್ಘಾಟಿಸಿದರು. ಪ್ರೊ.ರಾಧಾಕೃಷ್ಣ ಅಧ್ಯಕ್ಷತೆ ವಹಿಸಿದ್ದರು. ಎಂಎಲ್ಸಿ ಎಂ.ಡಿ.ಲಕ್ಷ್ಮೀನಾರಾಯಣ, ಲಲಿತಾ ಶ್ರೀನಿವಾಸ್, ಎಚ್.ಎಸ್.ಸಿದ್ರಾಮಸ್ವಾಮಿ ಉಪಸ್ಥಿತರಿದ್ದರು.
ಜಮುರಾ ಸುತ್ತಾಟ ತಂಡದಿಂದ ದ.ರಾ.ಬೇಂದ್ರೆ ರಚಿತ, ಶರಣು ಪಟಾರ್ ನಿರ್ದೇಶನದ ಸಾಯುವ ಆಟ ನಾಟಕ ಪ್ರದರ್ಶನಗೊಂಡಿತು.
ಪ್ರಾಚಾರ್ಯ ಜಿ.ಎಸ್.ಶಿವಕುಮಾರ್ ಸ್ವಾಗತಿಸಿದರು. ಯೋಗ ತರಬೇತುದಾರ ಸಂತೋಷ್ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪನ್ಯಾಸಕ ಎಚ್.ಗಿರೀಶ್ ನಿರೂಪಿಸಿದರು. ಶಿಕ್ಷಕ ಜಿ.ಟಿ.ಶಂಕರಮೂರ್ತಿ ವಂದಿಸಿದರು.
ಸಂಸ್ಕೃತಿಯ ರಾಯಭಾರಿ: ಕಥೆಗೆ ಒಂದು ದೃಶ್ಯರೂಪ ಕೊಡುವುದೇ ನಾಟಕ. ಮನಸ್ಸನ್ನು ನಿಗ್ರಹಗೊಳಿಸುವ ಕೆಲಸ ನಾಟಕದಿಂದ ಸಾಧ್ಯವಾಗುತ್ತದೆ. ಇದು ನೋಡುಗನ ಮನಸ್ಥಿತಿ ಬದಲಿಸಿ ಹೊಸ ಚಿಂತನೆಗೆ ದಾರಿ ಮಾಡಿಕೊಡುತ್ತದೆ. ನಾಟಕಗಳು ನಮ್ಮ ಸಂಸ್ಕೃತಿಯ ರಾಯಭಾರಿಗಳು. ಇವುಗಳನ್ನು ಹೆಚ್ಚೆಚ್ಚು ವೀಕ್ಷಿಸುವುದರಿಂದ ಸಂಸ್ಕೃತಿಯ ಗುಣಮಟ್ಟ ಹೆಚ್ಚುತ್ತದೆ ಎಂದು ಇತಿಹಾಸ ಸಂಶೋಧಕ ಬಿ.ರಾಜಶೇಖರಪ್ಪ ತಿಳಿಸಿದರು.