More

    ಹಳ್ಳಿಗಳ ಜಲಪಾತ್ರೆಗಳು ಖಾಲಿ ಖಾಲಿ

    ಖಂಡೇನಹಳ್ಳಿ ಬಸವರಾಜ್ ಹಿರಿಯೂರು: ತಾಲೂಕಿನ ಜನರ ಜೀವನಾಡಿ ವಾಣಿ ವಿಲಾಸ ಸಾಗರ ಜಲಾಶಯದ ನೀರಿನ ಮಟ್ಟ ನೂರು ಅಡಿ ತಲುಪಿದೆ. ಆದರೆ, ವಿವಿಧ ಹಳ್ಳಿಗಳಲ್ಲಿನ ಕೆರೆಗಳು ಮಾತ್ರ ನೀರಿಲ್ಲದೆ ಒಣಗಿವೆ.

    ತಾಲೂಕಿನ ಬಹುತೇಕ ಕೆರೆಗಳು ಮಳೆಯಾಶ್ರಿತವಾಗಿದ್ದು, ಯಾವುದೇ ಶಾಶ್ವತ ನೀರಾವರಿ ಸೌಲಭ್ಯವಿಲ್ಲ. ಮಳೆ ಕೊರತೆ ಹಳ್ಳ-ಕೊಳ್ಳ ಹರಿಯದ ಕಾರಣ ಕೆರೆಗಳಲ್ಲಿ ಹನಿ ನೀರಿಲ್ಲದೆ ಜನ-ಜಾನುವಾರು ಕುಡಿವ ನೀರಿಗೆ ಪರಿತಪಿಸುವಂತಾಗಿದೆ, ಅಂತರ್ಜಲ ಅಪಾಯದ ಮಟ್ಟ ತಲುಪಿರುವುದು ಕೊಳವೆ ಬಾವಿ ಆಶ್ರಿತ ಕೃಷಿ ಚಟುವಟಿಕೆಗಳು ಸ್ಥಗಿತವಾಗಿದೆ.

    ಸಕ್ಕರ, ಧರ್ಮಪುರ, ಹರಿಯಬ್ಬೆ, ಚಿಲ್ಲಹಳ್ಳಿ, ಐಮಂಗಲ, ಬೇತೂರು, ರಂಗನೇಹಳ್ಳಿ, ಅಬ್ಬಿನಹೊಳೆ, ಈಶ್ವರಗೆರೆ, ಬೆನಕನಹಳ್ಳಿ, ಹೊಸಕೆರೆ, ಮದ್ದಿಹಳ್ಳಿ, ಹಲಗಲದ್ದಿ ಇತರ ಗ್ರಾಮದಲ್ಲಿ ಸಾವಿರ ಅಡಿ ಕೊಳವೆ ಬಾವಿ ಕೊರೆದರೂ ಹನಿ ನೀರಿಲ್ಲ. ಕೊಳವೆ ಬಾವಿಯಲ್ಲಿ ಬರುವ0 ಅಲ್ಪ-ಸ್ವಲ್ಪ ನೀರನ್ನು ಬಳಸಿಕೊಂಡು ರೈತರು ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದಾರೆ.

    ವೇದಾವತಿ ನದಿ ನೀರು ಸದ್ಬಳಕೆಯಾಗಲಿ: ಮಳೆಗಾಲದಲ್ಲಿ ಸುವರ್ಣಮುಖಿ-ವೇದಾವತಿ ನದಿಗಳು ತಾಲೂಕಿನಲ್ಲಿ ಹರಿದು, ಚಳ್ಳಕೆರೆ ತಾಲೂಕಿನ ಮೂಲಕ ಆಂಧ್ರಪ್ರದೇಶ ಸೇರುತ್ತಿವೆ. ಈಗಾಗಲೇ ನದಿ ಪಾತ್ರದಲ್ಲಿ ಸರಣಿ ಚೆಕ್ ಡ್ಯಾಂ, ಬ್ಯಾರೇಜ್ ನಿರ್ಮಿಸಿರುವುದು ನದಿ ಪಾತ್ರದ ಜನರಿಗೆ ಅನುಕೂಲವಾಗಿದ್ದು, ಹೂವಿನಹೊಳೆ ಗ್ರಾಮದ ವೇದಾವತಿ ನದಿ ಪಾತ್ರದಲ್ಲಿ ಬ್ಯಾರೇಜ್ ನಿರ್ಮಿಸಿ ಮಳೆಗಾಲದಲ್ಲಿ ಹರಿವ ನದಿ ನೀರನ್ನು ಫೀಡರ್ ನಾಲೆ ನಿರ್ಮಿಸಿ ಧರ್ಮಪುರಕ್ಕೆ ಹರಿಸಬಹುದಾಗಿದ್ದು, ಇದರ ಬಗ್ಗೆ ನೀರಾವರಿ ಇಲಾಖೆ, ಸ್ಥಳೀಯ ಶಾಸಕರು ಗಮನ ಹರಿಸಬೇಕಾಗಿದೆ.

    ಭದ್ರಾ ಮೇಲ್ದಂಡೆ ಯೋಜನೆ ತುಮಕೂರು ನಾಲೆಯಿಂದ ಶಿರಾ ತಾಲೂಕಿನ 43 ಕೆರೆಗಳನ್ನು ತುಂಬಿಸಿದ ನಂತರ ಧರ್ಮಪುರಕ್ಕೆ ನೀರು ಹರಿಸುವ ಯೋಜನೆ ರೂಪಿಸಲಾಗಿದೆ. ಇದು ಅವೈಜ್ಞಾನಿಕವಾಗಿದ್ದು, 200-250 ಕಿ.ಮೀ ದೂರದಿಂದ ನೀರು ಹರಿಸುವುದು ಕಷ್ಟ-ಸಾಧ್ಯವಾಗಿದೆ. ವಿವಿ ಸಾಗರಕ್ಕೆ ಭದ್ರಾ ನೀರು ಲಭ್ಯವಾಗುವುದರಿಂದ, ಮಳೆಗಾಲದಲ್ಲಿ ವಿವಿ ಸಾಗರದಿಂದ ವೇದಾವತಿ ನದಿಗೆ ನೇರ ನೀರು ಹರಿಸಿ, ಬ್ಯಾಡರಹಳ್ಳಿ-ಹೂವಿನಹೊಳೆ ಬಳಿ ಬ್ಯಾರೇಜ್ ನಿರ್ಮಿಸಿ ಧರ್ಮಪುರ, ಈಶ್ವರಗೆರೆ, ಅಬ್ಬಿನಹೊಳೆ, ಕೋಡಿಹಳ್ಳಿ, ವಿ.ಕೆ.ಗುಡ್ಡ, ಶ್ರವಣಗೆರೆ ಇತರ ಕೆರೆಗಳಿಗೆ ನೀರು ತುಂಬಿಸಬಹುದು ಎನ್ನುತ್ತಾರೆ ರೈತರು.

    ಕನಸಾಗೇ ಉಳಿದ ಫೀಡರ್ ನಾಲೆ: ಶತಮಾನದ ಇತಿಹಾಸವಿರುವ ಧರ್ಮಪುರ ಕೆರೆ ರೈತರ ಜೀವನಾಡಿಯಾಗಿದ್ದು, ಮಳೆಯಿಲ್ಲದೆ ದಶಕದಿಂದ ಕೆರೆಗೆ ಹನಿ ನೀರು ಹರಿದಿಲ್ಲ. ಶಾಶ್ವತ ನೀರಾವರಿ ಸೌಲಭ್ಯ ಕಲ್ಪಿಸುವಂತೆ ಆಗ್ರಹಿಸಿ 1919ರಿಂದ ಹೋರಾಟಗಳು ನಡೆಯುತ್ತಿದ್ದು, ಸರ್ಕಾರ-ಜನಪ್ರತಿನಿಧಿಗಳ ಸ್ಪಂದನೆ ಮಾತ್ರ ಶೂನ್ಯ.

    ನಮ್ಮ ರಾಜ್ಯಕ್ಕೆ ಏಕೆ ಅಸಾಧ್ಯ: ನಮ್ಮ ರಾಜ್ಯದ ತುಂಗಭದ್ರಾ ಜಲಾಶಯದ ನೀರನ್ನು ಆಂಧ್ರಪ್ರದೇಶ ಸರ್ಕಾರದ ಇಚ್ಛಾಶಕ್ತಿ ಫಲವಾಗಿ 1500ಕ್ಕೂ ಹೆಚ್ಚು ಕೆರೆಗಳಿಗೆ ನೀರು ತುಂಬಿಸಿದೆ. ನಮ್ಮಲ್ಲಿ ವಿವಿ ಸಾಗರ-ಗಾಯತ್ರಿ ಜಲಾಶಯಗಳಿದ್ದರೂ ಧರ್ಮಪುರ-ಐಮಂಗಲ ಹೋಬಳಿಗೆ ನೀರಾವರಿ ಸೌಲಭ್ಯ ಕಲ್ಪಿಸಲು ಸಾಧ್ಯವಾಗಿಲ್ಲ, ನಮ್ಮ ಜಲಸಂಪತ್ತನ್ನು ಬೇರೆಯವರ ಚಾಣಕ್ಷತೆಯಿಂದ ಬಳಸಿಕೊಳ್ಳುತ್ತಿದ್ದರು ನಮ್ಮ ರಾಜಕಾರಣಿಗಳು ಮಾತ್ರ ನೀರಾವರಿ ವಿಚಾರಗಳನ್ನು ಚುನಾವಣೆಗೆ ಸೀಮಿತಗೊಳಿಸಿರುವುದು ದುರಂತ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts