ಹೊಳಲ್ಕೆರೆ: ಕೋವಿಡ್-19 ಹಿನ್ನೆಲೆಯಲ್ಲಿ ದೇಶವನ್ನು ಲಾಕ್‌ಡೌನ್ ಮಾಡಿದ್ದರಿಂದ ದೇಶದ 130 ಕೋಟಿ ಜನರಿಗೆ ಒಂದಿಲ್ಲೊಂದು ನೆರವು ನೀಡಲು ಕೇಂದ್ರ ಸರ್ಕಾರ 20 ಲಕ್ಷ ಕೋಟಿ ರೂ. ಅನುದಾನ ನೀಡಿದೆ ಎಂದು ಶಾಸಕ ಎಂ.ಚಂದ್ರಪ್ಪ ಹೇಳಿದರು.
ಪಟ್ಟಣದಲ್ಲಿ ಶುಕ್ರವಾರ ತಾಲೂಕು ಬಿಜೆಪಿಯಿಂದ ಆಯೋಜಿಸಿದ್ದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು.
ಭಾರತ ವಿಶ್ವದ ನಾಯಕತ್ವ ವಹಿಸಿಕೊಳ್ಳುವಷ್ಟು ಬಲಿಷ್ಠವಾಗುತ್ತಿದೆ. ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಸದಸ್ಯ ದೇಶವಾಗಲು ಭಾರತ ಪರವಾಗಿ ಇತರೆ ರಾಷ್ಟ್ರಗಳು ಮತ ಹಾಕಿವೆ ಎಂದರು.
ಪ್ರಧಾನಿ ಮೋದಿ ದೂರದೃಷ್ಟಿ ಉಳ್ಳವರು. ಪಕ್ಷದ ಕಾರ್ಯಕರ್ತರಾಗಿ ದೇಶದ ಚುಕ್ಕಾಣಿ ಹಿಡಿದಿರುವ ಮೋದಿ ಅವರ ಕಾರ್ಯವನ್ನು ಪ್ರತಿಯೊಬ್ಬ ಕಾರ್ಯಕರ್ತರು ಅರಿತುಕೊಳ್ಳಬೇಕು. ಈಚೆಗೆ ನಡೆದ ಪರಿಷತ್ ಚುನಾವಣೆಯಲ್ಲಿ ಪಕ್ಷಕ್ಕೆ ದುಡಿದ ಕಾರ್ಯಕರ್ತರನ್ನು ಆಯ್ಕೆ ಮಾಡಿ ಸರ್ವರಿಗೂ ಅಧಿಕಾರ ಎನ್ನುವ ಸಂದೇಶವನ್ನು ಪಕ್ಷ ನೀಡಿದೆ ಎಂದರು.
ಮಾಜಿ ಪ್ರಧಾನಿ ದೇವೇಗೌಡ, ಮಾಜಿ ಸಚಿವ ಮಲ್ಲಿಕಾರ್ಜುನ ಖರ್ಗೆ ಇಬ್ಬರು ರಾಜಕೀಯ ನಿವೃತ್ತಿ ಹೊಂದಬೇಕು. ಬಿಜೆಪಿಯಲ್ಲಿ ಸಾಮಾನ್ಯ ಕಾರ್ಯಕರ್ತ ಅಶೋಕ ಗಸ್ತಿ, ಈರಣ್ಣ ಕಡಾಡಿ ಅವರನ್ನು ಆಯ್ಕೆ ಮಾಡಲಾಗಿದೆ ಎಂದರು.
ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಇಲ್ಲಿಯ ತನಕ 1,380 ಅನುದಾನವನ್ನು ಕ್ಷೇತ್ರಕ್ಕೆ ತರಲಾಗಿದೆ. ಪ್ರತಿ ಹಳ್ಳಿಗೂ ಅನುದಾನ ನೀಡಿ ಅಭಿವೃದ್ಧಿಗೆ ಒತ್ತು ನೀಡಿದೆ. ಕೆರೆಗಳ ಅಭಿವೃದ್ಧಿ, ರಸ್ತೆ, ಸಮುದಾಯ ಭವನ, ಶಾಲೆ ಕಾಲೇಜು, ವಿದ್ಯುತ್ ಕೇಂದ್ರಗಳು, ನೀರಾವರಿ ಯೋಜನೆಗಳ ಸೇರಿ ಕ್ಷೇತ್ರದಲ್ಲಿ ಕೈಗೊಂಡ ಕೆಲಸಗಳ ಬಗ್ಗೆ ಶ್ವೇತಪತ್ರ ಬಿಡುಗಡೆ ಮಾಡುವೆ ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ಮುರಲೀಧರ ಮಾತನಾಡಿ, ಬೂತ್ ಮಟ್ಟದಿಂದ ಪಕ್ಷ ಸಂಘಟಿಸುವ ಹೊಣೆಗಾರಿಕೆ ಪ್ರತಿ ಕಾರ್ಯಕರ್ತರ ಮೇಲಿದೆ. ಕೋವಿಡ್ ನಿಯಂತ್ರಣಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಲವು ಕ್ರಮ ಕೈಗೊಂಡಿವೆ ಎಂದರು.
ವಲಯ ಪ್ರಭಾರ ಜಿ.ಎಂ.ಸುರೇಶ್ ಮಾತನಾಡಿದರು. ತಾಲೂಕು ಅಧ್ಯಕ್ಷ ಕಾಶಿ ಸಿದ್ದೇಶ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕಾರ್ಯದರ್ಶಿ ಸಿದ್ದೇಶ್, ಜಿಲ್ಲಾ ವಕ್ತಾರ ದಗ್ಗೆ ಶಿವಪ್ರಕಾಶ್, ರಾಮಗಿರಿ ರಾಮಣ್ಣ, ಕೆ.ಸಿ.ರಮೇಶ್, ಜಿಪಂ ಸದಸ್ಯೆ ಸುಮಾ, ಪಪಂ ಸದಸ್ಯರಾದ ಪಿ.ಆರ್.ಮಲ್ಲಿಕಾರ್ಜುನ್, ವಿಜಯ್, ಅಶೋಕ್, ಎಚ್.ಆರ್.ನಾಗರತ್ನ ವೇದಮೂರ್ತಿ, ಸುಧಾ ಬಸವರಾಜ, ಜಿಪಂ ಮಾಜಿ ಅಧ್ಯಕ್ಷರಾದ ಎಲ್.ಬಿ.ರಾಜಶೇಖರ್, ಪಿ.ಆರ್.ಶಿವಕುಮಾರ್ ಇದ್ದರು.