More

    ಹೊಂಬಾಳಪ್ಪನ ಬದುಕಿಗೆ ಕಾಮಧೇನುವಾದ ಬಾಳೆ

    ಹಿರಿಯೂರು: ತಾಲೂಕಿನ ಬೆಂಕಿಕಾಟನಹಟ್ಟಿಯ ರೈತ ಹೊಂಬಾಳಪ್ಪ ಬಾಳೆ ಬೆಳೆದು ಸ್ವಾವಲಂಬಿ ಕೃಷಿ ಬದುಕು ಕಟ್ಟಿಕೊಂಡಿದ್ದಾರೆ.

    ಬಯಲುಸೀಮೆ ರೈತರಿಗೆ ಕೃಷಿ ಬದುಕು ಹಗ್ಗದ ಮೇಲಿನ ನಡಿಗೆಯಾಗಿದ್ದು, ಬರಗಾಲ, ಮಳೆ ಕೊರತೆ, ಅಂತರ್ಜಲ ವಿಫಲ, ಬಿಸಿಲಿನ ವಾತಾವರಣ, ಕೂಲಿಕಾರರ ಸಮಸ್ಯೆ, ವಿದ್ಯುತ್ ಕಣ್ಣಾಮುಚ್ಚಾಲೆ, ಈ ಎಲ್ಲವನ್ನೂ ಧೈರ್ಯವಾಗಿ ಎದುರಿಸಿ ಕೃಷಿಯಲ್ಲಿ ಯಶಸ್ಸು ಕಾಣುವುದು ಸವಾಲಿನ ಕೆಲಸವಾಗಿದೆ.

    ನೀರಾವರಿ ಸೌಲಭ್ಯ ಇಲ್ಲದ ಪ್ರದೇಶದಲ್ಲಿ ಬಾಳೆ ಬೆಳೆಯುವುದು ಅಷ್ಟು ಸುಲಭವಲ್ಲ. ಕೊಳವೆಬಾವಿ ಅವಲಂಭಿಸಿ ಕೃಷಿ ಚಟುವಟಿಕೆಯಲ್ಲಿ ತೊಡಗಿದ ರೈತ ಹೊಂಬಾಳಪ್ಪನಿಗೆ ಬಾಳೆ ಕಾಮಧೇನುವಾಗಿದೆ.

    ತಮ್ಮ 4 ಎಕರೆ ಕೃಷಿ ಭೂಮಿಯನ್ನು ತೋಟಗಾರಿಕೆ ಕೃಷಿ ಮಾಡುವ ಮೂಲಕ ಸುತ್ತಲಿನ ರೈತರಿಗೆ ಭೂಮಿ ಪಾಳು ಬಿಡಬೇಡಿ. ಭೂ ತಾಯಿ ನಂಬಿದರೆ ಎಂದು ಕೈ ಬಿಡುವುದಿಲ್ಲ ಎನ್ನುವ ನೀತಿ ಪಾಠವನ್ನು ಹೇಳುತ್ತಿದ್ದಾರೆ.

    ನಾಲ್ಕು ಎಕರೆಯಲ್ಲಿ ಬಾಳೆ-ಅಡಕೆ ಕೃಷಿ: ರೈತ ಹೊಂಬಾಳಪ್ಪ ತನ್ನ ನಾಲ್ಕು ಎಕರೆಯಲ್ಲಿ ಮೂರು ಸಾವಿರ ಅಡಕೆ, ನಾಲ್ಕು ಸಾವಿರ ಬಾಳೆ ಸಸಿ ನೆಟ್ಟಿದ್ದು, ಮೊದಲ ವರ್ಷದಲ್ಲೇ 25- 30 ಲಕ್ಷ ಲಾಭ ಗಳಿಸಿದ್ದು, ಸಾಂಪ್ರದಾಯಕ ಕೃಷಿಗೆ ಗುಡ್‌ಬೈ ಹೇಳಿ ಬಹುಬೆಳೆ ಪದ್ಧತಿಯಲ್ಲಿ ಯಶಸ್ಸು ಸಾಧಿಸಿದ್ದಾರೆ. ವೇದಾವತಿ ನದಿಪಾತ್ರದ ಜಮೀನುಗಳಿಗೆ ಸೀಮಿತವಾಗಿದ್ದ ಬಾಳೆ ಕೃಷಿ ತಾಲೂಕಿನ ಎಲ್ಲ ಕಡೆ ವಿಸ್ತರಣೆಯಾಗಿದೆ.

    ವರ್ಷಕ್ಕೆ ಕಟಾವು: ಜೂನ್‌ನಲ್ಲಿ ಬಾಳೆ ನಾಟಿ ಮಾಡಿದರೆ ಶ್ರಾವಣ ಮಾಸದಲ್ಲಿ ಕಟಾವಿಗೆ ಬರಲಿದ್ದು, ಹಬ್ಬ, ಮದುವೆ, ಜಾತ್ರೆ, ಶುಭ ಸಮಾರಂಭಗಳು ಹೆಚ್ಚಾಗಿ ನಡೆಯುವುದರಿಂದ ಬಾಳೆಗೆ ಬಂಗಾರದ ಬೆಲೆ ಬರಲಿದೆ ಎನ್ನುತ್ತಾರೆ ರೈತ.

    ಅಕ್ಕಪಕ್ಕದ ರೈತರಿಗೂ ನೆರವಿನ ಹಸ್ತ: ತಾನು ಬೆಳೆದು ಇತರ ರೈತರಿಗೆ ನೆರವಾಗುವ ಹೃದಯವಂತಿಕೆ ರೈತ ಹೊಂಬಾಳಪ್ಪನದು. ನಾಲ್ಕು ಎಕರೆ ಕೃಷಿ ಚಟುವಟಿಕೆಗೆ 4 ಕೊಳವೆಬಾವಿ ಕೊರೆಸಿದ್ದು, 2 ಮಾತ್ರ ಬಳಸಿಕೊಂಡು, ನೀರಿಲ್ಲದೆ ಸಂಕಷ್ಟದಲ್ಲಿರುವ ರೈತರ ಬೆಳೆ ಉಳಿಸಲು ಎರಡು ಕೊಳವೆಬಾವಿಗಳನ್ನು ಉಚಿತವಾಗಿ ನೀಡುತ್ತಿದ್ದಾರೆ. ಬಾಳೆ ಜತೆ ಅಡಕೆ ನಾಟಿ ಮಾಡಿದ್ದು, ಮಣ್ಣು- ಕುರಿಗೊಬ್ಬರ ಹೆಚ್ಚಿನ ಪ್ರಮಾಣದಲ್ಲಿ ಹಾಕಿದ್ದಾರೆ. ನಾಲ್ಕು ವರ್ಷಕ್ಕೆ ಅಡಕೆ ಫಸಲಿಗೆ ಬಂದಿರುವುದು, ಸುತ್ತಲಿನ ರೈತರಲ್ಲಿ ಆಶ್ಚರ್ಯ ತಂದಿದೆ.

    ಅಧಿಕಾರಿಗಳ ಸ್ಮರಣೆ: ಅಕಾಲಿಕ ಆಲಿಕಲ್ಲು ಮಳೆಗೆ ಫಸಲಿಗೆ ಬಂದಿದ್ದ ದಾಳಿಂಬೆ- ಪಪ್ಪಾಯ ಬೆಳೆ ಸಂಪೂರ್ಣವಾಗಿ ನಾಶವಾದಾಗ ತೋಟಗಾರಿಕೆ ಇಲಾಖೆ ಅಧಿಕಾರಿ ಡಾ.ಸವಿತಾ ಅವರು, ನನಗೆ ಧೈರ್ಯ ತುಂಬಿ ಮತ್ತೆ ಕೃಷಿಯಲ್ಲಿ ತೊಡಗಿ, ಯಶಸ್ಸು ಕಾಣಲು ಅವರ ಸಹಕಾರ, ಮಾರ್ಗದರ್ಶನ ಇದೆ ಎಂದು ಸ್ಮರಿಸುತ್ತಾರೆ ರೈತ ಹೊಂಬಾಳಪ್ಪ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts