More

    ಐತಿಹಾಸಿಕ ಅವಕಾಶ: ಮೊದಲ ಬಾರಿಗೆ ಯುವತಿಯರಿಂದ ಎನ್​ಡಿಎ ಪರೀಕ್ಷೆಗೆ ಅರ್ಜಿ ಆಹ್ವಾನ

    ನವದೆಹಲಿ: ಪ್ರತಿಷ್ಠಿತ ಸೇನಾ ತರಬೇತಿ ಸಂಸ್ಥೆ ನ್ಯಾಷನಲ್ ಡಿಫೆನ್ಸ್​ ಅಕಾಡೆಮಿ(ಎನ್​ಡಿಎ) ಸೇರಲು ಹೆಣ್ಣುಮಕ್ಕಳಿಗೆ ಈ ವರ್ಷದಿಂದಲೇ ಅವಕಾಶ ಒದಗಿಸಬೇಕೆಂಬ ಸುಪ್ರೀಂ ಕೋರ್ಟ್​ ನಿರ್ದೇಶನದ ನಂತರ ಎನ್​ಡಿಎ ಮತ್ತು ನೇವಲ್​ ಅಕಾಡೆಮಿ ಎಕ್ಸಾಮಿನೇಷನ್, 2021 ಬರೆಯಲು ಯುವತಿಯರಿಂದ ಅರ್ಜಿ ಆಹ್ವಾನಿಸಲಾಗಿದೆ. ಈ ಬಗ್ಗೆ ಹೆಚ್ಚುವರಿ ಸುತ್ತೋಲೆ ಹೊರಡಿಸಿರುವ ಯೂನಿಯನ್​ ಪಬ್ಲಿಕ್​ ಸರ್ವೀಸ್ ಕಮಿಷನ್(ಯುಪಿಎಸ್​ಸಿ), ನವೆಂಬರ್​ 14ರ ಪ್ರವೇಶ ಪರೀಕ್ಷೆಗೆ ಅವಿವಾಹಿತ ಮಹಿಳಾ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಆನ್​ಲೈನ್​ ಪೋರ್ಟಲ್​ಅನ್ನು ತೆರೆದಿರುವುದಾಗಿ ತಿಳಿಸಿದೆ.

    ಈವರೆಗೆ 12ನೇ ತರಗತಿ ಅಥವಾ ಸಮಾನಾಂತರ ಪರೀಕ್ಷೆ ಪಾಸಾದ 16 ರಿಂದ 19 ವರ್ಷ ವಯಸ್ಸಿನ ಯುವಕರಿಗೆ ಮಾತ್ರ ಎನ್​ಡಿಎ ಪ್ರವೇಶ ಪರೀಕ್ಷೆ ಬರೆಯುವ ಅವಕಾಶವಿತ್ತು. ಯುವಕರಿಗೆ ಮಾತ್ರ ಪ್ರವೇಶಾವಕಾಶ ನೀಡುವ ಯುಪಿಎಸ್​ಸಿಯ ನಿಯಮಗಳನ್ನು ಪ್ರಶ್ನಿಸಿದ್ದ ಕುಶ್​​ ಕಾಲ್ರ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್​, ಆಗಸ್ಟ್​ 18 ರಂದು ಹೆಣ್ಣುಮಕ್ಕಳಿಗೆ ಎನ್​ಡಿಎ ಪ್ರವೇಶ ಪರೀಕ್ಷೆ ಬರೆಯಲು ಅವಕಾಶ ನೀಡಬೇಕೆಂದು ಆದೇಶಿಸಿತ್ತು. ರಕ್ಷಣಾ ಪಡೆಗಳಲ್ಲಿ ಲೈಂಗಿಕ ಸಮಾನತೆ ಸಾಧಿಸಲು ತಾಕೀತು ಮಾಡಿತ್ತು. ಸರ್ಕಾರ ನಿಯಮ ಬದಲಿಸಿ ಮುಂದಿನ ವರ್ಷದಿಂದ ಮಹಿಳಾ ಅಭ್ಯರ್ಥಿಗಳಿಗೆ ಅವಕಾಶ ನೀಡಲು ಕಾಲಾವಕಾಶ ಕೋರಿತ್ತು. ಅದಕ್ಕೊಪ್ಪದ ಕೋರ್ಟ್​, ಈ ವರ್ಷದಿಂದಲೇ ಬದಲಾವಣೆ ಆಗಬೇಕೆಂದು ಆದೇಶಿಸಿ, ನವೆಂಬರ್​ 14 ರಂದು ನಡೆಯಲಿರುವ ಎನ್​ಡಿಎ ಮತ್ತು ಎನ್​ಎಇ ಪ್ರವೇಶ ಪರೀಕ್ಷೆಗೇ ಹೆಣ್ಣುಮಕ್ಕಳಿಗೆ ಅವಕಾಶ ಒದಗಿಸಿ ಎಂದು ಆದೇಶಿಸಿತ್ತು.

    ಇದನ್ನೂ ಓದಿ: ಸೈನಿಕ ಶಾಲೆಗಳಲ್ಲಿ ಇನ್ನು ಮುಂದೆ ಹೆಣ್ಣುಮಕ್ಕಳಿಗೂ ಪ್ರವೇಶಾವಕಾಶ

    ಎನ್​ಡಿಎ ಪರೀಕ್ಷೆ ಉತ್ತೀರ್ಣರಾದವರನ್ನು ಸರ್ವೀಸ್​ ಸೆಲೆಕ್ಷನ್ ಬೋರ್ಡ್​ಗೆ ಸಂದರ್ಶನಕ್ಕಾಗಿ ಆಹ್ವಾನಿಸಲಾಗುತ್ತದೆ. ವೈದ್ಯಕೀಯ ಪರೀಕ್ಷೆಯ ನಂತರ ಅಭ್ಯರ್ಥಿಗಳನ್ನು ಎನ್​ಡಿಎನ ಭೂಸೇನೆ, ನೌಕಾದಳ ಮತ್ತು ವಾಯುಪಡೆಯ ವಿಭಾಗಗಳಿಗೆ ನಿಯುಕ್ತಿ ಮಾಡಲಾಗುತ್ತದೆ ಮತ್ತು ಐಎನ್​ಎನ ಪ್ರೀಕಮಿಷನ್ ಟ್ರೈನಿಂಗ್​ಗೆ ದಾಖಲು ಮಾಡಿಕೊಳ್ಳಲಾಗುತ್ತದೆ. ಆಸಕ್ತ ಮಹಿಳಾ ಅಭ್ಯರ್ಥಿಗಳು ಯುಪಿಎಸ್​ಇ ವೆಬ್​ಸೈಟ್​ನಲ್ಲಿ (upsconline.nic.in) ಸೆಪ್ಟೆಂಬರ್​ 24 ರಿಂದ ಅಕ್ಟೋಬರ್​ 8 ರವರೆಗೆ ತೆರೆಯಲಾಗಿರುವ ಪೋರ್ಟಲ್​ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. (ಏಜೆನ್ಸೀಸ್)

    ನಾಯಿ ವಿಷಯಕ್ಕೆ ಜಗಳ… ಸಂಧಾನಕ್ಕೆ ಕರೆದ ರಾತ್ರಿ ನಡೆದೇ ಹೋಯ್ತು ದುರಂತ

    ಇಲ್ಲಿ ಶಾಲೆ ಪುನರಾರಂಭದ ನಂತರ 400 ವಿದ್ಯಾರ್ಥಿಗಳಿಗೆ ಕರೊನಾ ಸೋಂಕು

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts