More

    ಜನರ ನೆರವಿಗೆ ನೆರವಿಗೆ ಬರುವಲ್ಲಿ ಕೇಂದ್ರ, ರಾಜ್ಯ ಸರ್ಕಾರ ವಿಫಲ : ಎಚ್.ಎಂ.ರೇವಣ್ಣ ಆರೋಪ

    ತುಮಕೂರು: ಲಾಕ್‌ಡೌನ್‌ನಿಂದ ಸಂಕಷ್ಟಕ್ಕೆ ಸಿಲುಕಿರುವ ಜನಸಾಮಾನ್ಯರ ನೆರವಿಗೆ ಬರುವಲ್ಲಿ ಕೇಂದ್ರ, ರಾಜ್ಯ ಸರ್ಕಾರ ವಿಫಲವಾಗಿವೆ ಎಂದು ಕೆಪಿಸಿಸಿ ಕರೊನಾ ಟಾಸ್ಕ್ ಫೋರ್ಸ್ ಸಮಿತಿ ಬೆಂಗಳೂರು ವಿಭಾಗದ ಅಧ್ಯಕ್ಷ ಎಚ್.ಎಂ.ರೇವಣ್ಣ ಆರೋಪಿಸಿದರು.

    ಮರಳೂರು ದಿಣ್ಣೆ ಎಸ್‌ಎಸ್‌ಐಟಿ ಮುಂಭಾಗದ ಬೀರೇಶ್ವರ ಕಲ್ಯಾಣ ಮಂಟಪದಲ್ಲಿ ಆರ್.ರಾಜೇಂದ್ರ ಅಭಿಮಾನಿ ಬಳಗದಿಂದ ಬಡವರು, ನಿರ್ಗತಿಕರು ಹಾಗೂ ಕರೊನಾ ಸೇನಾನಿಗಳಿಗೆ ಆಹಾರ ಪೂರೈಸುವ ದಾಸೋಹ ಕೇಂದ್ರವನ್ನು ಭಾನುವಾರ ಪರಿಶೀಲಿಸಿ ಮಾತನಾಡಿ, ಸರ್ಕಾರ ಮಾಡಬೇಕಿರುವ ಕೆಲಸವನ್ನು ಯುವ ಕಾಂಗ್ರೆಸ್ ಸೇರಿ ವೀರಶೈವ ಸಮಾಜ, ಮಾರ್ವಾಡಿ ಸಮಾಜ, ಜೈನ್ ಸಮಾಜ ವಿವಿಧ ಸಂಘ ಸಂಸ್ಥೆಗಳು ಜನರ ಕಷ್ಟಕಾರ್ಪಣ್ಯಗಳಿಗೆ ಸ್ಪಂದಿಸುತ್ತಿವೆ ಎಂದರು. ಕರೊನಾ ಸಂಕಷ್ಟಕ್ಕೆ ಹೇಗೆ ಸ್ಪಂದಿಸಲಾಗುತ್ತಿದೆ ಎಂಬುದನ್ನು ಸರ್ಕಾರ ತಿಳಿಸಬೇಕಿದೆ. ಮಂತ್ರಿಗಳದ್ದೇ ದರ್ಬಾರು. ಇದೊಂಥರಾ ತೊಘಲಕ್ ದರ್ಬಾರ್‌ನಂತಿದೆ. ಕರೊನಾ ಪರೀಕ್ಷಾ ಕಿಟ್ ಎಷ್ಟು ಕೊಟ್ಟಿದ್ದಾರೆ? ಎಷ್ಟು ಪ್ರಯೋಗಾಲಗಳಿವೆ, ಎಷ್ಟು ಜನಕ್ಕೆ ಟೆಸ್ಟ್ ಮಾಡಿದ್ದಾರೆ ಎಂಬ ಅಂಕಿ-ಅಂಶವನ್ನೇ ಸರ್ಕಾರ ಕೊಡುತ್ತಿಲ್ಲ ಎಂದರು. ಶಾಸಕ ವಿ.ಮುನಿಯಪ್ಪ, ಮಾಜಿ ಸಂಸದ ಬಿ.ಎನ್.ಚಂದ್ರಪ್ಪ, ರಾಜ್ಯ ಯುವ ಕಾಂಗ್ರೆಸ್ ಉಪಾಧ್ಯಕ್ಷ ಆರ್.ರಾಜೇಂದ್ರ, ಆರ್.ರವೀಂದ್ರ, ಕಲ್ಲಳ್ಳಿ ದೇವರಾಜ್, ತು.ಬಿ.ಮಲ್ಲೇಶ್, ರಾಜೇಶ್ ದೊಡ್ಮನೆ ಇದ್ದರು.

    5 ಟಾಸ್ಕ್ ಫೋರ್ಸ್: ಕೆಪಿಸಿಸಿ ರಾಜ್ಯದ 4 ಕಂದಾಯ ವಿಭಾಗ ಹಾಗೂ ಬೆಂಗಳೂರು ಸೇರಿ 5 ಟಾಸ್ಕ್‌ಪೋರ್ಸ್ ರಚಿಸಿದ್ದು, ಬೆಂಗಳೂರು ಭಾಗದ ಟಾಸ್ಕ್‌ಪೋರ್ಸ್‌ನಲ್ಲಿ ಮಾಜಿ ಸಚಿವ ಎಚ್.ಎಂ.ರೇವಣ್ಣ ನೇತೃತ್ವದ ತಂಡದಲ್ಲಿ ವಿ.ಮುನಿಯಪ್ಪ, ಎಸ್.ಎಸ್. ಮಲ್ಲಿಕಾರ್ಜುನ್, ಮಾಜಿ ಸಂಸದರಾದ ಎಸ್.ಪಿ.ಮುದ್ದಹನುಮೇಗೌಡ, ಚಂದ್ರಪ್ಪ, ಕೆಜಿಎಫ್ ಶಾಸಕಿ ರೂಪಾ ಇದ್ದಾರೆ. ಚಿತ್ರದುರ್ಗ, ಶಿವಮೊಗ್ಗ, ದಾವಣಗೆರೆ ಸೇರಿ 5 ಜಿಲ್ಲೆಗಳಲ್ಲಿ ತಂಡ ಪ್ರವಾಸ ಮಾಡಿದ್ದು ಅಲ್ಲಿನ ಪರಿಸ್ಥಿತಿ ಬಗ್ಗೆ ಪಕ್ಷಕ್ಕೆ ವರದಿ ನೀಡಲಾಗುವುದು ಎಂದು ರೇವಣ್ಣ ಹೇಳಿದರು.

    ಕೈ ಮಾನ ಕಾಪಾಡಿದ ರಾಜೇಂದ್ರ!: ಯುವ ಕಾಂಗ್ರೆಸ್ ರಾಜ್ಯ ಉಪಾಧ್ಯಕ್ಷ ಆರ್.ರಾಜೇಂದ್ರ ಲಾಕ್‌ಡೌನ್ ಜಾರಿಯಾದ ಮೊದಲ ದಿನದಿಂದಲೇ ನಿರ್ಗತಿಕರು, ಬಡವರು, ಕೂಲಿಕಾರ್ಮಿಕರು, ಭಿಕ್ಷಕರಿಗಾಗಿ ದುಡಿಯುತ್ತಿದ್ದು ಪೊಲೀಸ್ ಇಲಾಖೆ, ಹೋಂಗಾರ್ಡ್, ಆರೋಗ್ಯ ಇಲಾಖೆ ಸೇರಿ ಪ್ರತಿನಿತ್ಯ ಸಾವಿರಾರು ಮಂದಿಗೆ ಅನ್ನ, ನೀರು ನೀಡುವ ಕಾಯಕ ಆರಂಭಿಸಿ ಜಿಲ್ಲೆಯಲ್ಲಿ ಕಾಂಗ್ರೆಸ್ ಮಾನ ಕಾಪಾಡಿದ್ದಾರೆ. ಲಾಕ್‌ಡೌನ್ ಜಾರಿಯಾಗಿ 15 ದಿನಗಳಾದರೂ ಜಿಲ್ಲಾ ಕಾಂಗ್ರೆಸ್‌ನ ಯಾರೊಬ್ಬರೂ ಬಡವರಿಗೆ ಸ್ಪಂದಿಸಿರಲಿಲ್ಲ. ಕೊನೆಗೆ ಶಾಸಕ ಜಿ.ಪರಮೇಶ್ವರ್ ಎಚ್ಚೆತ್ತು ಕಾಂಗ್ರೆಸ್‌ನಿಂದ ಸಹಾಯವಾಣಿ ಆರಂಭಿಸಿದರು. ಆರ್.ರಾಜೇಂದ್ರ ಅಭಿಮಾನಿ ಬಳಗವು 40 ಸಾವಿರ ಜನರಿಗೆ ಆಹಾರ, 1.05 ಲಕ್ಷ ಮಾಸ್ಕ್ ವಿತರಣೆ, 2500 ಎನ್-95 ಮಾಸ್ಕ್, ಸ್ಯಾನಿಟೈಸರ್, ಹ್ಯಾಂಡ್ ಗ್ಲೌಸ್ ಕೊಡುವ ಮೂಲಕ ಮಾನವೀಯತೆ ಮೆರೆದಿದೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts