More

    ಶೇಂಗಾ ಬೆಳೆಗೆ ವಿಮೆ ನೀಡಲು ಆಗ್ರಹ

    ಹಿರಿಯೂರು: ಪ್ರಕೃತಿ ವಿಕೋಪ-ಮಳೆ ಕೊರತೆಯಿಂದ ಶೇಂಗಾ ಬೆಳೆ ಹಾನಿಯಾಗಿದ್ದು, ಅರ್ಹ ರೈತರಿಗೆ ಬೆಳೆವಿಮೆಯಡಿ ಸೂಕ್ತ ಪರಿಹಾರ ವಿತರಿಸಲು ಕ್ರಮ ಕೈಗೊಳ್ಳಬೇಕೆಂದು ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಅವರಿಗೆ ರೈತರು ಮನವಿ ಸಲ್ಲಿಸಿದರು.

    ತಾಲೂಕಿನ ಧರ್ಮಪುರ ಹೋಬಳಿ ಶೇಂಗಾ ಬೆಳೆಗಾರರು ಬೆಂಗಳೂರಿನ ಕೇಂದ್ರ ಸಚಿವರ ಕಚೇರಿಗೆ ಭಾನುವಾರ ಭೇಟಿ ನೀಡಿ, ಬೆಳೆಗಾರರ ಸಂಕಷ್ಟದ ಬಗ್ಗೆ ಸಚಿವರಲ್ಲಿ ಅಳಲು ತೋಡಿಕೊಂಡರು.

    ಶೇಂಗಾ ಜಿಲ್ಲೆಯ ಪ್ರಧಾನ ಬೆಳೆಯಾಗಿದ್ದು, ಸಕಾಲಕ್ಕೆ ಮಳೆ ಇಲ್ಲದೆ, ಹವಾಮಾನ ವೈಪರಿತ್ಯ, ರೋಗಬಾಧೆ ಕಾರಣ ಸತತ ಐದಾರು ವರ್ಷದಿಂದ ಬೆಳೆ ಕೈಸೇರಿಲ್ಲ. ಹೀಗಾಗಿ ಬೆಳೆಗಾರರು ತೀವ್ರ ಸಂಕಷ್ಟದಲ್ಲಿದ್ದಾರೆ. ಕೃಷಿ, ಕಂದಾಯ ಇಲಾಖೆ ಅಧಿಕಾರಿಗಳು-ವಿಮಾ ಕಂಪನಿಯ ಅವೈಜ್ಞಾನಿಕ ವರದಿಯಿಂದ ಬೆಳೆ ವಿಮೆ ಪರಿಹಾರದ ಹಣ ಕೂಡ ರೈತರಿಗೆ ಸಿಕ್ಕಿಲ್ಲ. ಸ್ಥಳೀಯ ಶಾಸಕರು, ಜಿಲ್ಲಾಧಿಕಾರಿ, ತಹಸೀಲ್ದಾರ್, ಕೃಷಿ ಇಲಾಖೆ ಅಧಿಕಾರಿಗಳ ಬಳಿ ಸಮಸ್ಯೆ ಹೇಳಿದರೆ ಯಾರೊಬ್ಬರೂ ಸ್ಪಂದಿಸುತ್ತಿಲ್ಲ ಎಂದು ದೂರಿದರು.

    2017-18, 2018-19ನೇ ಸಾಲಿನ ಮುಂಗಾರು ಬೆಳೆ ವಿಮೆ ಯೋಜನೆಯಡಿ ಶೇಂಗಾ ಬೆಳೆಗಾರರಿಗೆ ಬಿಡಿಗಾಸು ಸಿಕ್ಕಿಲ್ಲ. ಹಿರಿಯೂರು ತಾಲೂಕನ್ನು ಸತತ ಎರಡು ವರ್ಷ ಬರಪೀಡಿತ ಪ್ರದೇಶ ಎಂದು ಘೋಷಿಸಿದರೂ ಪರಿಹಾರ ಮಾತ್ರ ಶೂನ್ಯ. ಈ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ಕೋರಿದರು.

    ವಿಮಾ ಕಂಪನಿಗೆ ಪತ್ರ: ಶೇಂಗಾ ಬೆಳೆ ವಿಮೆ ಪಾವತಿಸಿರುವ ರೈತರಿಗೆ ತಕ್ಷಣ ವಿಮೆ, ಪರಿಹಾರದ ಹಣ ಪಾವತಿಸುವಂತೆ ಸಂಬಂಧಿಸಿದ ವಿಮಾ ಕಂಪನಿಗೆ ಸಚಿವರು ಪತ್ರದ ಮೂಲಕ ಸೂಚನೆ ನೀಡಿದ್ದಾರೆ ಎಂದು ರೈತ ಮುಖಂಡ ಶ್ರವಣಗೆರೆ ಮಂಜುನಾಥ್ ತಿಳಿಸಿದರು.
    ರೈತ ಮುಖಂಡರಾದ ಹೊನ್ನೇಶ್ವರಪ್ಪ, ಗೋವಿಂದರಾಯ, ಜಯರಾಮಪ್ಪ, ರಂಗಸ್ವಾಮಿ, ಕೃಷ್ಣಪ್ಪ, ತಿಪ್ಪೇಸ್ವಾಮಿ ಇತರರಿದ್ದರು.

    ದಾಳಿಂಬೆ ಬೆಳೆಗಾರರಿಗೆ ಬಂತು ವಿಮೆ ಹಣ: ಈಚೆಗೆ ತಾಲೂಕಿನ ದಾಳಿಂಬೆ ಬೆಳೆಗಾರರು ವಿಮೆ, ಪರಿಹಾರದ ಹಣ ತಲುಪಿಲ್ಲ ಎಂದು ಸಚಿವ ಡಿ.ವಿ.ಸದಾನಂದ ಗೌಡ ಅವರ ಬಳಿ ಮನವಿ ಮಾಡಿದ್ದರು. ತಕ್ಷಣ ಸ್ಪಂದಿಸಿದ ಸಚಿವರು ವಿಮಾ ಕಂಪನಿಗೆ ಪತ್ರ ಬರೆದು, ಅರ್ಹ ರೈತರ ಖಾತೆಗೆ ಪರಿಹಾರದ ಹಣ ಜಮೆಯಾಗಲು ಕ್ರಮ ಕೈಗೊಂಡಿದ್ದು ರೈತರಲ್ಲಿ ಖುಷಿ ತಂದಿದೆ ಎಂದು ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts