More

    ಹಾಕಿ ಪ್ರಶಸ್ತಿ ರೇಸ್‌ನಲ್ಲಿ ಒಲಿಂಪಿಕ್ಸ್ ಚಿನ್ನ ಗೆದ್ದವರಿಗಿಂತ ಕಂಚು ವಿಜೇತರದ್ದೇ ಪ್ರಾಬಲ್ಯ!

    ಲೌಸನ್ನೆ: ಟೋಕಿಯೊ ಒಲಿಂಪಿಕ್ಸ್‌ನಲ್ಲಿ ನವ ಇತಿಹಾಸ ನಿರ್ಮಿಸಿದ ಭಾರತದ ಪುರುಷರ ಮತ್ತು ಮಹಿಳಾ ಹಾಕಿ ತಂಡಗಳು ಅಂತಾರಾಷ್ಟ್ರೀಯ ಹಾಕಿ ಒಕ್ಕೂಟದ (ಎಫ್​ಐಎಚ್) ವಾರ್ಷಿಕ ಪ್ರಶಸ್ತಿ ಪಟ್ಟಿಯಲ್ಲಿ ಪ್ರಾಬಲ್ಯ ಮೆರೆದು ಕ್ಲೀನ್‌ಸ್ವೀಪ್ ಸಾಧಿಸಿವೆ. ಎಲ್ಲ 8 ವಿಭಾಗದ ಪ್ರಶಸ್ತಿ ರೇಸ್‌ನಲ್ಲೂ ಭಾರತ ತಂಡದ ಸದಸ್ಯರು ಗರಿಷ್ಠ ಮತಗಳನ್ನು ಪಡೆದು ಗೌರವ ಒಲಿಸಿಕೊಂಡಿರುವುದು ವಿಶೇಷವಾಗಿದೆ.

    ಹರ್ಮಾನ್‌ಪ್ರೀತ್ ಸಿಂಗ್ ಮತ್ತು ಗುರ್ಜಿತ್ ಕೌರ್ ಕ್ರಮವಾಗಿ ವರ್ಷದ ಆಟಗಾರ ಮತ್ತು ವರ್ಷದ ಆಟಗಾರ್ತಿ ಪ್ರಶಸ್ತಿ ಬಾಚಿಕೊಂಡಿದ್ದಾರೆ. ಪಿಆರ್ ಶ್ರೀಜೇಶ್ ಮತ್ತು ಸವಿತಾ ಪೂನಿಯಾ ಕ್ರಮವಾಗಿ ಪುರುಷರ ಮತ್ತು ಮಹಿಳಾ ವಿಭಾಗದಲ್ಲಿ ವರ್ಷದ ಅತ್ಯುತ್ತಮ ಗೋಲು ಕೀಪರ್ ಪ್ರಶಸ್ತಿ ಜಯಿಸಿದ್ದಾರೆ. ಯುವ ಆಟಗಾರರಾದ ವಿವೇಕ್ ಸಾಗರ್ ಪ್ರಸಾದ್ ಮತ್ತು ಶರ್ಮಿಳಾ ದೇವಿ ಕ್ರಮವಾಗಿ ಪುರುಷರ ಮತ್ತು ಮಹಿಳಾ ವಿಭಾಗದಲ್ಲಿ ರೈಸಿಂಗ್ ಸ್ಟಾರ್ ಪ್ರಶಸ್ತಿ ಪಡೆದಿದ್ದಾರೆ. ಟೋಕಿಯೊ ಒಲಿಂಪಿಕ್ಸ್ ಕಂಚು ವಿಜೇತ ಪುರುಷರ ತಂಡದ ಮುಖ್ಯ ಕೋಚ್ ಗ್ರಹಾಂ ರೀಡ್ ಮತ್ತು ಕಂಚು ಪದಕ ವಂಚಿತ ಮಹಿಳಾ ತಂಡದ ಮುಖ್ಯ ಕೋಚ್ ಜೊಯೆರ್ಡ್ ಮರಿನ್ ಅತ್ಯುತ್ತಮ ಕೋಚ್ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.

    ಟೋಕಿಯೊ ಒಲಿಂಪಿಕ್ಸ್ ಸ್ವರ್ಣ ವಿಜೇತ ಬೆಲ್ಜಿಯಂ (ಪುರುಷ) ಮತ್ತು ನೆದರ್ಲೆಂಡ್ (ಮಹಿಳಾ) ತಂಡಗಳು 2020-21ರ ಸಾಲಿನ ಎಫ್​ಐಎಚ್ ಹಾಕಿ ಪ್ರೊ ಲೀಗ್‌ನಲ್ಲೂ ಪ್ರಶಸ್ತಿ ಜಯಿಸಿದ್ದವು. ಆದರೂ ಪ್ರಶಸ್ತಿ ರೇಸ್‌ನಲ್ಲಿ ಈ ತಂಡಗಳ ಸದಸ್ಯರು ಭಾರತೀಯರಿಗಿಂತ ಕಡಿಮೆ ಮತಗಳನ್ನು ಪಡೆದಿರುವುದು ಅಚ್ಚರಿ ಮೂಡಿಸಿದೆ. ಕರೊನಾ ಹಾವಳಿಯಿಂದಾಗಿ ಹಾಕಿ ಚಟುವಟಿಕೆ ಸ್ತಬ್ಧಗೊಂಡಿದ್ದ ಕಾರಣ ಎಫ್​ಐಎಚ್ 2020ರ ಸಾಲಿನ ಪ್ರಶಸ್ತಿ ಪ್ರಕಟಿಸಿರಲಿಲ್ಲ. ಪ್ರಸಕ್ತ ಸಾಲಿನ ಪ್ರಶಸ್ತಿಗೆ 2020ರ ಜನವರಿಯಿಂದ 2021ರ ಟೋಕಿಯೊ ಒಲಿಂಪಿಕ್ಸ್‌ವರೆಗಿನ ನಿರ್ವಹಣೆಯನ್ನು ಪರಿಗಣಿಸಲಾಗಿತ್ತು. ಭಾರತ ಪುರುಷರ ತಂಡ ಟೋಕಿಯೊದಲ್ಲಿ 41 ವರ್ಷಗಳ ಬಳಿಕ ಪದಕ (ಕಂಚು) ಗೆದ್ದ ಸಾಧನೆ ಮಾಡಿದ್ದರೆ, ಮಹಿಳಾ ತಂಡ ಇದೇ ಮೊದಲ ಬಾರಿಗೆ ಕಂಚು ಗೆಲುವಿನ ಸನಿಹ ಬಂದಿತ್ತು.

    ಮತದಾನ ಪದ್ಧತಿ
    ಮತದಾನ ಎಲ್ಲ ರಾಷ್ಟ್ರೀಯ ಹಾಕಿ ಸಂಸ್ಥೆಗಳ ಪ್ರತಿನಿಧಿಗಳಾಗಿ ನಾಯಕ ಮತ್ತು ಕೋಚ್ ಹಾಕುವ ಮತಗಳು ಪ್ರಶಸ್ತಿ ಆಯ್ಕೆಯಲ್ಲಿ ಶೇ. 50 ಪರಿಗಣಿಸಲ್ಪಟ್ಟರೆ, ಹಾಕಿ ಅಭಿಮಾನಿಗಳು ಮತ್ತು ಆಟಗಾರರ ಮತ ಶೇ. 25 ಪರಿಗಣಿಸಲ್ಪಡುತ್ತದೆ. ಉಳಿದ ಶೇ. 25 ಮಧ್ಯಮ ಮಂದಿಯ ಮತದಿಂದ ಪರಿಗಣಿಸಲ್ಪಡುತ್ತದೆ. ಹಲವು ಯುರೋಪ್ ಸಂಸ್ಥೆಗಳು ಮತದಾನವನ್ನೇ ಮಾಡಿರಲಿಲ್ಲ ಎಂದು ಎಫ್​ಐಎಚ್ ದೂರಿದೆ. ಏಷ್ಯಾದ 33ರಲ್ಲಿ 29 ಸಂಸ್ಥೆಗಳು ಮತ ಚಲಾಯಿಸಿದ್ದರೆ, ಯುರೋಪ್‌ನ 42 ಸಂಸ್ಥೆಗಳ ಪೈಕಿ 19 ಮಾತ್ರ ಮತ ಹಾಕಿದ್ದವು.

    ಆಯ್ಕೆ ಪ್ರಕ್ರಿಯೆಗೆ ಬೆಲ್ಜಿಯಂ ಆಕ್ಷೇಪ
    ಟೋಕಿಯೊ ಒಲಿಂಪಿಕ್ಸ್ ಸ್ವರ್ಣ ವಿಜೇತ ಬೆಲ್ಜಿಯಂ, ಎಫ್​ಐಎಚ್ ಪ್ರಶಸ್ತಿಯ ಮತದಾನ ಪದ್ಧತಿಯ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದೆ. ಒಲಿಂಪಿಕ್ಸ್ ಚಿನ್ನ ಗೆದ್ದ ತಂಡದ ಸದಸ್ಯರು ಹಲವು ವಿಭಾಗಗಳಲ್ಲಿ ಸ್ಪರ್ಧೆಯಲ್ಲಿದ್ದರೂ, ಒಂದೇ ಒಂದು ಪ್ರಶಸ್ತಿ ಗೆಲ್ಲದಿರುವುದು ಮತದಾನ ಪದ್ಧತಿಯ ವೈಲ್ಯತೆಯನ್ನು ತೋರಿಸುತ್ತಿದೆ ಎಂದು ಬೆಲ್ಜಿಯಂ ಕಿಡಿಕಾರಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ಎಫ್​ಐಎಚ್, ಪ್ರಶಸ್ತಿ ಆಯ್ಕೆ ಪ್ರಕ್ರಿಯೆಯ ಪರಾಮರ್ಶೆ ನಡೆಸಲು ಸಿದ್ಧ ಎಂದಿದೆ. ಜತೆಗೆ ಕೆಲ ರಾಷ್ಟ್ರೀಯ ಸಂಸ್ಥೆಗಳು ಯಾಕೆ ಮತದಾನ ಮಾಡಿಲ್ಲ ಎಂದೂ ಪರಿಶೀಲಿಸಲಾಗುವುದು ಎಂದಿದೆ.

    ಡಿಸೆಂಬರ್ 22ರಿಂದ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಪ್ರೊ ಕಬಡ್ಡಿ ಲೀಗ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts