More

    ತಾಪಂ ನಿರ್ಮಾಣಕ್ಕೆ ಹಗ್ಗ-ಜಗ್ಗಾಟ

    ಹಿರಿಯೂರು: ಇಲ್ಲಿನ ತಾಲೂಕು ಪಂಚಾಯತಿ ನೂತನ ಕಟ್ಟಡ ನಿರ್ಮಾಣಕ್ಕೆ ಹಗ್ಗ-ಜಗ್ಗಾಟ ಮುಂದುವರಿದಿದೆ. ಕಟ್ಟಡಕ್ಕೆ ಭೂಮಿ ಪೂಜೆ ನೆರವೇರಿಸಿ ನಾಲ್ಕೈದು ವರ್ಷ ಕಳೆದರೂ ಇಲ್ಲಿಯವರೆಗೆ ಕಾರ್ಯಗತವಾಗಿಲ್ಲ.

    ತಾಪಂ ಪಕ್ಕದ ಹಳೇ ಕಚೇರಿ ಕೆಡವಿ ನೂತನ ಕಟ್ಟಡ ನಿರ್ಮಾಣಕ್ಕೆ ಅಂದಿನ ಶಾಸಕ ಡಿ.ಸುಧಾಕರ್ ಭೂಮಿ ಪೂಜೆ ನೆರವೇರಿಸಿದ್ದರು. ಕಾಮಗಾರಿ ಹೊಣೆ ನಿರ್ಮಿತಿ ಕೇಂದ್ರಕ್ಕೆ ವಹಿಸಿದ್ದಕ್ಕೆ ಬಿಜೆಪಿ-ಜೆಡಿಎಸ್ ಸದಸ್ಯರು ತೀವ್ರ ವಿರೋಧ ವ್ಯಕ್ತಪಡಿಸಿದ್ದ ಕಾರಣ ನನೆಗುದಿಗೆ ಬಿದ್ದಿತ್ತು.

    ಸ್ಥಳಾಂತರಕ್ಕೆ ವಿರೋಧ: ರಾಷ್ಟ್ರೀಯ ಹೆದ್ದಾರಿಯ ಸಮೀಪದ ಮೇಟಿಕುರ್ಕೆ ಬಳಿ ಮಿನಿ ವಿಧಾನ ಸೌಧ, ತಾಪಂ ಕಟ್ಟಡ, ಸಾರಿಗೆ ಡಿಪೋ ನಿರ್ಮಾಣಕ್ಕೆ ಶಾಸಕರು ಚಿಂತನೆ ನಡೆಸಿದ್ದು, ಇದಕ್ಕೆ ತಾಪಂ ಸದಸ್ಯರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಮೂಲ ಸ್ಥಳದಲ್ಲಿಯೇ ಕಟ್ಟಡ ನಿರ್ಮಿಸಬೇಕು. ನಗರದ ಹೊರ ವಲಯದಲ್ಲಿ ಕಚೇರಿ ನಿರ್ಮಿಸಿದರೆ ಜನತೆಗೆ ತೊಂದರೆಯಾಗಲಿದೆ ಎಂಬ ಅನಿಸಿಕೆ ಸದಸ್ಯರದ್ದಾಗಿದೆ.

    ಸಭೆ ನಡೆಸಲು ಸ್ಥಳವಿಲ್ಲ: ಸಭೆ ನಡೆಸುತ್ತಿದ್ದ ಸಭಾಂಗಣವನ್ನು ಅಧಿಕಾರಿಗಳು ಕಚೇರಿ ಕೆಲಸಕ್ಕೆ ಬಳಸಿಕೊಳ್ಳುತ್ತಿದ್ದು, ಸಾಮಾನ್ಯ, ಕೆಡಿಪಿ ಸಭೆ ನಡೆಸಲು ಸೂಕ್ತ ಸ್ಥಳವಿಲ್ಲ. ನಗರದ ಹೊರ ವಲಯದಲ್ಲಿರುವ ಸಾಮರ್ಥ್ಯ ಸೌಧದಲ್ಲಿ ಸಭೆ ನಡೆಸುತ್ತಿರುವುದಕ್ಕೆ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಅನುದಾನ ಮೀಸಲಿಟ್ಟು, ಅಂದಿನ ಸಿಎಂ ಸಿದ್ದರಾಮಯ್ಯ ಶಂಕುಸ್ಥಾಪನೆ ನೆರವೇರಿಸಿದ್ದರು.

    ಸುಸಜ್ಜಿತ ಕಟ್ಟಡ ನಿರ್ಮಾಣಕ್ಕೆ ಜಾಗದ ಕೊರತೆ ಇದೆ. ಕಟ್ಟಡ ನಿರ್ಮಿಸಿದರೆ ವಾಹನಗಳ ನಿಲುಗಡೆ ಸಮಸ್ಯೆಯಾಗಲಿದೆ. ಮೂಲ ಸೌಲಭ್ಯ ಕಲ್ಪಿಸಲು ಸಾಧ್ಯವಾಗುವುದಿಲ್ಲ. ನಗರದ ಹೊರ ವಲಯದಲ್ಲಿ ಕಟ್ಟಡ ನಿರ್ಮಾಣಕ್ಕೆ ಚಿಂತನೆ ನಡೆಸಲಾಗಿದೆ. ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು. ಇದರಲ್ಲಿ ಯಾವುದೇ ಪ್ರತಿಷ್ಠೆ ಇಲ್ಲ ಎನ್ನುತ್ತಾರೆ ಶಾಸಕಿ ಕೆ.ಪೂರ್ಣಿಮಾ ಶ್ರೀನಿವಾಸ್.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts