More

    ನಗರಾಡಳಿತ ವಿರುದ್ಧ ಸದಸ್ಯರ ಆಕ್ರೋಶ

    ಹಿರಿಯೂರು: ನಗರದ ಸ್ವಚ್ಛತೆ-ಕುಡಿವ ನೀರು ನಿರ್ವಹಣೆಯಲ್ಲಿ ವಿಫಲವಾಗಿರುವ ನಗರಸಭೆ ಅಧಿಕಾರಿಗಳ ಕಾರ್ಯವೈಖರಿ ವಿರುದ್ಧ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.

    ಇಲ್ಲಿನ ನಗರಸಭೆ ಸಭಾಂಗಣದಲ್ಲಿ ಬುಧವಾರ ಪೌರಾಯುಕ್ತ ಶಿವಪ್ರಸಾದ್ ಅಧ್ಯಕ್ಷತೆಯಲ್ಲಿ ಸ್ವಚ್ಛತೆ-ಕುಡಿವ ನೀರು ನಿರ್ವಹಣೆ ಕುಂದುಕೊರತೆ ಕುರಿತು ಸರ್ವ ಸದಸ್ಯರ ಸಭೆ ನಡೆಯಿತು.

    ಪೌರ ಕಾರ್ಮಿಕರು-ಸಿಬ್ಬಂದಿ ಕೊರತೆಯಿಂದ ನಗರದಲ್ಲಿ ಸ್ವಚ್ಛತೆ ಕಾಪಾಡುವುದು ಕಷ್ಟ-ಸಾಧ್ಯವಾಗಿದೆ. ಲಭ್ಯವಿರುವ ಕಾರ್ಮಿಕರನ್ನು ಬಳಸಿಕೊಂಡು ಸ್ವಚ್ಛತೆ, ಸಮರ್ಪಕ ಕುಡಿವ ನೀರು ಪೂರೈಕೆಗೆ ಅಧಿಕಾರಿಗಳು ಆದ್ಯತೆ ನೀಡಬೇಕು ಎಂದು ಸದಸ್ಯರು ತಾಕೀತು ಮಾಡಿದರು.

    ನಗರದ ವಿವಿಧ ಬಡಾವಣೆಗಳಲ್ಲಿ ಕುಡಿವ ನೀರಿನ ಪೈಪ್ ಒಡೆದು ಕಲುಷಿತ ನೀರು ಪೂರೈಕೆಯಾಗುತ್ತಿದ್ದು, ನಗರಸಭೆ ಸಿಬ್ಬಂದಿ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಅನಿಲ್ ದೂರಿದರು.

    ಚರಂಡಿಗಳ ಸ್ವಚ್ಛತೆ ಮರೀಚಿಕೆಯಾಗಿದೆ. ಬೀದಿ ನಾಯಿ, ಹಂದಿ, ಸೊಳ್ಳೆಗಳ ಹಾವಳಿ ಮಿತಿ ಮೀರಿದೆ. ಸಾರ್ವಜನಿಕ ಸ್ಥಳಗಳು ಕಸದ ತೊಟ್ಟಿಯಾಗಿದ್ದು, ಕರೊನಾ ಇತರ ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಹೆಚ್ಚಾಗಿದೆ. ಕೂಡಲೇ ಸ್ವಚ್ಛತೆಗೆ ವಿಶೇಷ ಆದ್ಯತೆ ನೀಡಬೇಕೆಂದು ಅಜಯಕುಮಾರ್ ಸಲಹೆ ನೀಡಿದರು.

    ನಗರ ವ್ಯಾಪ್ತಿಯ ಸ್ಲಂ ಪ್ರದೇಶದಲ್ಲಿ ಕಳೆದ 10 ತಿಂಗಳಿಂದ ಕುಡಿವ ನೀರಿನ ಸಮಸ್ಯೆ ತಲೆದೋರಿದ್ದು, ಈ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದರೆ ಹಾರಿಕೆ ಉತ್ತರ ನೀಡುತ್ತಾರೆ. ತಕ್ಷಣ ಸಮಸ್ಯೆ ಪರಿಹಾರಕ್ಕೆ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಸ್ಲಂ ನಿವಾಸಿಗಳ ಜತೆಗೂಡಿ ನಗರಸಭೆಗೆ ಮುತ್ತಿಗೆ ಹಾಕಬೇಕಾಗುತ್ತದೆ ಎಂದು ಸಣ್ಣಪ್ಪ ಎಚ್ಚರಿಸಿದರು.

    ಶಂಶುನ್ನೀಸಾ ಮಾತನಾಡಿ, ಮಟನ್ ಮಾರುಕಟ್ಟೆ ಅಸ್ವಚ್ಛತೆ ಆಗರವಾಗಿದೆ. ಮಾಂಸದ ತ್ಯಾಜ್ಯವನ್ನು ಚರಂಡಿ, ರಸ್ತೆ ಎಲ್ಲೆಂದರಲ್ಲಿ ಎಸೆಯಲಾಗುತ್ತಿದೆ. ಇದರಿಂದ ಸಾಂಕ್ರಾಮಿಕ ರೋಗ ಹರಡುವ ಭೀತಿ ಇದ್ದು, ತಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

    ಬೀದಿ ನಳದ ನೀರು ಚರಂಡಿ ಪಾಲಾಗುತ್ತಿದೆ. ಈ ಬಗ್ಗೆ ನಗರಸಭೆ ಸಿಬ್ಬಂದಿ ಯಾವುದೇ ಕ್ರಮ ಕೈಗೊಂಡಿಲ್ಲವೆಂದು ಸದಸ್ಯೆ ಮಮತಾ ದೂರಿದರು.

    ಕಂದಾಯ ವಸೂಲಿ ಏಕೆ: ಸಿಬ್ಬಂದಿ ಕೊರತೆಯಿಂದ ಅಗತ್ಯ ಸೌಕರ್ಯ ಕಲ್ಪಿಸಲು ಸಾಧ್ಯವಾಗುತ್ತಿಲ್ಲ ಎಂದಾದರೆ, ಜನರಿಂದ ಕಂದಾಯ ಏಕೆ ವಸೂಲಿ ಮಾಡಬೇಕು. ಪೌರ ಕಾರ್ಮಿಕರು-ಅಗತ್ಯ ಸಿಬ್ಬಂದಿ ನೇಮಕ ವಿಚಾರವನ್ನು ಜಿಲ್ಲಾಧಿಕಾರಿ ಗಮನಕ್ಕೆ ತರಬೇಕೆಂದು ಸದಸ್ಯರು ತಾಕೀತು ಮಾಡಿದರು.

    ನಗರ ವ್ಯಾಪ್ತಿಯಲ್ಲಿ ಸಾರ್ವಜನಿಕ ಶೌಚಗೃಹ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕೆಂದು ಶಿವರಂಜನಿ ಒತ್ತಾಯಿಸಿದರು.

    ಮಮತಾ, ರಹಮತ್ ಉನ್ನೀಸಾ, ಅಜಯ್‌ಕುಮಾರ್, ಗುಂಡೇಶ್ ಕುಮಾರ್, ಮಹೇಶ್ ಪಲ್ಲವ, ಅನಿಲ್, ವೈ.ಪಿ.ಡಿ.ದಾದಾಪೀರ್, ಎಇಇ ಆನಂದ್, ಸುನೀಲ್, ಮಾಲತೇಶ್ ಇತರರಿದ್ದರು.

    ಭ್ರಷ್ಟಾಚಾರಕ್ಕೆ ಬ್ರೇಕ್ ಹಾಕಿ: ನಗರಸಭೆ ಕಚೇರಿಯಲ್ಲಿ ಇ-ಸ್ವತ್ತು ಸೇರಿದಂತೆ ಸಣ್ಣ ಕೆಲಸಕ್ಕೂ ಅಧಿಕಾರಿಗಳು ಲಂಚ ಕೇಳುತ್ತಿದ್ದು, ಭ್ರಷ್ಟಾಚಾರ ಮಿತಿ ಮೀರಿದೆ. ಸದಸ್ಯರ ಸಮಸ್ಯೆಗಳಿಗೂ ಮನ್ನಣೆ ಸಿಗುತ್ತಿಲ್ಲ ಎಂದು ಸದಸ್ಯರು ಅಳಲು ತೋಡಿಕೊಂಡರು. ಹಿರಿಯೂರಿನ ಗೋಪಾಲಪುರ ಬಡಾವಣೆಯಲ್ಲಿ ಕುಡಿವ ನೀರಿನ ಸಮಸ್ಯೆಯಿಂದ ಸರ್ಕಾರಿ ಶಾಲೆ ಮಕ್ಕಳ ಮಧ್ಯಾಹ್ನದ ಬಿಸಿಯೂಟಕ್ಕೆ ತೊಂದರೆ ಪಡುವಂತಾಗಿದೆ ಎಂದು ದಾದಾಪೀರ್ ದೂರಿದರು.

    ಸಿಬ್ಬಂದಿ ಕೊರತೆ ಡಿಸಿ ಗಮನಕ್ಕೆ: ನಗರಸಭೆಗೆ 116 ಪೌರ ಕಾರ್ಮಿಕರು ಅಗತ್ಯವಿದ್ದು, ಕೇವಲ 63 ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿದ್ದರಿಂದ ಸ್ವಚ್ಛತೆ, ಬೀದಿದೀಪ, ಕುಡಿವ ನೀರು ನಿರ್ವಹಣೆ ಕಷ್ಟವಾಗಿದೆ. ಈ ವಿಚಾರವನ್ನು ಜಿಲ್ಲಾಧಿಕಾರಿ ಗಮನಕ್ಕೆ ತರಲಾಗುವುದು ಎಂದು ನಗರಸಭೆ ಪೌರಾಯುಕ್ತ ಶಿವಪ್ರಸಾದ್ ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts