More

    ಅವಧಿ ಮೀರಿದ ಔಷಧ ಪತ್ತೆ

    ಹಿರಿಯೂರು: ಇಲ್ಲಿನ ಸರ್ಕಾರಿ ಆಸ್ಪತ್ರೆಗೆ ಬುಧವಾರ ಜಿಪಂ ಅಧ್ಯಕ್ಷೆ ಶಶಿಕಲಾ ಸುರೇಶ್‌ಬಾಬು ಭೇಟಿ ನೀಡಿ ಕುಂದು ಕೊರತೆಗಳ ಬಗ್ಗೆ ಪರಿಶೀಲಿಸಿದರು.

    ಮುಖ್ಯ ಉಗ್ರಾಣದಲ್ಲಿ ಒಂದು ತಿಂಗಳಲ್ಲಿ ಅವಧಿ ಮುಕ್ತಾಯವಾಗುವ ಔಷಧ ದಾಸ್ತಾನಾಗಿರುವುದು ಕಂಡುಬಂತು. ಇವುಗಳನ್ನು ತಕ್ಷಣ ವಿಲೇ ಮಾಡದೇ ಇಲ್ಲಿಟ್ಟಿರುವ ಕಾರಣ ಏನು ಎಂದು ತರಾಟೆಗೆ ತೆಗೆದುಕೊಂಡರು.

    ಯಾವುದೇ ಕಾರಣಕ್ಕೂ ರೋಗಿಗಳಿಗೆ ಅವಧಿ ಮೀರಿದ ಔಷಧ ನೀಡಬಾರದು ಎಂದು ತಾಕೀತು ಮಾಡಿದರು.

    ಆಸ್ಪತ್ರೆಯಲ್ಲಿ ಸ್ವಚ್ಛತೆ ಸಂಪೂರ್ಣವಾಗಿ ಹದಗೆಟ್ಟಿದ್ದು, ಈ ಕುರಿತು ಗಮನ ಹರಿಸುವಂತೆ ಸೂಚಿಸಿದರು. ಪರಸ್ಪರ ಅಂತರ ಕಾಯ್ದುಕೊಳ್ಳುವಂತೆ ರೋಗಿಗಳಿಗೆ ಸಲಹೆ ನೀಡಿದರು.

    ಆಸ್ಪತ್ರೆಗೆ 11 ವೈದ್ಯರ ಹುದ್ದೆ ಮಂಜೂರಾಗಿದ್ದು, ಅದರಲ್ಲಿ 9 ವೈದ್ಯರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಒಂದು ಜನರಲ್ ಸರ್ಜನ್ ಹಾಗೂ ಚರ್ಮ ರೋಗ ತಜ್ಞರ ಹುದ್ದೆ ಖಾಲಿ ಇದೆ. ಒಬ್ಬ ಚರ್ಮ ರೋಗ ತಜ್ಞರು ಜನವರಿಯಿಂದ ಗೈರಾಗಿದ್ದಾರೆ. ಡಿ ಗ್ರೂಪ್ ಸಿಬ್ಬಂದಿ ಕೊರತೆ ಹೆಚ್ಚಾಗಿದ್ದು, ಹೊರ ಗುತ್ತಿಗೆ ಸಿಬ್ಬಂದಿ ನೇಮಕ ಮಾಡಿಕೊಳ್ಳಲು ಟೆಂಡರ್ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ ಎಂದು ಸಿಬ್ಬಂದಿ ಮಾಹಿತಿ ನೀಡಿದರು.

    ನಮಗೆ ಸ್ಕ್ಯಾನಿಂಗ್ ಮಾಡಿಸಲು ಹೊರಗಡೆ ಕಳುಹಿಸುತ್ತಾರೆ. ಇದರಿಂದ ಸಾವಿರಾರು ರೂ. ಖರ್ಚು ಮಾಡಬೇಕು. ನಾವು ಬಡವರು ಅಷ್ಟೊಂದು ಹಣ ಎಲ್ಲಿಂದ ತರಲಿ ಎಂದು ಗರ್ಬಿಣಿಯೊಬ್ಬರು ಅಳಲು ತೋಡಿಕೊಂಡರು.

    ತಕ್ಷಣವೇ ವೈದ್ಯರನ್ನು ಕರೆಯಿಸಿ ಕೇಳಿದಾಗ ಆಸ್ಪತ್ರೆಯಲ್ಲಿ ಸ್ಕ್ಯಾನಿಂಗ್ ರೂಂ ಇದೆ. ಆದರೆ, ಪರೀಕ್ಷಾ ತಜ್ಞರು ಇಲ್ಲ ಎಂದು ಮಾಹಿತಿ ನೀಡಿದರು. ಸ್ಕ್ಯಾನಿಂಗ್ ರೂಂ ಬಾಗಿಲು ತೆಗೆಸಿ ನೋಡಿದಾಗ ಉಪಕರಣಗಳು ದೂಳು ಹಿಡಿದಿದ್ದು ಕಂಡು ತರಾಟೆಗೆ ತೆಗೆದುಕೊಂಡರು.

    ಜಿಲ್ಲಾ ಆರೋಗ್ಯಾಧಿಕಾರಿ ನೇತೃತ್ವದಲ್ಲಿ ಸಭೆ ಕರೆದು ಚರ್ಚಿಸುತ್ತೇನೆ. ಆಸ್ಪತ್ರೆಗೆ ಸುಣ್ಣಬಣ್ಣ, ಆಂಬುಲೆನ್ಸ್ ವ್ಯವಸ್ಥೆ, ಅವಶ್ಯಕ ಸಿಬ್ಬಂದಿ ನೇಮಕ, ಪರೀಕ್ಷಾ ಉಪಕರಣಗಳು ಕುರಿತು ಚರ್ಚಿಸಲಾಗುವುದು ಎಂದು ಅಧ್ಯಕ್ಷರು ಹೇಳಿದರು.

    ಜಿಪಂ ಸದಸ್ಯ ಆರ್.ನಾಗೇಂದ್ರನಾಯ್ಕ, ತಾಪಂ ಸದಸ್ಯರಾದ ಚಂದ್ರಪ್ಪ, ಮುಕುಂದ್, ಕೆಪಿಸಿಸಿ ಸದಸ್ಯ ಕಂದಿಕೆರೆ ಸುರೇಶಬಾಬು, ವೈದ್ಯರಾದ ಡಾ.ಬಸವರಾಜ್, ಡಾ.ನಾಗರಾಜ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts