More

    ವೇದಾವತಿ ನದಿಗೆ ನೀರು; ರೈತರಿಗೆ ಡಬಲ್ ಖುಷಿ

    ಖಂಡೇನಹಳ್ಳಿ ಬಸವರಾಜ್ ಹಿರಿಯೂರು: ವಿ.ವಿ.ಸಾಗರ ಜಲಾಶಯದಿಂದ ವೇದಾವತಿ ನದಿ ಪಾತ್ರಕ್ಕೆ ನೀರು ಹರಿಸುತ್ತಿರುವುದು ನದಿ ಪಾತ್ರದ ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ.

    ರೈತರ ಹೋರಾಟದ ಫಲವಾಗಿ ಮಾ. 6ರಿಂದ ಒಂದು ತಿಂಗಳ ಕಾಲ ಎಡ-ಬಲ ದಂಡೆ ನಾಲೆಗಳಿಗೆ ನೀರು ಹರಿಸಿದ್ದು, ಈಗ ಮತ್ತೆ ಅದೃಷ್ಟ ಎಂಬಂತೆ ವೇದಾವತಿ ನದಿಗೆ ನೀರು ಹರಿಸುತ್ತಿರುವುದು ರೈತರಲ್ಲಿ ಡಬಲ್ ಖುಷಿ ತಂದಿದೆ. ಅಚ್ಚುಕಟ್ಟು ಪ್ರದೇಶದಲ್ಲಿ ಕೃಷಿ ಚಟುವಟಿಕೆಗಳು ಗರಿಗೆದರಿವೆ. ಬರಿದಾಗಿದ್ದ ಅಂತರ್ಜಲ ವೃದ್ಧಿಗೂ ಸಹಕಾರವಾಗಲಿದೆ.

    ವಿ.ವಿ.ಸಾಗರ ಜಲಾಶಯದ ನೀರು ಕಾತ್ರೀಕೇನಹಳ್ಳಿ ಬ್ಯಾರೇಜ್ ಮೂಲಕ ಹಿರಿಯೂರು ನಗರ, ಸಮುದ್ರದಹಳ್ಳಿ, ಕಸವನಹಳ್ಳಿ, ಬ್ಯಾಡರಹಳ್ಳಿ, ಶಿಡ್ಲಯ್ಯನ ಕೋಟೆ ಮೂಲಕ ಚಳ್ಳಕೆರೆ ತಾಲೂಕಿನ ಪರಶುರಾಮಪುರ ಹೋಬಳಿ ತಲುಪಲಿದೆ. ನದಿ ಪಾತ್ರದ ಜಲ ಚರಗಳು, ಪ್ರಾಣಿ, ಪಕ್ಷಿ ಸಂಕಲಕ್ಕೂ ವರದಾನವಾಗಲಿದೆ. ನದಿ ಪಾತ್ರದುದ್ದಕ್ಕೂ ಚೆಕ್ ಡ್ಯಾಂ ಕಂ ಬ್ಯಾರೇಜ್ ಗಳು ತುಂಬಿ ಮಲೆ ನಾಡಿನ ವಾತಾವರಣ ನಿರ್ಮಾಣವಾಗಲಿದೆ, ಭೂಮಿ ಅಚ್ಚ ಹಸಿರಾಗಲಿದೆ.

    ಕ್ಷೇತ್ರದ ರಾಜಕಾರಣಿಗಳಲ್ಲಿ ಇಚ್ಛಾಶಕ್ತಿ ಕೊರತೆ: ವಿ.ವಿ.ಸಾಗರ-ಗಾಯತ್ರಿ ಜಲಾಶಯ ಹಿರಿಯೂರು ತಾಲೂಕಿಗೆ ಪ್ರಕೃತಿ ಕೊಟ್ಟಿರುವ ವರ. ಎರಡು ಜಲಾಶಯ ನಿರ್ಮಾಣವಾಗಿ ಶತಮಾನ ಕಳೆದರು, ತಾಲೂಕಿಗೆ ಪೂರ್ಣ ಪ್ರಮಾಣದಲ್ಲಿ ನೀರಾವರಿ ಸೌಲಭ್ಯ ಕಲ್ಪಿಸಲು ರಾಜಕಾರಣಿಗಳು ಇಚ್ಛಾಶಕ್ತಿ ಪ್ರದರ್ಶಿಸಿಲ್ಲ. ಧರ್ಮಪುರ-ಐಮಂಗಲ ಹೋಬಳಿಯ ಜನ-ಜಾನುವಾರು ಹನಿ ನೀರಿಗೂ ಪರಿತಪಿಸುವಂತಾಗಿದೆ.

    ಚಳ್ಳಕೆರೆ ಶಾಸಕ ಹಿರಿಯೂರು ರಾಜಕಾರಣಕ್ಕೆ ಮಾದರಿ ಆಗಲಿ: ಚಳ್ಳಕೆರೆ ಶಾಸಕ ಟಿ.ರಘೂಮೂರ್ತಿ ಪ್ರಯತ್ನದ ಫಲ ಚಳ್ಳಕೆರೆ-ಪರುಶುರಾಮಪುರ ಹೋಬಳಿಯ ಎಲ್ಲ ಹಳ್ಳಿಗಳಿಗೂ ಶಾಶ್ವತ ಕುಡಿವ ನೀರಾವರಿ ಸೌಲಭ್ಯ ಸಿಗಲಿದೆ. ಆದರೆ, ಧರ್ಮಪುರ ಕೆರೆಗೆ ನೀರು ಹರಿಸುವಂತೆ ಒತ್ತಾಯಿಸಿ ರೈತರ ಹೋರಾಟ ನೂರು ವರ್ಷ ಕಳೆದರು ಜನಪ್ರತಿನಿಧಿಗಳ ಸ್ಪಂದನೆ ಮಾತ್ರ ಶೂನ್ಯ ಎಂಬುದು ರೈತ ನಾಯಕರ ಆರೋಪ.

    ಮಾಜಿ ಸಚಿವ ಎಚ್.ಏಕಾಂತಯ್ಯ ಹೇಳಿಕೆ: ಆಮೆ ಗತಿಯಲ್ಲಿ ಸಾಗುತ್ತಿರುವ ಭದ್ರಾ ಮೇಲ್ದಂಡೆ ಯೋಜನೆ ಕಾಲಮಿತಿಯಲ್ಲಿ ಪೂರ್ಣಗೊಳ್ಳುವ ಭರವಸೆ ಇಲ್ಲ. ಧರ್ಮಪುರ-ಐಮಂಗಲ ಹೋಬಳಿ ಜನ ಹನಿ ನೀರಿಗೂ ಪರಿತಪಿಸುವಂತಾಗಿದೆ. ಜನಪ್ರತಿನಿಧಿಗಳು-ಅಧಿಕಾರಿಗಳಿಗೆ ಜನರ ಬಗ್ಗೆ ನೈಜ ಕಾಳಜಿ ಇರಬೇಕು.

    ಮಾಜಿ ಶಾಸಕ ಮಸ್ಕಲ್ ರಾಮಯ್ಯ ಹೇಳಿಕೆ: ಹಿರಿಯೂರು ತಾಲೂಕಿನ ಪರಿಸ್ಥಿತಿ ದೀಪದ ಕೆಳಗಿನ ಕತ್ತಲಿನಂತೆ, ಕುಡಿವ ನೀರಿಗೆ ದೊಡ್ಡ ಮಟ್ಟದಲ್ಲಿ ಜನರ ಹೋರಾಟ ರೂಪುಗೊಳ್ಳಬೇಕು. ಶಾಶ್ವತ ನೀರಾವರಿ ಸೌಲಭ್ಯಕ್ಕೆ ಶಾಸಕರು ಇಚ್ಛಾಶಕ್ತಿ ಪ್ರದರ್ಶಿಸಬೇಕು, ನಮ್ಮ ಬೆಂಬಲ ಇರಲಿದೆ.

    ರೈತ ಮುಖಂಡ ಜಿ.ಪ್ರೇಮ್‌ಕುಮಾರ್ ಹೇಳಿಕೆ: ವಿವಿ ಸಾಗರ-ಗಾಯತ್ರಿ ಜಲಾಶಯ ತಾಲೂಕಿಗೆ ಪ್ರಕೃತಿ ಕೊಟ್ಟಿರುವ ವರ. ನಮ್ಮಲ್ಲಿ ಜಲಸಂಪನ್ಮೂಲ ಇದ್ದರು ಸದ್ಬಳಕೆ ಮಾಡಿಕೊಳ್ಳಲು ವಿಫಲವಾಗಿದ್ದು, ಚಳ್ಳಕೆರೆ ಶಾಸಕರ ಇಚ್ಛಾಶಕ್ತಿ, ಬದ್ಧತೆ, ನಮ್ಮ ರಾಜಕಾರಣಿಗಳು ಪ್ರದರ್ಶಿಸಬೇಕು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts