More

    ನೀರಾವರಿ ಕಚೇರಿಗೆ ರೈತರ ಮುತ್ತಿಗೆ

    ಹಿರಿಯೂರು: ವಿವಿ ಸಾಗರ ಜಲಾಶಯದಿಂದ ಚಳ್ಳಕೆರೆ-ಮೊಳಕಾಲ್ಮೂರು ತಾಲೂಕಿಗೆ ಹೆಚ್ಚುವರಿ ನೀರು ಹರಿಸುತ್ತಿರುವುದನ್ನು ವಿರೋಧಿಸಿ ರೈತ ಸಂಘದ ನೇತೃತ್ವದಲ್ಲಿ ನೂರಾರು ರೈತರು ನೀರಾವರಿ ಕಚೇರಿಗೆ ಮುತ್ತಿಗೆ ಹಾಕಿ ಗುರುವಾರ ಪ್ರತಿಭಟನೆ ನಡೆಸಿದರು.

    ಸರ್ಕಾರ ನಿಗದಿಪಡಿಸಿದ ಪ್ರಮಾಣಕ್ಕಿಂತ ಹೆಚ್ಚು ನೀರನ್ನು ನದಿಗೆ ಹರಿಸಲಾಗಿದೆ. ಚಳ್ಳಕೆರೆ, ಮೊಳಕಾಲ್ಮೂರು ತಾಲೂಕಿಗೆ ಹಂಚಿಕೆಯಾಗಿದ್ದ 0.75 (0.25+0.25+0.25) ಟಿಎಂಸಿ ಅಡಿ ನೀರನ್ನು ನದಿಗೆ ಹರಿಸಿದ್ದರೂ ನೀರಾವರಿ ಸಚಿವ, ಜಿಲ್ಲಾ ಸಚಿವರ ಮೌಖಿಕ ಆದೇಶದ ಮೇರೆಗೆ ಹೆಚ್ಚುವರಿ ನೀರು ಹರಿಸಲಾಗುತ್ತಿದೆ ಎಂದು ರೈತರು ದೂರಿದರು.

    ಅಧಿಕಾರಿಗಳಿಗೆ ತರಾಟೆ: ನೀರಾವರಿ ಇಲಾಖೆ ಕಚೇರಿ ಆವರಣದಲ್ಲಿ ಜಮಾಯಿಸಿದ ರೈತರು ನೀರಾವರಿ ಇಲಾಖೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ತಕ್ಷಣ ನೀರು ನಿಲ್ಲಿಸುವಂತೆ ಆಗ್ರಹಿಸಿದರು.

    ಅಧಿಕಾರಿಗಳ ಅಸಹಾಯಕತೆ: ಸರ್ಕಾರದ ಆದೇಶದಂತೆ ನೀರು ಹರಿಸಲಾಗುತ್ತಿದ್ದು, ಇದರಲ್ಲಿ ನಮ್ಮ ಪಾತ್ರ ಇಲ್ಲ. ಸರ್ಕಾರ ಹೇಳಿದರೆ ಇಂದೇ ನೀರು ಸ್ಥಗಿತಗೊಳಿಸಲಾಗುವುದು. ನೀವು ಸರ್ಕಾರ ಅಥವಾ ನೀರಾವರಿ ಸಚಿವರ ಜತೆ ಮಾತನಾಡಿ, ಇಲ್ಲಿ ಪ್ರತಿಭಟನೆ ನಡೆಸುವುದರಿಂದ ಏನು ಪ್ರಯೋಜನ ಇಲ್ಲ ಎಂದು ನೀರಾವರಿ ಇಲಾಖೆ ಅಧಿಕಾರಿಗಳು ರೈತರ ಮನವೊಲಿಸಲು ಪ್ರಯತ್ನಿಸಿದರು.

    ಪ್ರತಿಭಟನೆ ವೇಳೆ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಅವರಿಗೆ ಪೋನ್ ಮಾಡಿದರೂ ಸಂಪರ್ಕಕ್ಕೆ ಸಿಗಲಿಲ್ಲ ಎಂದು ರೈತರು ದೂರಿದರು. ಸರ್ಕಾರದ ಮೇಲೆ ಒತ್ತಡ ಹೇರಿ ನೀರಿನ ವಿಷಯದಲ್ಲಿ ತಾಲೂಕಿನ ಹಿತ ಕಾಯಲು ಸಾಧ್ಯವಾಗದಿದ್ದರೆ ರಾಜೀನಾಮೆ ನೀಡುವುದು ಒಳಿತು ಎಂದು ರೈತರು ಹೇಳಿದರು.

    ರೈತ ಸಂಘದ ಅಧ್ಯಕ್ಷ ಕೆ.ಟಿ.ತಿಪ್ಪೇಸ್ವಾಮಿ, ಎಪಿಎಂಸಿ ಅಧ್ಯಕ್ಷ ಜಗನ್ನಾಥ್, ರೈತ ಮುಖಂಡರಾದ ಸಿದ್ದರಾಮಣ್ಣ, ಕಸವನಹಳ್ಳಿ ರಮೇಶ್, ಶಿವಕುಮಾರ್, ವೀರಣ್ಣಗೌಡ, ರಾಮಣ್ಣ ಇತರರಿದ್ದರು.

    ಸಿಪಿಐ ರಾಘವೇಂದ್ರ ನೇತೃತ್ವದಲ್ಲಿ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿತ್ತು. ತಹಸೀಲ್ದಾರ್ ಸತ್ಯನಾರಾಯಣ, ಡಿವೈಎಸ್ಪಿ ರಮೇಶ್ ರೈತರ ಪ್ರತಿಭಟನಾ ನಿರತ ಸ್ಥಳಕ್ಕೆ ಭೇಟಿ ನೀಡಿದರು.

    ಗಂಗಾಪೂಜೆಗೆ ಹೆಚ್ಚುವರಿ ನೀರು: ಜಿಲ್ಲಾ ಉಸ್ತುವಾರಿ ಸಚಿವ ಶ್ರೀರಾಮುಲು ಭಾನುವಾರ ಮೊಳಕಾಲ್ಮೂರು ತಾಲೂಕಿನಲ್ಲಿ ವೇದಾವತಿ ನದಿಗೆ ಗಂಗಾ ಪೂಜೆ ಕಾರ್ಯ ಹಮ್ಮಿಕೊಂಡಿರುವ ಕಾರಣ ಹೆಚ್ಚುವರಿ ನೀರು ಹರಿಸಲಾಗುತ್ತಿದೆ ಎಂದು ದೂರಲಾಗಿದೆ.

    ಅಚ್ಚುಕಟ್ಟು ಪ್ರದೇಶಕ್ಕೆ ನೀರು ಹರಿಸಿ: ವಿವಿ ಸಾಗರದಿಂದ 1 ಟಿಎಂಸಿ ಅಡಿ ನೀರನ್ನು ಮಾ. 6ರಿಂದ 30 ದಿನಗಳವರೆಗೆ ಅಚ್ಚುಕಟ್ಟು ಪ್ರದೇಶಕ್ಕೆ ಹರಿಸಿದ್ದು, ಎಡ-ಬಲ ದಂಡೆ ನಾಲೆ ವ್ಯಾಪ್ತಿಯ ಕೊನೆಯವರೆಗೆ ನೀರು ತಲುಪುವ ಮುನ್ನವೇ ನೀರು ಸ್ಥಗಿತಗೊಳಿಸಲಾಗಿದೆ. ನೀರಿಲ್ಲದೆ ತೋಟಗಾರಿಕೆ ಬೆಳೆಗಳು ಒಣಗಿವೆ, ಜನ-ಜಾನುವಾರು ಕುಡಿವ ನೀರಿಗೆ ಪರಿತಪಿಸುವಂತಾಗಿದೆ. ಅಚ್ಚುಕಟ್ಟು ಪ್ರದೇಶಕ್ಕೆ ಹೆಚ್ಚುವರಿ ನೀರು ಹರಿಸಲು ಸಾಧ್ಯವಿಲ್ಲ ಎಂದಾದರೆ, ಚಳ್ಳಕೆರೆ-ಮೊಳಕಾಲ್ಮೂರು ತಾಲೂಕಿಗೆ ಸರ್ಕಾರ ನಿಗದಿಪಡಿಸಿರುವ ಪ್ರಮಾಣಕ್ಕಿಂತ ಹೆಚ್ಚು ನೀರು ಹರಿಸುತ್ತಿರುವುದು ಯಾವ ನ್ಯಾಯ? ಎಂದು ರೈತರು ಅಧಿಕಾರಿಗಳನ್ನು ಪ್ರಶ್ನಿಸಿದರು.

    ಗೇಜ್ ಅಳವಡಿಸಿಲ್ಲ: ವಿವಿ ಸಾಗರದಿಂದ ಚಳ್ಳಕೆರೆ ತಾಲೂಕಿಗೆ ನೀರು ಹರಿಸಲು ಚಾಲನೆ ನೀಡಲು ಆಗಮಿಸಿದ್ದ ನೀರಾವರಿ ಸಚಿವ ರಮೇಶ್ ಜಾರಕಿಹೊಳಿ ಜಲಾಶಯದಿಂದ ಎಷ್ಟು ಪ್ರಮಾಣದಲ್ಲಿ ನೀರು ಹರಿಸಲಾಗುತ್ತದೆ ಎಂಬುದರ ಬಗ್ಗೆ ಸ್ಪಷ್ಟನೆ ನೀಡಲು ನಿರಾಕರಿಸಿದ್ದರು. 0.25 ಟಿಎಂಸಿ ಅಡಿ ನೀರು ಚಳ್ಳಕೆರೆ ಗಡಿ ಪ್ರವೇಶಿಸಿಲ್ಲದ ಕಾರಣ ಮತ್ತೆ 0.25 ಟಿಎಂಸಿ ಅಡಿ ನೀರು ಹರಿಸಲು ಸರ್ಕಾರ ಆದೇಶಿಸಿದ ಸಂದರ್ಭದಲ್ಲಿ ಹಿರಿಯೂರು-ಚಳ್ಳಕೆರೆ ಗಡಿಯಲ್ಲಿ ಗೇಜ್ ಅಳವಡಿಸಿ 0.25 ಟಿಎಂಸಿ ಅಡಿ ನೀರನ್ನು ಲೆಕ್ಕ ಹಾಕುವಂತೆ ಸೂಚಿಸಲಾಗಿತ್ತು. ಈ ಬಗ್ಗೆ ಅಧಿಕಾರಿಗಳು ಸ್ಪಷ್ಟನೆ ನೀಡಲು ನಿರಾಕರಿಸಿದರು. ಈಗಾಗಲೇ 1.32 ಟಿಎಂಸಿ ಅಡಿ ನೀರನ್ನು ವೇದಾವತಿ ನದಿಗೆ ಹರಿಸಲಾಗಿದ್ದು, 0.15 ಟಿಎಂಸಿ ಅಡಿ ನೀರನ್ನು 10-12 ದಿನದವರೆಗೆ ಹರಿಸಲಾಗುತ್ತದೆ ಎಂದು ನೀರಾವರಿ ಇಲಾಖೆ ಅಧಿಕಾರಿಗಳು ಸ್ಪಷ್ಟಪಡಿಸಿದರು.

    ಅಧಿಕಾರಿಗಳಿಗೆ ಸಚಿವರ ಭಯ: ಜಲಾಶಯದ ನೀರಿನ ಪ್ರಮಾಣ, ಎಷ್ಟು ನೀರು ಹರಿಸಲಾಗುತ್ತಿದೆ, ಗಡಿಯಲ್ಲಿ ಏಕೆ ಗೇಜ್ ಅಳವಡಿಸಿಲ್ಲ, ಸರ್ಕಾರದ ಆದೇಶಕ್ಕಿಂತ ಏಕೆ ಹೆಚ್ಚುವರಿ ನೀರು ಹರಿಸಲಾಗುತ್ತಿದೆ, ನಮ್ಮ ಅಚ್ಚುಕಟ್ಟು ಪ್ರದೇಶಕ್ಕೆ ಹೆಚ್ಚುವರಿ ನೀರು ಹರಿಸಲು ಏಕೆ ಸಾಧ್ಯವಿಲ್ಲ? ಎಂದು ರೈತರ ಪ್ರಶ್ನೆಗಳಿಗೆ ಉತ್ತರಿಸಲು ಅಧಿಕಾರಿಗಳ ನಿರಾಕರಿಸಿದರು. ನೀರು ಸ್ಥಗಿತಗೊಳಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ಈಗಾಗಲೇ ನೀರಾವರಿ ಇಲಾಖೆ ಅಧಿಕಾರಿಯೊಬ್ಬರು ಅಮಾನತುಗೊಂಡಿದ್ದು, ಇದಕ್ಕೆ ಹೆದರಿ ನೀವು ಮಾಹಿತಿ ನೀಡುತ್ತಿಲ್ಲ ಎಂದು ಅಧಿಕಾರಿಗಳನ್ನು ರೈತರು ತರಾಟೆಗೆ ತೆಗೆದುಕೊಂಡರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts