More

    ಸರ್ಕಾರಗಳ ನಿರ್ಲಕ್ಷೃ, ಶಾಲೆಗಳಿಗೆ ಕುತ್ತು

    ಹಿರಿಯೂರು; ಸರ್ಕಾರಗಳ ನಿರ್ಲಕ್ಷ್ಯ ಧೋರಣೆಯಿಂದ ಇಂದು ಸರ್ಕಾರಿ ಶಾಲೆಗಳು ಮುಚ್ಚುವ ಹಂತ ತಲುಪಿರುವುದು ಬೇಸರದ ಸಂಗತಿ ಎಂದು ಶಾಸಕಿ ಕೆ.ಪೂರ್ಣಿಮಾ ಶ್ರೀನಿವಾಸ್ ಹೇಳಿದರು.

    ನಗರದ ಬಸವರಾಜ್ ವಿದ್ಯಾಸಂಸ್ಥೆ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಶೈಕ್ಷಣಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

    ಪಾಲಕರ ಖಾಸಗಿ ಶಾಲೆಗಳ ವ್ಯಾಮೋಹದಿಂದ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾಗಿದ್ದು, ಇವುಗಳಿಗೆ ಅಗತ್ಯ ಸೌಕರ್ಯ ಕಲ್ಪಿಸುವಲ್ಲಿ ಎಲ್ಲ ಸರ್ಕಾರಗಳು ವಿಫಲವಾಗಿವೆ ಎಂದು ದೂರಿದರು.

    ಶಿಕ್ಷಕರಲ್ಲಿ ಸಮಯ ಪ್ರಜ್ಞೆ ಇರಬೇಕು. ತಮಗೆ ವೇತನ ಹಾಗೂ ಜೀವನ ನೀಡಿರುವುದೇ ಶಾಲೆಗಳು ಎಂಬುದನ್ನು ಅರಿತು ಬದ್ಧತೆಯಿಂದ ಕೆಲಸ ಮಾಡಬೇಕು. ಶಾಲೆಗಳಲ್ಲಿ ಮೊಬೈಲ್ ಹಾವಳಿಗೆ ಬ್ರೇಕ್ ಹಾಕಿ, ಮಕ್ಕಳಲ್ಲಿ ನೈತಿಕ ಮೌಲ್ಯಗಳ ಬೆಳವಣಿಗೆ, ಸಂಸ್ಕಾರ, ದೇಶಭಕ್ತಿ ಜತೆಗೆ ಗುಣಮಟ್ಟ ಶಿಕ್ಷಣ ನೀಡಲು ಒತ್ತು ಕೊಡಬೇಕು ಎಂದು ಸಲಹೆ ನೀಡಿದರು.

    ತಾಲೂಕಿನ ಶೈಕ್ಷಣಿಕ ಕ್ಷೇತ್ರದ ಅಭಿವೃದ್ಧಿಗೆ 1.10 ಕೋಟಿ ರೂ. ಅನುದಾನ ನೀಡಿದ್ದು, ಸರ್ಕಾರಿ ಶಾಲೆಗಳಿಗೆ ಅಗತ್ಯ ಸೌಕರ್ಯ, ಶಿಥಿಲ ಕೊಠಡಿಗಳ ದುರಸ್ತಿಗೆ ವಿಶೇಷ ಅನುದಾನ ಬಿಡುಗಡೆಗೆ ಒತ್ತಾಯಿಸಿ ಮುಂಬರುವ ಅಧಿವೇಶನದಲ್ಲಿ ಸರ್ಕಾರದ ಗಮನ ಸೆಳೆಯಲಾಗುವುದು ಎಂದರು.

    ಬಿಇಒ ರಾಮಯ್ಯ ಮಾತನಾಡಿ, ಮಕ್ಕಳ ಕಲಿಕಾ ಗುಣಮಟ್ಟ, ಫಲಿತಾಂಶ ಸುಧಾರಣೆ, ಪರಿಣಾಮಕಾರಿ ಬೋಧನೆ, ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಹೆಚ್ಚಳಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

    ಬಸವರಾಜ್ ವಿದ್ಯಾಸಂಸ್ಥೆ ಅಧ್ಯಕ್ಷ ಸಚಿನ್, ಅಕ್ಷರ ದಾಸೋಹ ಅಧಿಕಾರಿ ನಾಗರಾಜ್ ಆಚಾರ್, ಮೋಹನ್, ರಂಗಸ್ವಾಮಿ, ಮಂಜುನಾಥ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts